ಭಾರತೀಯ ದಂಪತಿಯಿಂದ ಕಡಿಮೆ ವೆಚ್ಚದ ವೆಂಟಿಲೇಟರ್ ಅಭಿವೃದ್ಧಿ

Update: 2020-05-26 14:21 GMT
ಫೋಟೊ ಕೃಪೆ: facebook.com/devesh.ranjan1

ವಾಶಿಂಗ್ಟನ್, ಮೇ 26: ಭಾರತೀಯ-ಅಮೆರಿಕನ್ ದಂಪತಿಯೊಂದು ಕಡಿಮೆ ವೆಚ್ಚದ, ಎತ್ತಿಕೊಂಡು ಹೋಗಬಹುದಾದ ತುರ್ತು ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್)ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

 ಈ ಯಂತ್ರವು ಶೀಘ್ರವೇ ಉತ್ಪಾದನಾ ಹಂತವನ್ನು ತಲುಪಲಿದ್ದು, ಕೋವಿಡ್-19 ರೋಗಿಗಳ ಆರೈಕೆಗಾಗಿ ಭಾರತ ಮತ್ತು ಇತರ ಅಭಿವೃದ್ಧಿಶೀಲ ದೇಶಗಳಲ್ಲಿ ಲಭಿಸಲಿದೆ.

ಪ್ರತಿಷ್ಠಿತ ಜಾರ್ಜಿಯ ಟೆಕ್ಸ್‌ನ ಜಾರ್ಜ್ ಡಬ್ಲ್ಯು ವುಡ್‌ರಫ್ ಸ್ಕೂಲ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಚೇರ್ ಆಗಿರುವ ದೇವೇಶ್ ರಂಜನ್ ಮತ್ತು ಅಟ್ಲಾಂಟದಲ್ಲಿ ಕುಟುಂಬ ವೈದ್ಯೆಯಾಗಿ ವೃತ್ತಿ ನಡೆಸುತ್ತಿರುವ ಅವರ ಪತ್ನಿ ಕುಮುದಾ ರಂಜನ್ ಈ ವೆಂಟಿಲೇಟರನ್ನು ಅಭಿವೃದ್ಧಿಪಡಿಸಿದವರು.

ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಗೊಂಡ ಸಂದರ್ಭದಲ್ಲಿ ಸಾಕಷ್ಟು ಕೃತಕ ಉಸಿರಾಟ ಯಂತ್ರಗಳಿಲ್ಲದೆ ಆಸ್ಪತ್ರೆಗಳು ನಡೆಸಿದ ಪರದಾಟ ಮತ್ತು ರೋಗಿಗಳು ಪಟ್ಟ ಪಾಡನ್ನು ನೋಡಿ ಸುಮಾರು ಮೂರು ವಾರಗಳ ಅವಧಿಯಲ್ಲಿ ಗಂಡ ಮತ್ತು ಹೆಂಡತಿ ಈ ಕಿರು ವೆಂಟಿಲೇಟರನ್ನು ಅಭಿವೃದ್ಧಿಪಡಿಸಿದರು.

ಬೃಹತ್ ಪ್ರಮಾಣದ ಉತ್ಪಾದನೆ ಆರಂಭವಾದಾಗ, ಒಂದು ವೆಂಟಿಲೇಟರ್‌ಗೆ 100 ಡಾಲರ್ (ಸುಮಾರು 7,500 ರೂಪಾಯಿ)ಗೂ ಕಡಿಮೆ ವೆಚ್ಚ ತಗಲುತ್ತದೆ. ಅದನ್ನು 500 ಡಾಲರ್‌ಗೆ ಮಾರಾಟ ಮಾಡಿದರೂ, ಉತ್ಪಾದಕರಿಗೆ ಸಾಕಷ್ಟು ಲಾಭ ದೊರೆಯುತ್ತದೆ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪ್ರೊಫೆಸರ್ ದೇವೇಶ್ ರಂಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News