ಲಾಕ್​ಡೌನ್: ಪ್ರವಾಸೋದ್ಯಮ ನಂಬಿದ್ದ ಟ್ರಾವೆಲ್ ಉದ್ಯಮ ಸಂಕಷ್ಟದಲ್ಲಿ

Update: 2020-05-27 18:31 GMT

ಬೆಂಗಳೂರು, ಮೇ 27: ಕೋವಿಡ್-19 ವೈರಸ್ ಸುಳಿಗೆ ಸಿಲುಕಿ ಎಲ್ಲಾ ಉದ್ಯಮಗಳು ಮತ್ತೆ ಕಾರ್ಯಾರಂಭ ಮಾಡುತ್ತಿವೆ. ಆದರೆ, ಟ್ರಾವೆಲ್ ಏಜೆನ್ಸಿಗಳು ಮಾತ್ರ ಬಾಗಿಲು ತೆರೆಯದ ಸ್ಥಿತಿಯಲ್ಲೇ ಇವೆ. ಪ್ರವಾಸೋದ್ಯಮವನ್ನೇ ನಂಬಿರುವ ಟ್ರಾವೆಲ್ ಉದ್ಯಮ ತಕ್ಷಣಕ್ಕೆ ಪ್ರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ.

ರಾಜ್ಯದಲ್ಲಿ ಪ್ರವಾಸದ ಸೀಸನ್‍ನಲ್ಲಿ ಲಾಕ್‍ಡೌನ್ ಆರಂಭವಾಗಿರುವುದರಿಂದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳು ಆದಾಯವಿಲ್ಲದೆ ಟ್ರಾವೆಲ್ ಏಜೆನ್ಸಿಯವರು ಕಾಲ ದೂಡಿದರು. ಈಗ ಲಾಕ್‍ಡೌನ್ ಸಡಿಲಿಕೆಯಾದರೂ ಸೋಂಕು ಭೀತಿಯಿಂದ ಜನರು ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಮುಂದಿನ 6 ತಿಂಗಳು ಪ್ರವಾಸೋದ್ಯಮಕ್ಕೆ ಕಂಟಕ ಎದುರಾಗಲಿದೆ. ವಿಶೇಷವಾಗಿ ಅಂತರ್ ರಾಷ್ಟ್ರೀಯ ಪ್ರವಾಸಿಗರು ರಾಜ್ಯಕ್ಕೆ ಆಗಮಿಸುವುದು ಅನುಮಾನ. ರಾಜ್ಯದ ಜನರೂ ವಿದೇಶ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುವುದರಿಂದ ಟ್ರಾವೆಲ್ ಏಜೆನ್ಸಿಗಳು ಬಾಗಿಲು ತೆರೆದರೂ ಅನಗತ್ಯ ವೆಚ್ಚ ಹೆಚ್ಚಾಗುವ ಆತಂಕದಲ್ಲಿದ್ದಾರೆ.

ಉದ್ಯೋಗದ ಮೇಲೆ ಕರಿನೆರಳು: ಜಗತ್ತಿನಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವುದು ಪ್ರವಾಸೋದ್ಯಮ. ರಾಜ್ಯದಲ್ಲಿ ಸುಮಾರು 2-3 ಸಾವಿರಕ್ಕೂ ಹೆಚ್ಚು ಟ್ರಾವೆಲ್ ಏಜೆನ್ಸಿಗಳಿದ್ದು, ಲಕ್ಷಾಂತರ ಜನರು ಸ್ವಂತ ಟ್ಯಾಕ್ಸಿ ಇಟ್ಟುಕೊಂಡು ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೆ, ವಿಶ್ವ ಪ್ರಸಿದ್ದ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಟ್ರಾವೆಲ್ ಗೈಡ್‍ಗಳಾಗಿ, ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಉತ್ಪನ್ನ ಮಾರಾಟ ಮಾಡುವವರು, ಹೊಟೇಲ್‍ಗಳು, ಪ್ರವಾಸಿಗರನ್ನೇ ನಂಬಿರುವ ಗುಡಿ ಕೈಗಾರಿಕೆಗಳಿಂದ ತಯಾರಿಸುವ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವವರು ಸೇರಿದಂತೆ ಲಕ್ಷಾಂತರ ಜನರ ಬದುಕು ಲಾಕ್‍ಡೌನ್ ಮುಗಿದರೂ ಚೇತರಿಕೆ ಕಷ್ಟ ಸಾಧ್ಯವಾಗಿದೆ.

ಪರಿಗಣನೆಯಾಗದ ಉದ್ಯಮ: ಪ್ರವಾಸಿಗರಿಗೆ ಜಗತ್ತನ್ನು ನೋಡಲು ದಾರಿ ತೋರುವ ಟ್ರಾವೆಲ್ ಏಜೆನ್ಸಿಗಳು ಒಂದು ಉದ್ಯಮವಾಗಿ ಬೆಳೆಯುವಲ್ಲಿ ವಿಫಲವಾಗಿದ್ದು, ಕೇಂದ್ರ ಸರಕಾರವೂ ಟ್ರಾವೆಲ್ ಏಜೆನ್ಸಿಗಳನ್ನು ಎಂಎಸ್‍ಎಂಇ ಪಟ್ಟಿಯಲ್ಲೂ ಸೇರಿಸುವುದರಿಂದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸರಕಾರದಿಂದ ಯಾವುದೇ ರೀತಿಯ ಪರಿಹಾರ ಸಿಗದಂತಾಗಿದೆ ಎಂದು ಏಜೆನ್ಸಿ ಮಾಡಿಕೊಂಡಿರುವವರು ಆರೋಪಿಸುತ್ತಿದ್ದಾರೆ.

ಉತ್ತೇಜನಕ್ಕೆ ಪ್ರಯತ್ನ: ಕೆಲವು ರಾಷ್ಟ್ರಗಳು ಕೋವಿಡ್-19 ಸಂಕಷ್ಟದಿಂದ ಹೊರ ಬರಲು ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ ನೀಡಲು ಮುಂದಾಗುತ್ತಿವೆ. ಈಗಾಗಲೇ ಜಪಾನ್ ವಿದೇಶಿ ಪ್ರವಾಸಿಗರ ಪ್ರಯಾಣ, ಪ್ರವಾಸಕ್ಕೆ ಶೇ.50 ರಿಯಾಯ್ತಿ ನೀಡುವುದಾಗಿ ಘೋಷಣೆ ಮಾಡಿದೆ. ಕೇಂದ್ರ-ರಾಜ್ಯ ಸರಕಾರ ಅದೇರೀತಿ ಪ್ರವಾಸಿಗರನ್ನು ಆಕರ್ಷಿಸಲು ಈ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News