ನಬಾರ್ಡ್ ಸಮಿತಿಯಿಂದ ಡಿಸಿಸಿ ಬ್ಯಾಂಕುಗಳ ಸ್ಥಿತಿಗತಿ ಅಧ್ಯಯನ: ಸಚಿವ ಎಸ್.ಟಿ.ಸೋಮಶೇಖರ್

Update: 2020-05-26 17:55 GMT

ಬೆಂಗಳೂರು, ಮೇ 26: ರಾಜ್ಯದಲ್ಲಿರುವ ಎಲ್ಲ 21 ಡಿಸಿಸಿ(ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮ)ಗಳ ಸಾಧನೆಗಳ ಪರಾಮರ್ಶೆಯಾಗಬೇಕಿದೆ. ಈ ನಿಟ್ಟಿನಲ್ಲಿ ಆಯಾ ಬ್ಯಾಂಕ್‍ಗಳ ಪ್ರತ್ಯೇಕ ಶ್ರೇಣಿಗಳನ್ನು ಅಳೆಯುವ ಅಧ್ಯಯನವನ್ನು ಖಾಸಗಿ ತನಿಖಾ ಸಂಸ್ಥೆಗಳು ಇಲ್ಲವೆ ನಬಾರ್ಡ್ ಸಮಿತಿಗಳ ಮೂಲಕ ಮಾಡಿಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದರು.

ಮಂಗಳವಾರ ನಗರದಲ್ಲಿ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್‍ಗಳ ಸಮಸ್ಯೆಗಳು ಹಾಗೂ ಅವುಗಳ ಕಾರ್ಯನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ಡಿಸಿಸಿ ಬ್ಯಾಂಕ್‍ಗಳ ವಿಭಾಗೀಯವಾರು ಸಭೆ ಕರೆದು, ಒಂದೊಂದೆ ಬ್ಯಾಂಕ್‍ಗಳ ಪ್ರಗತಿ ಪರಿಶೀಲನೆ ಮಾಡಬೇಕಿದೆ. ಆ ಮೂಲಕ ಬ್ಯಾಂಕ್‍ಗಳ ಹಾಲಿ ಸ್ಥಿತಿಗತಿಗಳ ಬಗ್ಗೆ ಅರಿಯುವುದಲ್ಲದೆ, ಯಾವ ಬ್ಯಾಂಕ್‍ಗಳು ಉತ್ತಮ ಸ್ಥಿತಿಯಲ್ಲಿವೆ? ಯಾವುದು ತುಂಬಾ ಹದಗೆಟ್ಟಿದೆ? ರೈತರಿಗೆ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯಕ್ಕೆ ಸಾಲ ಸಿಗುತ್ತಿದೆಯೇ? ಕೃಷಿ ಆಧಾರಿತ ಸಾಲ ವಿತರಣೆಯಲ್ಲಿ ಸಮಸ್ಯೆ ಇರುವ ಬ್ಯಾಂಕ್‍ಗಳು ಯಾವುದಾದರೂ ಇದೆಯೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬಹುದು ಎಂದು ಅವರು ಹೇಳಿದರು.

ಇದರ ಜೊತೆಗೆ ಬ್ಯಾಂಕ್‍ಗಳ ಆಡಳಿತ ಮಂಡಳಿ ಅವ್ಯವಹಾರ, ಹಗರಣಗಳ ಬಗ್ಗೆಯೂ ತಿಳಿದುಕೊಂಡು, ಬ್ಯಾಂಕ್ ಹಾಗೂ ಸರಕಾರಕ್ಕೆ ಬರಬೇಕಾದ ಹಣ ವಸೂಲಾತಿ ಬಗ್ಗೆಯೂ ಕ್ರಮವಹಿಸಲು ಅನುಕೂಲವಾಗುತ್ತದೆ. ಅಲ್ಲದೆ, ಬ್ಯಾಂಕ್‍ಗಳಲ್ಲಿ ಬಾಕಿ ಇರುವ ಕೇಸ್‍ಗಳೆಷ್ಟು? ಬಾಕಿ ಉಳಿದಿರಲು ಕಾರಣಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸೋಮಶೇಖರ್ ನಿದೇರ್ಶನ ನೀಡಿದರು.

ಆಸ್ತಿ ಹರಾಜಿಗೆ ಅಧಿಕಾರಿ ನೇಮಿಸಲು ಸೂಚನೆ: ಸಹಕಾರ ಇಲಾಖೆ ವ್ಯಾಪ್ತಿಯ ಬ್ಯಾಂಕ್‍ಗಳ ಅವ್ಯವಹಾರಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸುವ ಅಗತ್ಯವಿದ್ದು, ತನಿಖೆ ವೇಳೆ ಯಾರು ಅವ್ಯವಹಾರ ನಡೆಸಿದ್ದಾರೆಂಬುದು ಸಾಬೀತಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶವಾದರೆ, ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ನಡೆಸುವ ಸಲುವಾಗಿಯೆ ಅಧಿಕಾರಿಯನ್ನು ನೇಮಿಸಿ ಎಂದು ಉನ್ನತಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ವಿಎಸ್‍ಎಸ್‍ಎನ್ ಸೊಸೈಟಿ ಗಣಕೀಕೃತ: ವಿಎಸ್‍ಎಸ್‍ಎನ್‍ನ ಎಲ್ಲ 4500 ಸೊಸೈಟಿಗಳ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮುಖ್ಯವಾಗಿದೆ. ಹೀಗಾಗಿ ಇನ್ನು ಮುಂದೆ ಎಲ್ಲ ವ್ಯವಹಾರಗಳೂ ಗಣಕೀಕೃತವಾಗಬೇಕು. ಈಗಲೇ ಈ ವ್ಯವಸ್ಥೆ ಜಾರಿಗೆ ಬರಲಿ ಎಂದು ಸೋಮಶೇಖರ್ ಸೂಚನೆ ನೀಡಿದರು.
ವಿಎಸ್‍ಎಸ್‍ಎನ್ ಮತ್ತು ಸಹಕಾರ ವಲಯದಲ್ಲಿ ಲೆಕ್ಕಪರಿಶೋಧನೆಯನ್ನು ಕಾಲಕಾಲಕ್ಕೆ ನಡೆಸಬೇಕು. ಈ ಮೂಲಕ ವ್ಯವಹಾರವು ಪಾರದರ್ಶಕವಾಗಿ ನಡೆಸಲು ‘ಜಾಗೃತದಳ’ ರಚಿಸುವಂತೆ ಅವರು ಆದೇಶ ನೀಡಿದರು.

ಸಹಕಾರ ಸಂಘಗಳ ವ್ಯವಸ್ಥೆಗೆ ನೂರು ವರ್ಷಗಳ ಇತಿಹಾಸವಿದೆ. ಇಲ್ಲಿ ಅಧ್ಯಕ್ಷರು ಹಾಗೂ ಸಚಿವರು ಇಂದು ಇದ್ದು, ನಾಳೆ ಹೋಗುತ್ತಾರೆ. ಆದರೆ, ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಳ್ಳಬೇಕೆಂದರೆ ನಾವು ಇದ್ದಷ್ಟು ದಿನ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಗಮನಹರಿಸಿ ಎಂದು ಸೋಮಶೇಖರ್ ಸೂಚಿಸಿದರು.

ಗುಲ್ಬರ್ಗ ಡಿಸಿಸಿ ಬ್ಯಾಂಕ್‍ನಲ್ಲಿ 92 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಆಡಳಿತ ಮಂಡಳಿ ಸದಸ್ಯರು ತಮ್ಮ ಹಿಂಬಾಲಕರಿಗೆ ಮತ್ತು ಸಂಬಂಧಿಕರಿಗೆ ನೀಡಿ ಅವ್ಯವಹಾರ ಮಾಡಿರುವ ಬಗ್ಗೆ ಸಭೆಯಲ್ಲಿ ಸಚಿವರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಆದೇಶ ನೀಡಿದರು.

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇಲ್ಲಿ ಆಡಳಿತ ಮಂಡಳಿಯನ್ನು ವಜಾ ಮಾಡಿ ಆಡಳಿತಾಧಿಕಾರಿ ಹಾಕುವುದೇ ಸೂಕ್ತ. ಜಿಲ್ಲಾಧಿಕಾರಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ, ಶೀಘ್ರ ಕ್ರಮ ಕೈಗೊಳ್ಳಿ. ಎಲ್ಲ ಹಣವನ್ನು ವಸೂಲಿ ಮಾಡುವ ಬಗ್ಗೆ ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ 2004ರಿಂದ 2013ರವರೆಗಿನ ಅವಧಿಯಲ್ಲಿ 62.72 ಕೋಟಿ ರೂಪಾಯಿ ಹಣದ ಅವ್ಯವಹಾರ ಆಗಿದ್ದು, ಇದರ ಬಡ್ಡಿಯೇ 59 ಕೋಟಿ ರೂಪಾಯಿಯಾಗಿದೆ. ಆದರೆ, ಇದರ ರಿಕವರಿ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸೋಮಶೇಖರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, 13 ಜನ ನಿರ್ದೇಶಕರಲ್ಲಿ 8 ಮಂದಿಯಿಂದ ಅವ್ಯವಹಾರವಾಗಿದ್ದು, ಅವರ ಸದಸ್ಯತ್ವ ರದ್ದತಿಗೆ ಕ್ರಮವಹಿಸಲಾಗಿದೆ. ಅಲ್ಲದೆ, ಅವರ ಆಸ್ತಿ ಮುಟ್ಟುಗೋಲಿಗೆ ಅಟೆಸ್ಟ್ ಸಹಿತ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್, ಮಂಡ್ಯ ಡಿಸಿಸಿ ಬ್ಯಾಂಕ್‍ಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಹಕಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ನಾಗಲಾಂಬಿಕಾ ದೇವಿ, ನಿಬಂಧಕರಾದ ಪ್ರಸನ್ನಕುಮಾರ್, ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಇಲಾಖೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News