ಮಲೇರಿಯಾ ಔಷಧಿಗಳಿಂದ ಕೊರೋನ ರೋಗಿಗಳಲ್ಲಿ ಮರಣ ಪ್ರಮಾಣ ಅಧಿಕ: ಹೊಸ ಅಧ್ಯಯನ ವರದಿ

Update: 2020-05-23 10:20 GMT

ಹೊಸದಿಲ್ಲಿ: ಮಲೇರಿಯಾ ಚಿಕಿತ್ಸೆಗೆ ನೀಡಲಾಗುವ ಔಷಧಿಗಳಾದ ಕ್ಲೊರೋಕ್ವಿನ್ ಹಾಗೂ ಹೈಡ್ರೋಕ್ಸಿಕ್ಲೊರೋಕ್ವಿನ್  ಕೋವಿಡ್-19 ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಉಪಯುಕ್ತವಲ್ಲ. ಬದಲಾಗಿ ಈ ಔಷಧಿಯನ್ನು ನೀಡಲಾದ ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಅಧಿಕಗೊಳ್ಳುತ್ತವೆ ಎಂದು  ಸಮಗ್ರ ವೈಜ್ಞಾನಿಕ ಅಧ್ಯಯನವೊಂದರಿಂದ ತಿಳಿದು ಬಂದಿದೆ.

‘ದಿ ಲ್ಯಾನ್ಸೆಟ್’  ಪತ್ರಿಕೆಯಲ್ಲಿ ಈ ಅಧ್ಯಯನ ವಿವರಗಳು ಪ್ರಕಟಗೊಂಡಿದ್ದು, ಗಂಭೀರ ಕೋವಿಡ್-19 ಪ್ರಕರಣಗಳಲ್ಲಿ ಈ ಎರಡು ಮಲೇರಿಯಾ ಔಷಧಿಗಳನ್ನು ನೀಡಬಹುದು ಎಂಬ ಐಸಿಎಂಆರ್ ಸಲಹೆಗೆ ತದ್ವಿರುದ್ಧವಾದುದನ್ನೇ ಈ ಅಧ್ಯಯನ ಹೇಳುತ್ತಿದೆ.

ಈ ಎರಡು ಮಲೇರಿಯಾ ಔಷಧಿಗಳನ್ನು ಮಾತ್ರ ಅಥವಾ ಅಝಿತ್ರೋಮೈಸಿನ್  ಔಷಧದ ಜೊತೆಗೆ ಅವುಗಳನ್ನು ನೀಡಿದ ರೋಗಿಗಳಲ್ಲಿ ಮರಣ ಪ್ರಮಾಣ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಅಧಿಕವಾಗಿರುವುದನ್ನು ಅಧ್ಯಯನ ತಂಡ ಗಮನಿಸಿದೆ.

ಈ ಅಧ್ಯಯನಕ್ಕಾಗಿ ಡಿಸೆಂಬರ್ 30, 2019 ಹಾಗೂ ಎಪ್ರಿಲ್ 14, 2020 ನಡುವೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ 96,032 ರೋಗಿಗಳ ಮಾಹಿತಿಯನ್ನು  ಸಂಶೋಧಕರು ಪರಿಶೀಲಿಸಿದ್ದರು.

ಚಿಕಿತ್ಸೆ ವೇಳೆ ಮೇಲಿನ ಔಷಧಿಗಳನ್ನು ಪಡೆಯದ ರೋಗಿಗಳಲ್ಲಿ ಮರಣ ಪ್ರಮಾಣ ಶೇ 9.3 ಆಗಿದ್ದರೆ ಈ ಔಷಧಿ ಪಡೆದವರಲ್ಲಿ ಈ ಪ್ರಮಾಣ ಶೇ 16ರಿಂದ ಶೇ 24ರಷ್ಟಾಗಿತ್ತು. ಇತರ ಕ್ಲಿನಿಕಲ್ ಅಂಶಗಳನ್ನೂ ಪರಿಗಣಿಸಿದ ನಂತರ ಈ ಔಷಧಿಗಳನ್ನು ಪಡೆದ ರೋಗಿಗಳಲ್ಲಿನ ಮರಣ ಪ್ರಮಾಣವನ್ನು ಶೇ 12.4ರಿಂದ ಶೇ 13.4 ಎಂದು ಅಂದಾಜಿಸಲಾಗಿದೆ.

“ಈ ಮಲೇರಿಯಾ ಔಷಧಿಗಳಿಂದ ಚಿಕಿತ್ಸೆ ಪಡೆದ ಕೋವಿಡ್-19 ರೋಗಿಗಳು ಹೆಚ್ಚು ಗುಣಮುಖರಾಗುವ ಸಂಭಾವ್ಯತೆ ಕಡಿಮೆ'' ಎಂದು ಸಂಶೋಧನಾ ತಂಡದ ಭಾಗವಾಗಿದ್ದ ಝೂರಿಚ್‍ನ ಯುನಿವರ್ಸಿಟಿ ಆಸ್ಪತ್ರೆಯ ಹಾರ್ಟ್ ಸೆಂಟರ್ ನಿರ್ದೇಶಕ ಫ್ರಾಂಕ್ ರುಸ್ಚಿಟ್ಝಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News