ಭಾರತ ಪ್ರವೇಶಿಸಿದ ಮರುಭೂಮಿ ಮಿಡತೆಗಳು: ಜೈಪುರದಲ್ಲಿ 5 ಲಕ್ಷ ಹೆಕ್ಟೇರ್ ಬೆಳೆ ನಾಶ

Update: 2020-05-25 15:21 GMT

ಜೈಪುರ: ದೇಶದಲ್ಲಿ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೆಳೆಗಳಿಗೆ ಮಿಡತೆ ಕಾಟ ಬಾಧಿಸಿದ್ದು, ಜೈಪುರದಲ್ಲೇ ಸುಮಾರು ಐದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ.

ಜೈಪುರ ನಿವಾಸಿಗಳು ಸೋಮವಾರ ಲಕ್ಷಾಂತರ ಮಿಡತೆಗಳು ನಗರದಲ್ಲಿ ಹಾರಾಡುವುದನ್ನು ಕಂಡರು. ಪಾಕಿಸ್ತಾನದಲ್ಲಿ ವ್ಯಾಪಕ ಬೆಳೆ ಹಾನಿಗೆ ಕಾರಣವಾಗಿರುವ ಈ ಮಿಡತೆಗಳು ಭಾರತದ ಹಲವು ರಾಜ್ಯಗಳಲ್ಲೂ ಹಾನಿಯುಂಟು ಮಾಡಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದೊಡ್ಡ ಪ್ರಮಾಣದ ಬೆಳೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ವರ್ಷಾರಂಭದಲ್ಲಿ ಇದೇ ಕಾರಣಕ್ಕೆ ತುರ್ತು ಸ್ಥಿತಿ ಘೋಷಣೆ ಮಾಡಿತ್ತು.

ಇದೀಗ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲೂ ವಿವಿಧ ಬೆಳೆಗಳಿಗೆ ಮಿಡತೆಕಾಟ ವ್ಯಾಪಕವಾಗಿ ಬಾಧೆ ವ್ಯಾಪಿಸಿದ್ದು, ಸಾವಿರಾರು ಕುಟುಂಬಗಳ ಜೀವನಾಧಾರಕ್ಕೆ ಧಕ್ಕೆ ಉಂಟಾಗಿದೆ.

ಪೂರ್ವ ಹಾಗೂ ಪಶ್ಚಿಮ ರಾಜಸ್ಥಾನದಲ್ಲಿ ವ್ಯಾಪಕ ಬೆಳೆಹಾನಿ ಸಂಭವಿಸಿದ್ದು, ಕಳೆದ ಮೂರು ತಿಂಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಶ್ರೀಗಂಗಾನಗರ, ಬಿಕನೇರ್ ಮತ್ತು ಬರ್ಮಾರ್ ಜಿಲ್ಲೆಗಳಲ್ಲಿ ಹಿಂಡು ಹಿಂಡಾಗಿ ಹೊಗಲಳಿಗೆ ದಾಳಿ ಇಟ್ಟಿರುವ ಮಿಡತೆಗಳು ಹಿಂಗಾರು ಬೆಳೆಗಳನ್ನು ನಾಶಪಡಿಸಿವೆ.

ಕೃಷಿ ಇಲಾಖೆ ಸಮರೋಪಾದಿಯಲ್ಲಿ ಮಿಡತೆ ನಾಶಪಡಿಸುವ ಕಾರ್ಯಾಚರಣೆ ಕೈಗೊಂಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಹಲವು ಕಡೆಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಿದರೂ ಪ್ರಯೋಜನವಾಗಿಲ್ಲ ಎಂದು ಸಣ್ಣ ರೈತ ಜಸಕರಣ್ ಸಿಂಗ್ ಹೇಳುತ್ತಾರೆ.

ಉ.ಪ್ರದೇಶದ 17 ಜಿಲ್ಲೆಗಳಲ್ಲಿಯ ಬೆಳೆ ನಾಶಗೊಳ್ಳುವ ಭೀತಿ

ಮಿಡತೆಗಳ ಬೃಹತ್ ಸಮೂಹವೊಂದು ಹಲವಾರು ಜಿಲ್ಲೆಗಳಲ್ಲಿಯ ತೋಟಗದ್ದೆಗಳನ್ನು ಆಕ್ರಮಿಸಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವು ಸೋಮವಾರ ರಾಜ್ಯವ್ಯಾಪಿ ಕಟ್ಟೆಚ್ಚರವನ್ನು ಘೋಷಿಸಿದೆ. ಉ.ಪ್ರದೇಶವು ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಬಳಿಕ ಬೆಳೆಗಳನ್ನು ತಿನ್ನುವ ಈ ಮಿಡತೆಗಳ ದಾಳಿಗೆ ಗುರಿಯಾಗಿರುವ ಮೂರನೇ ರಾಜ್ಯವಾಗಿದೆ.

ಆಗ್ರಾ, ಅಲಿಗಡ, ಮಥುರಾ ಸೇರಿದಂತೆ 17 ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಪೈರುಗಳಿಗೆ ಮಿಡತೆಗಳು ಹಾನಿಯನ್ನುಂಟು ಮಾಡುತ್ತಿವೆ ಎಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ಮಿಡತೆಗಳ ದಂಡು ಸುಮಾರು ಎರಡೂವರೆಯಿಂದ ಮೂರು ಕಿ.ಮೀ.ಉದ್ದವಿದೆ. ಮಿಡತೆಗಳನ್ನು ನಿಯಂತ್ರಿಸಲು ರಾಜಸ್ಥಾನದ ಕೋಟದಿಂದ ತಂಡವೊಂದು ಆಗಮಿಸಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದರು.

ಬೆಳೆಗಳನ್ನು ತಿನ್ನುವ ಈ ಮಿಡತೆಗಳ ಹಿಂಡು ಎಪ್ರಿಲ್ ಎರಡನೇ ವಾರದಲ್ಲಿ ಪಾಕಿಸ್ತಾನದಿಂದ ಮೊದಲು ರಾಜಸ್ಥಾನವನ್ನು ಪ್ರವೇಶಿಸಿತ್ತು. ಅದು ರಾಜಸ್ಥಾನದ 18 ಮತ್ತು ಮಧ್ಯಪ್ರದೇಶದ 12 ಜಿಲ್ಲೆಗಳಲ್ಲಿ ಬೆಳೆಗಳನ್ನು ನಾಶಮಾಡಿದೆ. ಕಳೆದ ವರ್ಷ ಮಿಡತೆಗಳ ದಂಡು ಉತ್ತರ ಗುಜರಾತಿನಲ್ಲಿ ಹಾವಳಿಯನ್ನು ನಡೆಸಿತ್ತು.

ಮಿಡತೆಗಳನ್ನು ದೂರವಿರಿಸಲು ಆಗ್ರಾ ಜಿಲ್ಲಾಡಳಿತವು ರಾಸಾಯನಿಕ ಸಿಂಪಡಣೆ ಉಪಕರಣಗಳನ್ನು ಅಳವಡಿಸಿರುವ 204 ಟ್ರಾಕ್ಟರ್‌ಗಳನ್ನು ನಿಯೋಜಿಸಿದೆ. ಝಾನ್ಸಿ ಜಿಲ್ಲಾಡಳಿತವು ರಾಸಾಯನಿಕಗಳೊಂದಿಗೆ ಸಿದ್ಧವಾಗಿರುವಂತೆ ಅಗ್ನಿಶಾಮಕ ದಳಕ್ಕೆ ನಿರ್ದೇಶ ನೀಡಿದೆ. ಮಿಡತೆಯ ಹಿಂಡಿನ ಚಲನವಲನದ ಕುರಿತು ಮಾಹಿತಿ ನೀಡುವಂತೆ ರೈತರು ಮತ್ತು ಜನಸಾಮಾನ್ಯರಿಗೆ ತಿಳಿಸಲಾಗಿದೆ.

ಉತ್ತರ ಪ್ರದೇಶಕ್ಕೆ ಮೊದಲು ಮಧ್ಯಪ್ರದೇಶವು ಕಳೆದ 27 ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಮಿಡತೆ ದಾಳಿಗೆ ತುತ್ತಾಗಿತ್ತು. ನೀಮಚ್ ಜಿಲ್ಲೆಯಿಂದ ರಾಜ್ಯವನ್ನು ಪ್ರವೇಶಿಸಿದ್ದ ಈ ಮರುಭೂಮಿ ಮಿಡತೆಗಳು ಬಳಿಕ ಮಾಲ್ವಾ ನಿಮರ್‌ನ ಭಾಗಗಳಿಗೆ ಪ್ರಯಾಣಿಸಿದ್ದವು. ಈ ಮಿಡತೆಗಳ ಹಿಂಡು ಈಗ ಭೋಪಾಲ ಸಮೀಪದಲ್ಲಿದೆ. ಮಿಡತೆಗಳನ್ನು ಓಡಿಸಲು ಭಾರೀ ಶಬ್ದಗಳನ್ನು ಮಾಡುವಂತೆ ತೋಟಗಾರಿಕೆ ಇಲಾಖೆಯು ರೈತರಿಗೆ ಸೂಚಿಸಿದೆ. ರಾಸಾಯನಿಕಗಳನ್ನು ಬಳಸಿ ಈ ಮಿಡತೆಗಳ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರಕಾರದ ನಾಲ್ಕು ತಂಡಗಳು ರಾಜ್ಯ ಕೃಷಿ ಇಲಾಖೆಗೆ ನೆರವಾಗುತ್ತಿವೆ.

ಮಿಡತೆಗಳ ಈ ದಾಳಿಯಿಂದ ದೇಶದ ಆಹಾರ ಭದ್ರತೆಯು ಅಪಾಯಕ್ಕೆ ಸಿಲುಕಿದೆ. ಈ ಕೀಟಗಳು ಬೆಳೆದು ನಿಂತಿರುವ ಸುಮಾರು 8,000 ಕೋ.ರೂ. ಮೌಲ್ಯದ ಹೆಸರು ಬೆಳೆಯನ್ನು ನಾಶಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಹಣ್ಣುಗಳು ಮತ್ತು ತರಕಾರಿಗಳ ನರ್ಸರಿಗಳು,ಸಾವಿರಾರು ಕೋ.ರೂ.ವೌಲ್ಯದ ಹತ್ತಿ ಮತ್ತು ಮೆಣಸಿನ ಬೆಳೆಗಳೂ ಮಿಡತೆಗಳಿಂದ ಅಪಾಯವನ್ನು ಎದುರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News