ವಲಸಿಗ ಕಾರ್ಮಿಕರ ಮೇಲೆ ಸೋಂಕುನಿವಾರಕ ಸಿಂಪಡಿಸಿದ ದಿಲ್ಲಿ ಮಹಾನಗರ ಪಾಲಿಕೆ!

Update: 2020-05-23 05:11 GMT

ಹೊಸದಿಲ್ಲಿ, ಮೇ 23:ದಕ್ಷಿಣ ದಿಲ್ಲಿಯ ಲಾಜ್‌ಪತ್‌ನಗರದಲ್ಲಿ ಕೊರೋನವೈರಸ್ ಸ್ಕ್ರೀನಿಂಗ್‌ಗಾಗಿ ಕಾಯುತ್ತಿದ್ದ ವಲಸಿಗ ಕಾರ್ಮಿಕರ ಗುಂಪಿನ ಮೇಲೆ ದಿಲ್ಲಿ ಮಹಾನಗರ ಪಾಲಿಕೆ ಸೋಂಕುನಿವಾರಕವನ್ನು ಸಿಂಪಡನೆ ಮಾಡಿದೆ. ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಶನ್(ಎಸ್‌ಡಿಎಂಸಿ)ಸಿಂಪಡನೆ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕ ಯಂತ್ರ ಒತ್ತಡವನ್ನು ನಿಯಂತ್ರಿಸಲಾಗದೆ ಈ ತಪ್ಪು ನಡೆದಿದೆ ಎಂದು ಹೇಳಿದೆ.

ಈ ಬಗ್ಗೆ ವಲಸೆ ಕಾರ್ಮಿಕರಲ್ಲಿ ಎಸ್‌ಡಿಎಂಸಿ ಅಧಿಕಾರಿಗಳು ಕ್ಷಮೆ ಕೋರಿದ್ದಾರೆ.

ನೂರಾರು ಕಾರ್ಮಿಕರು ವಿಶೇಷ ಶ್ರಮಿಕ್ ರೈಲನ್ನು ಏರುವ ಮೊದಲು ಲಾಜ್‌ಪತ್ ನಗರದ ಶಾಲೆಯ ಹೊರಗೆ ಕೊರೋನ ವೈರಸ್‌ಗೆ ಸ್ಕ್ರೀನಿಂಗ್‌ಗ ಒಳಗಾಗಲು ಒಂದೆಡೆ ಜಮಾಯಿಸಿದ್ದರು.

ಕಾರ್ಮಿಕರ ಮೇಲೆ ಸೋಂಕುನಿವಾರಕವನ್ನು ಸಿಂಪಡನೆ ಮಾಡುವ ವೀಡಿಯೊವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೈರ್ಮಲ್ಯ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕನೊಬ್ಬ ಕೆಲವು ವಲಸಿಗರ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಶಾಲೆಯು ವಸತಿ ಕಾಲನಿಯ ಸಮೀಪವಿದ್ದ ಕಾರಣ ಕಾಂಪೌಂಡ್ ಹಾಗೂ ರಸ್ತೆಗಳಲ್ಲಿ ಸೋಂಕುನಿವಾರಕ ದ್ರಾವಣ ಸಿಂಪಡಿಸಬೇಕೆಂದು ನಿವಾಸಿಗರು ಬೇಡಿಕೆ ಸಲ್ಲಿಸಿದ್ದರು. ಯಂತ್ರದ ಒತ್ತಡದಿಂದ ಸಿಂಪಡನೆಯ ದಿಕ್ಕುಬದಲಾಗಿತ್ತು ಎಂದು ಎಸ್‌ಡಿಎಂಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News