ವಲಸೆ ಕಾರ್ಮಿಕರಿಂದ ಬಸ್, ರೈಲು ಪ್ರಯಾಣ ದರ ಪಡೆಯಬಾರದು: ಸುಪ್ರೀಂ ಆದೇಶ

Update: 2020-05-28 16:03 GMT

ಹೊಸದಿಲ್ಲಿ,ಮೇ 29: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿಮೆ ಕಳೆದುಕೊಂಡು ತಮ್ಮ ಊರುಗಳಿಗೆ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರಿಗೆ ರೈಲುಗಳು ಅಥವಾ ಬಸ್ಸುಗಳಲ್ಲಿ ಅವರಿಗೆ ಯಾವುದೇ ಶುಲ್ಕವನ್ನು ವಿಧಿಸಕೂಡದು ಹಾಗೂ ಅವರ ಪ್ರಯಾಣದ ವೆಚ್ಚವನ್ನು ರಾಜ್ಯ ಸರಕಾರಗಳೇ ಭರಿಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.

ವಲಸೆ ಕಾರ್ಮಿಕರಿಗೆ ಅವರಿರುವ ರಾಜ್ಯಗಳ ಸರಕಾರಗಳು ಆಯಾ ಬಸ್‌ ನಿಲ್ದಾಣ ಅಥವಾ ರೈಲ್ವೆ ಟರ್ಮಿನಲ್‌ಗಳಲ್ಲಿ ಊಟ ಹಾಗೂ ನೀರನ್ನು ಒದಗಿಸಬೇಕು ಎಂದು ಅದು ಕಟ್ಟುನಿಟ್ಟಾಗಿ ತಿಳಿಸಿದೆ. ಪ್ರಯಾಣದ ವೇಳೆ, ವಲಸೆ ಕಾರ್ಮಿಕರಿಗೆ ರೈಲ್ವೆ ಇಲಾಖೆಯು ಆಹಾರ ಹಾಗೂ ನೀರನ್ನು ಒದಗಿಸಬೇಕೆಂದು ನ್ಯಾಯಪೀಠ ತಿಳಿಸಿದೆ.

ಊರುಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆಯ ಮೇಲ್ವಿಚಾರಣೆ ಆಯಾ ರಾಜ್ಯ ಸರಕಾರಗಳು ವಹಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಹಾಗೂ ಎಂ.ಆರ್.ಶಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ. ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ನೀರನ್ನು ಕೂಡಾ ಒದಗಿಸಬೇಕೆಂದು ತಿಳಿಸಿದೆ.

ವಲಸೆ ಕಾರ್ಮಿಕರಿಂದ ಯಾವುದೇ ರೈಲ್ವೆ ಅಥವಾ ಬಸ್ ಪ್ರಯಾಣ ಶುಲ್ಕವನ್ನು ಕೂಡಾ ಪಡೆಯದಂತೆಯೂ ನ್ಯಾಯಾಲಯ ಆದೇಶಿಸಿದೆ. ಅವರ ಪ್ರಯಾಣದ ವೆಚ್ಚವನ್ನು ರಾಜ್ಯಗಳು ಹಂಚಿಕೊಳ್ಳಬೇಕೆಂದು ನ್ಯಾಯಾಲಯ ತಿಳಿಸಿತು.

ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರ ವಿಷಯವಾಗಿ ಕೇಂದ್ರ ಹಾಗೂ ವಿಪಕ್ಷ ಆಡಳಿತವಿರುವ ರಾಜ್ಯ ಸರಕಾರಗಳ ನಡುವೆ ರಾಜಕೀಯ ಕೆಸರೆರಚಾಟ ಮುಂದುವರಿದಿರುವ ನಡುವೆ ಸುಪ್ರೀಂಕೋರ್ಟ್‌ನಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ.

ಕೇಂದ್ರ ಸರಕಾರವು ವಿಶೇಷ ಶ್ರಮಿಕ್ ರೈಲುಗಳನ್ನು ಒದಗಿಸುತ್ತಿಲ್ಲವೆಂದು ಅತ್ಯಧಿಕ ಸಂಖ್ಯೆಯ ವಲಸೆ ಕಾರ್ಮಿಕರಿರುವ ರಾಜ್ಯವಾದ ಮಹಾರಾಷ್ಟ್ರ ಆಪಾದಿಸಿದೆ. ಆದರೆ ಈ ಆರೋಪವನ್ನು ಕೇಂದ್ರ ನಿರಾಕರಿಸಿದ್ದು, ತಾನು ರೈಲುಗಳನ್ನು ಒದಗಿಸಲು ಸಿದ್ಧನಿರುವೆನಾದರೂ, ಕೆಲವು ರಾಜ್ಯ ಸರಕಾರಗಳು ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಸೂಕ್ತವಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಹಾಗೂ ಪ್ರಯಾಣಿಕರನ್ನು ಒದಗಿ ಸುತ್ತಿಲ್ಲ ವೆಂದು ಸಮಜಾಯಿಷಿ ನೀಡಿತ್ತು.

‘‘ಪ್ರಸಕ್ತ ರೈಲ್ವೆಯು ಕೇವಲ ಶೇ.3ರಷ್ಟು ಸಾಮರ್ಥ್ಯದೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಎಲ್ಲಾ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅದಕ್ಕೆ ಮೂರು ತಿಂಗಳುಗಳು ಬೇಕಾಗಬಹುದು’’ ಎಂದು ಅರ್ಜಿದಾರರ ಪರ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಹಾಗೂ ಇಂದಿರಾ ಜೈಸಿಂಗ್ ವಾದಿಸಿದರು.

ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸಾಗಿಸುವುದಕ್ಕೆ ಉಂಟಾಗಿರುವ ಅವ್ಯವಸ್ಥೆಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಸೇರಿದಂತೆ ಹಲವಾರು ಮಂದಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರ ಸರಕಾರದ ಪರವಾಗಿ ಹಾಜರಾದ ತುಷಾರ್ ಮೆಹ್ತಾ ಅವರಿಗೆ 50ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದೆ.

‘‘1991ರ ಜನಗಣತಿಯ ಪ್ರಕಾರ, ದೇಶದಲ್ಲಿ 3 ಕೋಟಿಗೂ ಅಧಿ ವಲಸೆ ಕಾರ್ಮಿಕರಿದ್ದಾರೆ. 2020ರ ವೇಳೆಗೆ ಆ ಸಂಖ್ಯೆಯು 4 ಕೋಟಿಗೆ ತಲುಪುತ್ತದೆ. ಒಂದು ವೇಳೆ ರೈಲ್ವೆಯು 27 ದಿನಗಳಲ್ಲಿ 91 ಲಕ್ಷ ಜನರನ್ನು ಸಾಗಣೆ ಮಾಡಿದಲ್ಲಿ, ಉಳಿದವರನ್ನು ಸಾಗಿಸಲು ಇನ್ನೂ ಮೂರು ತಿಂಗಳು ಬೇಕಾಗಬಹುದು’ ಎಂ ದು ಸಿಬಲ್ ತಿಳಿಸಿದರು.

ತಮ್ಮ ಊರುಗಳಿಗೆ ವಲಸೆ ಕಾರ್ಮಿಕರಿಗೆ ಆಹಾರ, ವಸತಿ ಹಾಗೂ ಹಣಕಾಸು ನೆರವು ನೀಡುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಮೊದಲು ಕಠಿಣವಾದ ಪ್ರಶ್ನೆಗಳನ್ನು ನ್ಯಾಯಾಲಯ ಕೇಳಿತ್ತು. ವಲಸೆ ಕಾರ್ಮಿಕರ ಸಾಗಣೆ ಹಾಗೂ ಅವರಿಗೆ ಆಹಾರ ಒದಗಿಸುವುದು ಈಗ ಎದುರಾಗಿರುವ ಪ್ರಮುಖವಾದ ಸಮಸ್ಯೆಗಳೆಂದು ಅದು ಅಭಿಪ್ರಾಯಿಸಿತ್ತು.

ಇದೊಂದು ಅಭೂತಪೂರ್ವ ಪರಿಸ್ಥಿತಿ ಎಂದು ಬಣ್ಣಿಸಿರುವ ಕೇಂದ್ರ ಸರಕಾರವು ಮೇ 1ರಂದು ವಿಶೇಷ ರೈಲು ಸಂಚಾರ ಆರಂಭಗೊಂಡ ಬಳಿಕ ಈವರೆಗೆ 91 ಲಕ್ಷ ಪ್ರಯಾಣಿಕರನ್ನು ಸಾಗಿಸಲಾಗಿದೆಯೆಂದು ನ್ಯಾಯಾಲಯಕ್ಕೆ ತಿಳಿಸಿದೆ.

ಸುಪ್ರೀಂ ತೀರ್ಪಿನ ಮುಖ್ಯಾಂಶಗಳು...

1. ವಸೆ ಕಾರ್ಮಿಕರ ರೈಲು, ಬಸ್ ಪ್ರಯಾಣ ದರವನ್ನು ಆಯಾ ರಾಜ್ಯ ಸರಕಾರಗಳೇ ಭರಿಸಬೇಕು.

2. ವಲಸೆ ಕಾರ್ಮಿಕರ ರೈಲು ಅಥವಾ ಬಸ್ ಪ್ರಯಾಣಕ್ಕೆ ಯಾವುದೇ ಶುಲ್ಕ ವಿಧಿಸಕೂಡದು.

3. ವಲಸೆ ಕಾರ್ಮಿಕರ ರವಾನೆಗೆ ರೈಲುಗಳನ್ನು ಒದಗಿಸುವಂತೆ ರಾಜ್ಯ ಸರಕಾರ ಬೇಡಿಕೆ ಸಲ್ಲಿಸಿದಾಗಲೆಲ್ಲಾ ರೈಲ್ವೆ ಇಲಾಖೆಯು ಅವುಗಳನ್ನು ಒದಗಿಸಬೇಕು.

4. ಲಾಕ್‌ಡೌನ್‌ನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ, ಅವರಿರುವ ಸ್ಥಳದಲ್ಲಿ ಆಯಾ ರಾಜ್ಯ ಸರಕಾರವು ಅವರಿಗೆ ಆಹಾರ, ನೀರನ್ನು ಒದಗಿಸಬೇಕು.

5. ವಲಸೆ ಕಾರ್ಮಿಕರ ರೈಲು ಪ್ರಯಾಣದ ವೇಳೆ, ಅವರು ಎಲ್ಲಿ ರೈಲನ್ನು ಹತ್ತಿರುವರೋ ಅಲ್ಲಿನ ರಾಜ್ಯ ಸರಕಾರವು ಆಹಾರ ಹಾಗೂ ನೀರನ್ನು ಒದಗಿಸಬೇಕು. ರೈಲು ಪ್ರಯಾಣದ ಅವಧಿಯಲ್ಲಿ ರೈಲ್ವೆ ಇಲಾಖೆಯು ಊಟ, ನೀರನ್ನು ಪೂರೈಕೆ ಮಾಡಬೇಕು. ಬಸ್‌ಗಳಲ್ಲಿಯೂ ಆಹಾರ ಹಾಗೂ ನೀರಿನ ವ್ಯವಸ್ಥೆಯಿರಬೇಕು.

6. ವಲಸೆ ಕಾರ್ಮಿಕರ ನೋಂದಣಿ, ಅವರು ರೈಲು ಅಥವಾ ಬಸ್ಸನ್ನೇರುವ ದಿನಾಂಕ ಇತ್ಯಾದಿ ವಿಷಯಗಳ ಮೇಲ್ವಿಚಾರಣೆಯನ್ನು ರಾಜ್ಯ ಸರಕಾರವೇ ವಹಿಸಿಕೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟವರೆಲ್ಲರಿಗೂ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು.

7. ವಲಸೆ ಕಾರ್ಮಿಕರು ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಲ್ಲಿ ಅವರನ್ನು ಕೂಡಲೆ ಆಶ್ರಯತಾಣಗಳಿಗೆ ಕೊಂಡೊಯಬೇಕು ಹಾಗೂ ಅವರಿಗೆ ಆಹಾರ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News