ಸಪ್ತಪದಿ ತುಳಿಯಲು 80 ಕಿಲೋಮೀಟರ್ ನಡೆದ ಯುವತಿ!

Update: 2020-05-23 03:48 GMT

ಕಾನ್ಪುರ, ಮೇ 23: ನೋವೆಲ್ ಕೊರೋನ ವೈರಸ್ ಸೋಂಕು ದೇಶದಲ್ಲಿ ಸಾವಿರಾರು ವಿವಾಹ ಮುಂದೂಡಲು ಕಾರಣವಾಗಿರಬಹುದು. ಆದರೆ 19 ವರ್ಷದ ಯುವತಿಯೊಬ್ಬಳು ಛಲ ಬಿಡದೇ ವರನ ಮನೆಗೆ 80 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಹಸೆಮಣೆ ಏರಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.

ಲಾಕ್‌ಡೌನ್ ವಿಸ್ತರಣೆ ಕಾರಣದಿಂದಾಗಿ ಎರಡನೇ ಬಾರಿಗೆ ವಿವಾಹ ಮುಂದೂಡುವ ಪೋಷಕರ ನಿರ್ಧಾರವನ್ನು ಧಿಕ್ಕರಿಸಿದ ಕಾನ್ಪುರ ದೇಹತ್‌ನ ಮಂಗಲಪುರದ ಯುವತಿ ಗೋಲ್ಡಿ, ಕನೌಜ್ ಜಿಲ್ಲೆಯ ಬೈಸಾಪುರ ಗ್ರಾಮದ ವೀರೇಂದ್ರ ಕುಮಾರ್ ರಾಠೋಡ್ (23) ಅವರ ಮನೆಗೆ ನಡೆದುಕೊಂಡೇ ಹೋಗಿ ಹಾರ ವಿನಿಮಯ ಮಾಡಿಕೊಂಡರು.

ಯುವತಿ ದಿಢೀರನೇ ಪ್ರತ್ಯಕ್ಷವಾದದ್ದು ವರನ ಮನೆಯವರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿತು. ಆದರೆ ಆಕೆಯನ್ನು ಸ್ವಾಗತಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ವಿವಾಹಕ್ಕೆ ವ್ಯವಸ್ಥೆ ಮಾಡಿದರು. ಮೇ ನಾಲ್ಕರಂದು ನಮ್ಮ ವಿವಾಹ ನಿಗದಿಯಾಗಿದ್ದು, ಲಾಕ್‌ಡೌನ್ ಕಾರಣದಿಂದ ಮುಂದೂಡಲ್ಪಟ್ಟಿತು. ಲಾಕ್‌ಡೌನ್ 3.0 ಮೇ 17ರಂದು ಮುಗಿದ ಬಳಿಕ ಅವಕಾಶವಾಗಬಹುದು ಎಂದುಕೊಂಡಿದ್ದೆವು. ಆದರೆ ಮಾಸಾಂತ್ಯದ ವರೆಗೂ ಲಾಕ್‌ಡೌನ್ ಮುಂದುವರಿದಿದೆ. ನಮ್ಮ ಪೋಷಕರು ಮತ್ತೆ ಮದುವೆ ಮುಂದೂಡಲು ನಿರ್ಧರಿಸಿದರು. ಆದರೆ ನಮ್ಮ ವಿವಾಹಕ್ಕೆ ಸಾಂಕ್ರಾಮಿಕ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿ ಯಾರಿಗೂ ಮಾಹಿತಿ ನೀಡದೇ ಮನೆ ಬಿಟ್ಟುಬಂದೆ ಎಂದು ಗೋಲ್ಡಿ ವಿವರಿಸಿದರು.

ಬುಧವಾರ ನಸುಕಿನಲ್ಲೇ ಮನೆಬಿಟ್ಟ ಯುವತಿ ಮುಸ್ಸಂಜೆ ವೇಳೆಗೆ ವರನ ಮನೆ ತಲುಪಿದರು. ಗುರುವಾರ ವಿವಾಹ ನೆರವೇರಿತು. ಬಟ್ಟೆ ಇದ್ದ ಪುಟ್ಟ ಕೈಚೀಲದೊಂದಿಗೆ 12 ಗಂಟೆ ನಿರಂತರವಾಗಿ ಆಹಾರವೂ ಇಲ್ಲದೇ ನಡೆದು ಯುವತಿ ವರನ ಮನೆ ಸೇರಿದಳು. ಕೇವಲ ನೀರಷ್ಟೇ ಕುಡಿದಿದ್ದೆ ಎಂದು ಹೇಳುತ್ತಾರೆ. ಮಾಸ್ಕ್ ಧರಿಸಿಕೊಂಡು ವಿವಾಹ ಬಂಧನಕ್ಕೊಳಗಾದ ಈ ದಂಪತಿಯ ಮದುವೆ ಫೋಟೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News