ಹೊಸ ಭೂಪಟ ತಡೆಹಿಡಿದ ನೇಪಾಳ: ಭಾರತದ ವಿರೋಧಕ್ಕೆ ಮಣಿದ ನೆರೆರಾಷ್ಟ್ರ

Update: 2020-05-27 16:31 GMT

ಹೊಸದಿಲ್ಲಿ, ಮೇ 28: ಗಡಿಪ್ರದೇಶದಲ್ಲಿರುವ ಭಾರತಕ್ಕೆ ಸೇರಿದ ಕೆಲವು ಸ್ಥಳಗಳನ್ನು ತನ್ನದೆಂದು ತೋರಿಸುವ ನೂತನ ಭೂಪಟಕ್ಕೆ ಸಂಸತ್‌ನ ಅಂಗೀಕಾರ ಪಡೆಯುವ ಪ್ರಕ್ರಿಯೆಯನ್ನು ನೇಪಾಳ ಬುಧವಾರ ಮುಂದೂಡಿದೆ. ನೂತನ ಭೂಪಟವನ್ನು ಅಧಿಕೃತಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ನೇಪಾಳದ ಸಂಸತ್‌ನಲ್ಲಿ ಇಂದು ನಡೆಯಬೇಕಿದ್ದ ಚರ್ಚೆಯನ್ನು ಕೂಡಾ ಮುಂದೂಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಕಳೆದ ವಾರ ನೇಪಾಳ ಸರಕಾರವು ಅಂಗೀಕರಿಸಿದ ಈ ನೂತನ ಭೂಪಟವನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ನೇಪಾಳದ ನೂತನ ನಕಾಶೆಯು ಏಕಪಕ್ಷೀಯವಾದುದಾಗಿದೆ ಹಾಗೂ ಅದು ಐತಿಹಾಸಿಕ ವಾಸ್ತವಿಕ ಅಂಶಗಳ್ನು ಆಧರಿಸಿಲ್ಲವೆಂದು ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಾಂತಗಳ ಮೇಲೆ ಹಕ್ಕು ಸ್ಥಾಪನೆಗಾಗಿ ಈ ರೀತಿ ಕೃತಕ ವಿಸ್ತರಣೆಯನ್ನು ಮಾಡುವುದನ್ನು ಭಾರತ ಒಪ್ಪಲಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದರು.   ನೇಪಾಳ ಸರಕಾರ ಕೂಡಲೇ ಭೂಪಟವನ್ನು ಹಿಂತೆಗೆದುಕೊಳ್ಳಬೇಕೆಂದು ಎಂದು ಅವರು ಆಗ್ರಹಿಸಿದ್ದರು.

ಲಿಪಿಯಾಧುರಾ, ಲಿಪುಲೇಖ್ ಹಾಗೂ ಕಾಲಾಪಾನಿ ಸೇರಿದಂತೆ ನೇಪಾಳದ ವಾಯುವ್ಯದ ಗಡಿಯ ತುದಿಯಲ್ಲಿರುವ ಭಾರತದ ಕೆಲವು ಭೂಪ್ರದೇಶಗಳನ್ನು ತನಗೆ ಸೇರಿದ್ದೆಂಬುದನ್ನು ತೋರಿಸುವ ಭೂಪಟವನ್ನು ನೇಪಾಳ ಕಳೆದ ವಾರ ಪ್ರಕಟಿಸಿತ್ತು.

ತನ್ನ ದೇಶದಲ್ಲಿ ಭಾರತವು ಕೊರೋನ ವೈರಸ್ ಸೋಂಕು ಹಡುತ್ತಿದೆಯೆಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಆಪಾದಿಸಿದ ಬೆನ್ನಲ್ಲೇ ನೇಪಾಳಕಾರಿ ಈ ಭೂಪಟವನ್ನು ಬಹಿರಂಗಪಡಿಸಿತ್ತು.

ಟಿಬೆಟ್ ಜೊತೆಗಿನ ಗಡಿಯಲ್ಲಿರುವ ಲಿಪುಲೇಖ್ ಅನ್ನು ಉತ್ತರಾಖಂಡದ ಜೊತೆ ಜೋಡಿಸುವ 80 ಕಿ.ಮೀ. ವಿಸ್ತೀರ್ಣದ ರಸ್ತೆಯನ್ನು ಭಾರತವು ತೆರೆದ ಬಳಿಕ ನೇಪಾಳ ಸರಕಾರವು ಈ ನಕ್ಷೆಯನ್ನು ಪ್ರಕಟಿಸಿದೆ. ಈ ರಸ್ತೆಯ ನಿರ್ಮಾಣದಿಂದಾಗಿ ಟಿಬೆಟ್‌ನಲ್ಲಿರುವ ಮಾನಸಸರೋವರಕ್ಕೆ ಪ್ರಯಾಣಿಸುವ ಯಾತ್ರಿಕರಿಗೆ ಪ್ರಯಾಣದ ದೂರ ಗಣನೀಯವಾಗಿ ಕಡಿಮೆಯಾಗಲಿದೆ.

ನೂತನ ನಕ್ಷೆಯನ್ನು ಶಾಲಾ ಹಾಗೂ ಕಾಲೇಜುಗಳ ಪಠ್ಯಗಳಲ್ಲಿ ಹಾಗೂ ಅಧಿಕೃತ ದಾಖಲೆಗಳಲ್ಲಿ ಮುದ್ರಿಸಲಾಗುವುದು ಹಾಗೂ ಎಲ್ಲಾ ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ನೇಪಾಳಿ ಅಧಿಕಾರಿಗಳು ತಿಳಿಸಿದ್ದರು.

ಭಾರತವು ಲಿಪುಲೇಖ್‌ನಲ್ಲಿ ನಿರ್ಮಿಸಿರುವ ನೂತನ ರಸ್ತೆಯ ಬಗ್ಗೆ ನೇಪಾಳವು ಬೇರೆಯವರ ಒತ್ತಾಸೆಯಿಂದಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಭಾರತದ ಸೇನಾ ವರಿಷ್ಠ ಜನರಲ್ ಮನೋಜ್ ಮುಕುಂದ್ ನರವಾನೆ, ಚೀನಾದ ಹೆಸರನ್ನು ಉಲ್ಲೇಖಿಸದೆ ಹೇಳಿದ್ದರು. ಈ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ್ದ ನೇಪಾಳದ ರಕ್ಷಣಾ ಸಚಿವ ಈಶ್ವರ್ ಪೋಖ್ರಾಲ್. ‘‘ಸೇನಾ ಮುಖ್ಯಸ್ಥರು ಇಂತಹ ರಾಜಕೀಯ ಹೇಳಿಕೆಯನ್ನು ನೀಡುವುದು ಹೇಗೆ ವೃತ್ತಿಪರತೆಯಾಗುತ್ತದೆ’’ ಎಂದವರು ಕಿಡಿಕಾರಿದ್ದರು.

ಹೊಸ ಭೂಪಟಕ್ಕೆ ಈಸ್ಟ್ ಇಂಡಿಯಾ ಕಂಪೆನಿ ಒಪ್ಪಂದದ ನೆಪ ಹೇಳಿದ ನೇಪಾಳ

ಭಾರತದ ಗಡಿಗೆ ತಾಗಿಕೊಂಡಿರುವ ಲಿಪಿಯಾಧುರಾ, ಲಿಪುಲೇಖ್ ಹಾಗೂ ಕಾಲಾಪಾನಿ ಮತ್ತಿತರ ಸ್ಥಳಗಳು 1816ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಜೊತೆ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ತನಗೆ ಸೇರಿದ್ದೆಂದು ನೇಪಾಳ ಸರಕಾರ ಇತ್ತೀಚೆಗೆ ಹೇಳಿಕೆ ನೀಡಿತ್ತು. ಅದರಂತೆ ಕಾಳಿ ನದಿಯು ಭಾರತದೊಂದಿಗಿನ ತನ್ನ ಪಶ್ಚಿಮದ ಗಡಿಯಾಗಿದೆ ಹಾಗೂ ನದಿಯ ಪೂರ್ವ ಭಾಗದಲ್ಲಿರುವ ಭೂಪ್ರದೇಶವು ತನ್ನ ಪ್ರಾಂತವೆಂದು ನೇಪಾಳ ಹೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News