ಗುಂಡ್ಲುಪೇಟೆ: ಎರಡು ಕುಟುಂಬಗಳ ನಡುವಿನ ಜಗಳ ಮೂವರ ಕೊಲೆಯಲ್ಲಿ ಅಂತ್ಯ

Update: 2020-05-27 05:25 GMT

ಗುಂಡ್ಲುಪೇಟೆ, ಮೇ 27: ವೈಯಕ್ತಿಕ ದ್ವೇಷವಿದ್ದ ಎರಡು ಕುಟುಂಬಗಳ ನಡುವಿನ ಗಲಾಟೆ ಮೂವರು ಯುವಕರ ಕೊಲೆಯೊಂದಿಗೆ ಅಂತ್ಯಗೊಂಡ ಭೀಕರ ಘಟನೆ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಂಗಳವಾರ ರಾತ್ರಿ 8:30ರ ಸುಮಾರಿಗೆ ನಡೆದಿರುವುದು ವರದಿಯಾಗಿದೆ.

ಹತ್ಯೆಯಾದವರನ್ನು ಝಾಕೀರ್ ಹುಸೈನ್ ನಗರದ ನಿವಾಸಿಗಳಾದ ಝಕಾವುಲ್ಲಾ ಖಾನ್ (32), ಇದ್ರೀಶ್(34) ಹಾಗೂ ಖೈಸರ್(29) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ನಸ್ರುಲ್ಲಾ(40), ಉಮರ್(22) ಜಾಜೂ(17) ಅಲೀಂ(22) ಹಾಗೂ ಮುಜೀಬುಲ್ಲ(30) ಎಂಬವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡ್ಲುಪೇಟೆ ಪಟ್ಟಣದ ಝಾಕಿರ್ ಹುಸೈನ್ ನಗರದಲ್ಲಿ ಈ ಭೀಕರ ಹತ್ಯೆಗಳು ನಡೆದಿವೆ. ಇಲ್ಲಿನ ಇನಾಯತ್ ಮತ್ತು ನೂರುಲ್ಲಾ ಎಂಬವರ ಎರಡು ಕುಟುಂಬಗಳ ನಡುವೆ ಈ ಜಗಳ ನಡೆದಿದೆ. ಈ ಎರಡು ಕುಟುಂಬಗಳ ಮಧ್ಯೆ ಹಲವು ವರ್ಷಗಳಿಂದ ವೈಯಕ್ತಿಕ ದ್ವೇಷ ಇತ್ತೆನ್ನಲಾಗಿದೆ. ನಿನ್ನೆ ರಾತ್ರಿ ಇದು ವಿಕೋಪಕ್ಕೆ ತಿರುಗಿದ್ದು, ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇದು ಮೂವರ ಹತ್ಯೆಯೊಂದಿಗೆ ಅಂತ್ಯಗೊಂಡಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ರಾತ್ರಿಯಿಂದ ಗುಂಡ್ಲುಪೇಟೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು, ಘಟನಾ ಸ್ಥಳದಲ್ಲಿ ಐಜಿಪಿ ವಿಫುಲ್ ಕುಮಾರ್, ಚಾಮರಾಜನಗರ ಎಸ್ಪಿಮೊಕ್ಕಾಂ ಹೂಡಿದ್ದಾರೆ.

ಪಟ್ಟಣದಲ್ಲಿ ಬಿಗುವಿನ ವಾತಾವರ ನಿರ್ಮಾಣಗೊಂಡಿದ್ದು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News