ಜೂನ್ ಅಂತ್ಯದೊಳಗೆ ನೂತನ ಪ್ರವಾಸೋದ್ಯಮ ನೀತಿ ಜಾರಿ: ಸಚಿವ ಸಿ.ಟಿ.ರವಿ

Update: 2020-05-26 12:17 GMT

ಚಿಕ್ಕಮಗಳೂರು, ಮೇ 26: ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರವಾಸೋದ್ಯಮ ನೀತಿಗಳಿಗೆ ಪೂರಕವಾಗಿ ಜಿಲ್ಲೆಯಲ್ಲಿಯೂ ನೂತನ ಪ್ರವಾಸೋದ್ಯಮ ನೀತಿಯನ್ನು ಜೂನ್ ಅಂತ್ಯದೊಳಗೆ ಜಾರಿಗೆ ತರಲಾಗುವುದು. ಈ ಸಂಬಂಧ ಜೂ.10ರೊಳಗೆ ಸಾರ್ವಜನಿಕರ ಸಭೆ ನಡೆಸಿ ಸಮಾಲೋಚನೆ ನಡೆಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರವಾಸೋದ್ಯಮ ನೀತಿ ಸಂಬಂಧ ಸಾರ್ವಜನಿಕರೊಂದಿಗಿನ ಸಮಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾರಿಗೆ ತರಲು ಮುಂದಾಗಿರುವ ಪ್ರವಾಸೋದ್ಯಮ ನೀತಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಗಳಿಗೆ ಪೂರಕವಾಗಿ ರೂಪಿಸಬೇಕಿದೆ. ನಾವು ನೀತಿ ರೂಪಿಸಲು ಅವಕಾಶವಿದೆಯೇ ಹೊರತು ಕಾನೂನು ಮಾಡಲು ಸಾಧ್ಯವಿಲ್ಲ, ಜಿಲ್ಲೆಗೆ ಸಂಬಂಧಿಸಿದ ಪ್ರವಾಸೋದ್ಯಮ ನೀತಿ ಸಂಬಂಧ ಜೂನ್ 10ರೊಳಗೆ ಮತ್ತೊಮ್ಮೆ ಸಭೆ ನಡೆಸಿ ಸಾರ್ವಜನಿಕರಿಂದ ಬರುವ ಸಲಹೆಗಳನ್ನು ಕ್ರೂಢೀಕರಿಸಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದರು.

ಸಭೆಯಲ್ಲಿ ಮಾತನಾಡಿದ ಪರಿಸರವಾದಿ ಶ್ರೀದೇವ್, ಜಿಲ್ಲೆಯಲ್ಲಿ ಟ್ರಕಿಂಗ್ ಹಾಗೂ ಜಲಸಾಹಸ ಕ್ರೀಡೆ ಅಭಿವೃದ್ಧಿಪಡಿಸಲು ವಿಫುಲವಾದ ಅವಕಾಶವಿದೆ. ಪರಿಸರದಲ್ಲಿ ಜನ್ಮ ತಾಳಿರುವ ಜಲಮೂಲ ಕಲುಷಿತವಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಜವಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಹೋಮ್ ಸ್ಟೇಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು. 15ವರ್ಷ ಜಮೀನು ಮಾಲಕತ್ವ ಹೊಂದಿದವರಿಗೆ ಮಾತ್ರ ಅವಕಾಶ ನೀಡಬೇಕೆಂದು ಅಭಿಪ್ರಾಯಿಸಿದರು.

ಪರಿಸರ ಚಿಂತಕ ಸಿ.ವಿ.ಭರತ್ ಮಾತನಾಡಿ, ಜಿಲ್ಲೆಯಲ್ಲಿರುವ ಜಲಾಶಯಗಳ ಹಿನ್ನೀರಿನಲ್ಲಿ ಜಲಸಹಾಸ ಕ್ರೀಡೆಗಳಿಗೆ ಅವಕಾಶ ಮಾಡಿಕೊಡಬೇಕು. ಅಲ್ಲಲ್ಲಿ ತಲೆಎತ್ತಿರುವ ಹೋಮ್‍ಸ್ಟೇಗಳಿಗೆ ಕಡಿವಾಣ ಹಾಕಬೇಕು. ಜಿಲ್ಲೆ ಕಾಫಿ ಬೆಳೆಗೆ ಹೆಸರುವಾಸಿಯಾಗಿದ್ದು, ಕಾಫಿ ಟೂರಿಸಂ ರೂಪಿಸುವುದರಿಂದ ಸ್ಥಳೀಯವಾಗಿ ಕಾಫಿ ಬ್ರಾಂಡ್ ಬೆಳೆಸಲು ಸಾಧ್ಯವಾಗುತ್ತದೆ. ಜಿಲ್ಲೆಯ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಒತ್ತುನೀಡಬೇಕು. ಬಯಲುಸೀಮೆಯಲ್ಲಿರುವ ಬಾಸೂರು ಕಾವಲು ಕೃಷ್ಣಮೃಗ ಮತ್ತು ತೋಳಗಳಿಗೆ ಹೆಸರುವಾಸಿಯಾಗಿದ್ದು ಯುಕೋ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಬೇಕು. ಜನಸ್ನೇಹಿ ಜಿಲ್ಲಾ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಬೇಕೆಂದು ತಿಳಿಸಿದರು. 

ಪ್ರದೀಪ್‍ಗೌಡ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಬೇಕು. ಪ್ರವಾಸಿ ಸ್ಥಳಗಳಿಗೆ ಕರೆದ್ಯೊಯುವ ಜೀಪ್ ಮಾಲಕರು ಪ್ರವಾಸಿಗರನ್ನು ಸುಲಿಗೆ ಮಾಡುತ್ತಿದ್ದು, ಮೊದಲು ಇದಕ್ಕೆ ಕಡಿವಾಣ ಹಾಕಬೇಕು. ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿ ಪ್ರವಾಸಿಗರು ಪ್ಲಾಸ್ಟಿಕ್ ಬಳಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಆನಂದ್‍ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯ ಅನೇಕ ವರ್ಷಗಳ ಇತಿಹಾಸ ಹೊಂದಿದ್ದು, ಇತಿಹಾಸವನ್ನು ಪರಿಚಯಿಸುವ ಕೆಲಸವಾಗಬೇಕು. ಗಿಡಮರಗಳನ್ನು ಬೆಳೆಸುವ ಮೂಲಕ ಚಿಕ್ಕಮಗಳೂರು ನಗರವನ್ನು ಅಲಂಕರಿಸಬೇಕು. ನಗರದಲ್ಲಿ ಕಾಫಿ ಮ್ಯೂಸಿಯಂ ಇದ್ದು ಅದನ್ನು ಅಭಿವೃದ್ಧಿಪಡಿಸಬೇಕು. ವಿದೇಶಿ ಪ್ರವಾಸಿಗರು ಹಾಸನ ಜಿಲ್ಲೆಯ ಬೇಲೂರು, ಹಳೆಬೀಡಿಗೆ ಹಿಂದಿರುಗಿ ವಾಪಾಸ್ ಆಗುತ್ತಿದ್ದಾರೆ. ಅವರಿಗೆ ಜಿಲ್ಲೆಯ ಸಮಗ್ರ ಮಾಹಿತಿ ಸಿಗುವಂತೆ ವಿಮಾನ ನಿಲ್ದಾಣದಂತ ಸೂಕ್ತ ಸ್ಥಳಗಳಲ್ಲಿ ಮಾಹಿತಿ ಸಿಗುವಂತಾಗಬೇಕು. ಜಿಲ್ಲೆಯೂ ಅನೇಕ ಪ್ರವಾಸಿತಾಣಗಳನ್ನು ಹೊಂದಿದ್ದು, ಅವುಗಳ ಪೋಟೋ ತೆಗೆದು ದೊಡ್ಡ ದೊಡ್ಡ ಹೊಟೇಲ್‍ಗಳಲ್ಲಿ ಫೋಟೊ ಪ್ರದರ್ಶಿಸಿದರೇ ಹೆಚ್ಚಿನ ಪ್ರಚಾರ ಸಿಗುವಂತಾಗುತ್ತದೆ ಎಂದ ಅವರು, ಇಡೀ ದೇಶಕ್ಕೆ ಮಾದರಿಯಾದ ಪ್ರವಾಸೋದ್ಯಮ ನೀತಿ ತರುವಂತಾಗಬೇಕು ಎಂದರು. 

ಅಡ್ವೇಚರ್ ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಅಯ್ಯನಕೆರೆ, ಮದಗದ ಕೆರೆಗಳಲ್ಲಿ ಜಲಸಾಹಸ ಕ್ರೀಡೆಗಳಿಗೆ ಅವಕಾಶ ನೀಡಿದಲ್ಲಿ ಬಯಲುಸೀಮೆ ಭಾಗದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರೆ, ಭದ್ರಾ ವೈಡ್‍ಲೈಪ್ ಸಂಘದ ಗಿರೀಶ್, ವೈಲ್ಡ್‍ಲೈಫ್ ಟೂರಿಸಂ, ಜನರಲ್ ಟೂರಿಸಂನಲ್ಲಿ ಸೇರಿಸಬಾರದು, ಸಮಗ್ರ ಮಾಹಿತಿ ಸಿಗುವಂತಿರಬೇಕು. ನೀತಿ ಉಲ್ಲಂಘಿಸಿದಾಗ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತಿರಬೇಕು ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯೆ ಶ್ಯಾಮಲಾ ರಾವ್ ಮಾತನಾಡಿ, ಪ್ರವಾಸಿ ತಾಣಗಳಿಗೆ ಸಾರಿಗೆ ಇಲಾಖೆಯಿಂದ ಮಿನಿಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. 5 ಕೊಠಡಿಗಳಿಗಿಂತ ಹೆಚ್ಚಿನ ಕೊಠಡಿ ಹೊಂದಿರುವ ಹೋಮ್‍ಸ್ಟೇಗಳನ್ನು ಲಾಡ್ಜ್ ನೀತಿಗಳಡಿಯಲ್ಲಿ ತರಬೇಕು. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಸೆಕ್ಯೂರಿಟಿ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದರು. 

ಅರಣ್ಯಾಧಿಕಾರಿ ಧನಂಜಯ್ ಮಾತನಾಡಿ, ವನ್ಯಜೀವಿಗಳ ಚಲನವಲನಗಳಿಗೆ ಧಕ್ಕೆಯಾಗದಂತೆ ಸಫಾರಿ ಆಯೋಜಿಸಬೇಕು. ಮತ್ತಾವರದಲ್ಲಿ ಈಗಾಗಲೇ ಕಟ್ಟಡವಿದ್ದು, ಅಲ್ಲಿ ಮಾಹಿತಿ ಕೇಂದ್ರ ತೆರೆಯಲು ಸೂಕ್ತವಾಗಿದೆ. ಟ್ರೀ ಪಾರ್ಕ್‍ನ್ನು ಟೂರಿಸಂ ಅಡಿಯಲ್ಲಿ ಸೇರಿಸಬೇಕು ಎಂದರು. 

ಪರಿಸರ ಚಿಂತಕ ಗಿರಿಜಾ ಶಂಕರ್ ಮಾತನಾಡಿ, ಚಿಕ್ಕಮಗಳೂರು ನಗರದಲ್ಲಿ ಭವಿಷ್ಯದಲ್ಲಿ ಹೊಟೇಲ್ ಲಾಡ್ಜ್ ಉದ್ದೇಶಕ್ಕೆ ಕಟ್ಟಡ ಕಟ್ಟುವ ಸಂದರ್ಭದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಲು ಅವಕಾಶ ನೀಡಿದರೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಸಾರ್ವಜನಿಕರು, ಪರಿಸರವಾದಿಗಳ ಸಲಹೆ, ಸೂಚನೆಗಳನ್ನು ಆಲಿಸಿದ ಸಿ.ಟಿ.ರವಿ ಸಾರ್ವಜನಿಕರ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಪ್ರವಾಸೋದ್ಯಮ ನೀತಿಯನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್‍ಪಿ. ಹರೀಶ್ ಪಾಂಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ.ಕೆ.ಕುಮಾರ್ ಹಾಗೂ ವಿವಿಧ ಸಂಘಸಂಸ್ಥೆಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೋಮ್ ಸ್ಟೇಗಳನ್ನು ಮುಚ್ಚಲಾಗಿದ್ದು, ಸದ್ಯ ಲಾಕ್‍ಡೌನ್ ಸಡಿಲಿಕೆಯಾಗಿರುವುದರಿಂದ ಹೋಮ್ ಸ್ಟೇ ತೆರೆಯಲು ಅವಕಾಶ ನೀಡಬೇಕು. ಲಾಕ್‍ಡೌನಿಂದಾಗಿ ಹೊಟೇಲ್  ಮತ್ತು ರೆಸಾರ್ಟ್‍ಗಳಿಗೆ ಭಾರೀ ನಷ್ಟವಾಗಿದ್ದು, ಸರಕಾರ ಸಬ್ಸಿಡಿ ನೀಡಬೇಕು. ನಗರ ಸಮೀಪದ ಕೈಮರದಲ್ಲಿ ಕಲ್ಚುರಲ್ ಹಬ್ ನಿರ್ಮಾಣಕ್ಕೆ ಒತ್ತುನೀಡಬೇಕು. ಪ್ರತೀ ಗ್ರಾಮ ಪಂಚಾಯತ್‍ಗಳಲ್ಲೂ ಪ್ಲಾಸ್ಟಿಕ್ ರೀ ಸೈಕ್ಲಿಂಗ್ ಯೂನಿಟ್ ತೆರೆಯಬೇಕು. ಸಂಬಂಧಪಟ್ಟ ಇಲಾಖೆಯಿಂದ ಅರಿವು ಕಾರ್ಯಕ್ರಮ ಏರ್ಪಡಿಸಬೇಕು. ಜಿಲ್ಲೆಯ ಪ್ರವಾಸೋದ್ಯಮದ ಸಂಪೂರ್ಣ ಮಾಹಿತಿ ಇಲಾಖೆಯಲ್ಲಿ ಸಿಗುವಂತಾಗಬೇಕು. ಹೋಮ್ ಸ್ಟೇ ಆರಂಭಿಸುವವರು 15ವರ್ಷ ಆ ತೋಟದ ಮಾಲಕ ಆಗಿರಬೇಕು. ಜಿಲ್ಲೆಯಲ್ಲಿ ವೆಹಿಕಲ್ ಮಾಫಿಯಾ ನಡೆಯುತ್ತಿದ್ದು, ಪ್ರವಾಸಿ ತಾಣಗಳಿಗೆ ಕರೆದ್ಯೊಯುವ ವಾಹನಗಳು ಅತೀವೇಗವಾಗಿ ಚಲಿಸುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಬೇಕು.
- ಉತ್ತಮ್ ಹುಲಿಕೆರೆ, ಪರಿಸರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News