ರಾತ್ರಿ ವೇಳೆ ಯಮುನಾ ನದಿ ದಾಟಿ ಊರತ್ತ ಹೊರಟ ನೂರಾರು ವಲಸೆ ಕಾರ್ಮಿಕರು

Update: 2020-05-23 06:40 GMT

ಹೊಸದಿಲ್ಲಿ,ಮೇ 23:ಬಿಹಾರದಲ್ಲಿರುವ ತಮ್ಮ ಮನೆಯನ್ನು ತಲುಪಲು ಹರ್ಯಾಣದಿಂದ ಹೊರಟ ನೂರಾರು ಕಾರ್ಮಿಕರು ರಾತ್ರಿ ವೇಳೆ ಯಮುನಾ ನದಿಯನ್ನು ಕಾಲ್ನಡಿಗೆಯಲ್ಲೆ ದಾಟಿದ್ದಾರೆ. ಕಾರ್ಮಿಕರಲ್ಲಿ ಕೆಲವರು ತಲೆ ಮೇಲೆ ಬ್ಯಾಗ್ಗಳನ್ನು ಹೊತ್ತು ಸಾಗುತ್ತಿದ್ದರು.

ನದಿಯು ಉತ್ತರಪ್ರದೇಶ ಹಾಗೂ ಹರ್ಯಾಣದ ಗಡಿಭಾಗದಲ್ಲಿ ಹರಿಯುತ್ತಿದೆ.ಬೇಸಿಗೆಯ ಕೊನೆಯಲ್ಲಿ ನದಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಕಾರ್ಮಿಕರು ನದಿಯನ್ನು ದಾಟಿದ್ದಾರೆ. ಹರ್ಯಾಣದ ಯಮುನಾನಗರದಿಂದ ಉತ್ತರಪ್ರದೇಶದ ಸಹರಾನ್ಪುರವನ್ನು ತಲುಪಿರುವ ಕಾರ್ಮಿಕರು ಇದೀಗ ಬಿಹಾರದತ್ತ ಮುಖ ಮಾಡಿದ್ದಾರೆ.

 ಕೇಂದ್ರ ಸರಕಾರವು ಕಾರ್ಮಿಕರು ತಮ್ಮ ಊರಿಗೆ ತಲುಪಲು ವಿಶೇಷ ಶ್ರಮಿಕ್ ರೈಲು ವ್ಯವಸ್ಥೆ ಮಾಡಿದ್ದರೂ ನೂರಾರು ಕಾರ್ಮಿಕರು ರೈಲಿನ ಮೊರೆ ಹೋಗದೆ ನಡೆದುಕೊಂಡೇ ತಮ್ಮೂರು ತಲುಪುವ ಪ್ರಯತ್ನ ಮುಂದುವರಿಸಿದ್ದಾರೆ.

ಹಗಲು ಹೊತ್ತಿನ ಸೆಖೆಯನ್ನು ತಪ್ಪಿಸಿಕೊಳ್ಳಲು,ಪೊಲೀಸರ ಲಾಠಿಏಟಿನಿಂದ ಪಾರಾಗಲು ನಾವು ರಾತ್ರಿ ವೇಳೆ ನದಿ ದಾಟುವ ಸಾಹಸಕ್ಕೆ ಕೈಹಾಕಿದೆವು ಎಂದು ವಲಸಿಗ ಕಾರ್ಮಿಕನೊಬ್ಬ ಹೇಳಿದ್ದಾನೆ.ಕಳೆದ ಕೆಲವು ದಿನಗಳಲ್ಲಿ ಸುಮಾರು 20 ಕಾರ್ಮಿಕರು ಕಾಲ್ನಡಿಗೆಯಲ್ಲೇ ನದಿಯನ್ನು ದಾಟಿದ್ದಾರೆ.

  "ನಮ್ಮ ಬಳಿ ಹಣವಿಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋದರೆ ಪೊಲೀಸರು ನಮಗೆ ಲಾಠಿಯಿಂದ ಹೊಡೆಯುತ್ತಿದ್ದಾರೆ.ಬಳಿಕ ಶಾಲೆಯಲ್ಲಿ ಕೂಡಿ ಹಾಕಿ ನಮಗೆ ತಿನ್ನಲು ಏನು ಕೊಡುವುದಿಲ್ಲ.ಹೀಗಾಗಿ ನಾವು ಪೊಲೀಸರ ಕಣ್ಣುತಪ್ಪಿಸಿ ರಾತ್ರಿ ವೇಳೆ ನದಿ ದಾಟುತ್ತಿದ್ದೇವೆ.ನಾವು ಬಿಹಾರದ ತನಕವೂ ನಡೆದುಕೊಂಡೇ ಹೋಗುವೆವು'' ಎಂದು ಯಮುನಾ ನಗರದಲ್ಲಿ ಪ್ಲೇವುಡ್ ಫ್ಯಾಕ್ಟರಿನಲ್ಲಿ ಕೆಲಸ ಮಾಡುತ್ತಿದ್ದ 16ರ ಹರೆಯದ ರಾಹುಲ್ ಹೇಳಿದ್ದಾನೆ.

ಅಂಬಾಲದಲ್ಲಿ ಕೆಲಸ ಮಾಡುತ್ತಿದ್ದ 24ರ ವಯಸ್ಸಿನ ರಾಕೇಶ್,"ತನ್ನನ್ನು ಮಾಲಕ ಕೆಲಸದಿಂದ ತೆಗೆದುಹಾಕಿದ್ದ.ತನ್ನಲ್ಲಿ ಹಣವಿಲ್ಲ.ಯಮುನಾನಗರದ ಆಶ್ರಯಧಾಮದಲ್ಲಿದ್ದೆ.ಆದರೆ ಅಲ್ಲಿ ಊಟಕ್ಕೆ ಗತಿ ಇರಲಿಲ್ಲ.ಹೀಗಾಗಿ ನಡೆದುಕೊಂಡೇ ಮನೆಯತ್ತ ತೆರಳಲು ನಿರ್ಧರಿಸಿದೆ'' ಎಂದರು.

ವಲಸಿಗ ಕಾರ್ಮಿಕರು ಬರುತ್ತಿರುವ ಯಮುನಾ ನದಿದಂಡೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿಲ್ಲ. ನಮ್ಮ ಬಳಿ ಆಹಾರವಿಲ್ಲ. ಎಲ್ಲರೂ ಹಸಿದಿದ್ದೇವೆ ಎಂದು ಹೆಚ್ಚಿನ ಕಾರ್ಮಿಕರು ಹೇಳುತ್ತಿದ್ದಾರೆ.ನಾವು ಕಾರ್ಮಿಕರಿಗೆ ಆಹಾರ ಹಾಗೂ ನೀರು ಕೊಟ್ಟಿದ್ದೇವೆ ಎಂದು ಕೆಲವು ಗ್ರಾಮಸ್ಥರು ಹೇಳುತ್ತಾರೆ.ವಲಸಿಗ ಕಾರ್ಮಿಕರ ಓಡಾಟದ ಬಗ್ಗೆ ಸಹರಾನ್ಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು,ಕಾರ್ಮಿಕರಿಗೆ ಬಿಹಾರ ತಲುಪಲು ನಾವು ಸಾರಿಗೆ ವ್ಯವಸ್ಥೆ ಮಾಡುತ್ತೇವೆ ಜಿಲ್ಲಾಡಳಿತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News