ರಿಪಬ್ಲಿಕ್ ಭಾರತ್‌ನಿಂದ ಸುಳ್ಳು ಸುದ್ದಿ ಪ್ರಸಾರ: ಹರ್ಯಾಣ ಪೊಲೀಸರಿಂದ ಟ್ವೀಟ್; ಅರ್ನಬ್ ಗೋಸ್ವಾಮಿಗೆ ಮುಖಭಂಗ

Update: 2020-05-27 04:51 GMT

ಹೊಸದಿಲ್ಲಿ, ಮೇ 27: ಅರ್ನಬ್ ಗೋಸ್ವಾಮಿಯವರ ಹಿಂದಿ ಟಿವಿ ಚಾನೆಲ್ 'ರಿಪಬ್ಲಿಕ್ ಭಾರತ್', ತಬ್ಲೀಗಿ ಜಮಾಅತ್ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವುದನ್ನು ಹರ್ಯಾಣ ಪೊಲೀಸರು ಪತ್ತೆ ಮಾಡಿದ್ದು, ಸ್ಟಾರ್ ನಿರೂಪಕನಿಗೆ ಇದರಿಂದ ತೀರಾ ಮುಖಭಂಗ ಆಗಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ ವಿರುದ್ಧದ ಅಪರಾಧ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ವಿವಾದಾತ್ಮಕ ನಿರೂಪಕ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ಸುಪ್ರೀಂಕೋರ್ಟ್ ಕೂಡಾ ಅರ್ನಬ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

‘’ಹರ್ಯಾಣ ಪೊಲೀಸರು ಫರೀದಾಬಾದ್‌ನಲ್ಲಿ 12 ಮಂದಿ ತಬ್ಲೀಗಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ’’ ಎಂದು ರಿಪಬ್ಲಿಕ್ ಭಾರತ್ ಸೋಮವಾರ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿತ್ತು. ಇವರು ವೀಸಾ ನಿಯಮ ಉಲ್ಲಂಘಿಸಿದ ಇಂಡೋನೇಶ್ಯ ಮತ್ತು ಫೆಲೆಸ್ತೀನ್ ಪ್ರಜೆಗಳು ಎಂದು ಚಾನೆಲ್ ಹೇಳಿತ್ತು.

ಆದರೆ ಇದು ಸುಳ್ಳು ಸುದ್ದಿ ಎಂದು ಹರ್ಯಾಣ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ರಿಪಬ್ಲಿಕ್ ಭಾರತ್ ಟಿವಿ ಚಾನಲ್‌ನ ಸುದ್ದಿಯ ವೀಡಿಯೊ ತುಣುಕನ್ನು ಹಾಕಿ ಹರ್ಯಾಣ ಪೊಲೀಸ್ ಇಲಾಖೆ ಇದು ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದೆ. ಇದು ಮೇ 12ರಂದು ನಡೆದ ಘಟನೆ. ಅವರನ್ನು ಮೇ 19ರಂದು ನ್ಯಾಯಾಲಯ ಬಿಡುಗಡೆ ಮಾಡಿದೆ ಎಂದು ಸ್ಪಷ್ಟನೆ ನೀಡಿತ್ತು. ಜತೆಗೆ, ಹಳೆಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಎಂದು ಪ್ರಸಾರ ಮಾಡಿ ದಯವಿಟ್ಟು ಪ್ರೇಕ್ಷಕರನ್ನು ತಪ್ಪುದಾರಿಗೆ ಎಳೆಯಬೇಡಿ ಎಂದು ಇಲಾಖೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News