ಈ ಬಾರಿಯೂ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸುವ ಸಂಭವ ಹೆಚ್ಚಿದೆ: ಚಿಕ್ಕಮಗಳೂರು ಡಿಸಿ

Update: 2020-05-28 16:43 GMT

ಚಿಕ್ಕಮಗಳೂರು, ಮೇ 28: ಕಳೆದ ಬಾರಿಯಂತೆ ಈ ಬಾರಿ ಮುಂಗಾರು ಹಂಗಾಮಿನ ವೇಳೆ ಜಿಲ್ಲೆಯ ಯಾವ ಭಾಗದಲ್ಲಾದರೂ ಪ್ರವಾಹ ಸಂಭವಿಸಿದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2020-21ರ ಬೇಸಿಗೆ ಹಾಗೂ ಮಳೆಗಾಲದ ಅವಧಿಯಲ್ಲಿ ಉದ್ಭವಿಸಬಹುದಾದ ವಿಪತ್ತು ಮತ್ತು ಹಾನಿಗಳ ಸಮಗ್ರ ಸಮೀಕ್ಷೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿಯ ಹಾಗೇ ಮುಂಗಾರಿನಲ್ಲಿ ಜಿಲ್ಲೆಯ ಯಾವ ಭಾಗದಲ್ಲಾ ದರೂ ಪ್ರವಾಹ ಸಂಭವಿಸುವ ನಿರೀಕ್ಷೆ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ತಾಲೂಕುಗಳ ವ್ಯಾಫ್ತಿಯಲ್ಲೂ ತಹಶೀಲ್ದಾರ್‍ಗಳ ನೇತೃತ್ವದಲ್ಲಿ ಅಧಿಕಾರಿಗಳು ಟಾಸ್ಕ್‍ಫೋರ್ಸ್ ಸಭೆ ನಡೆಸಿ ಆಯಾ ಕಾರ್ಯವ್ಯಾಪ್ತಿಯ ಭಾಗಗಳಲ್ಲಿ ನಿರಾಶ್ರಿತರಿಗೆ  ಉಳಿಯಲು ಅಗತ್ಯವಿರುದ ಸ್ಥಳ, ನೀರು, ಆಹಾರ, ವಿದ್ಯುತ್, ಸೇರಿದಂತೆ ಮೂಲಭೂತ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು. ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ವ್ಯವಸ್ಥೆಯನ್ನೂ ರೂಪಿಸಬೇಕು ಎಂದರು.

ಹಿಂದಿನ ಪ್ರವಾಹದ ವೇಳೆ ನಿರಾಶ್ರಿತರಿಗೆ ಉಳಿಯಲು ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೊರೋನಾ ಸೋಂಕು ಇರುವ ಕಾರಣ ಜಿಲ್ಲೆಯ ಹಾಸ್ಟೆಲ್‍ಗಳಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಇರಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಒಟ್ಟು 182 ವಸತಿ ನಿಲಯ ಗಳಿದ್ದು, ಇವು ಸುಸ್ಸಜ್ಜಿತವಾಗಿರುವ ಬಗ್ಗೆ ಮಾಹಿತಿ ಪಡೆದು ದುರಸ್ತಿ ಹಾಗೂ ಸಮಸ್ಯೆಗಳಿದ್ದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮುಖ್ಯವಾಗಿ ಮೂಡಿಗೆರೆ ಮತ್ತು ಕಳಸ ಭಾಗದಲ್ಲಿ ಮಳೆಗಾಲದಲ್ಲಿ ವಿದ್ಯುತ್ ಹಾಗೂ ರಸ್ತೆ ಸಮಸ್ಯೆಗಳು ಹೆಚ್ಚಾಗಲಿವೆ. ಈ ಬಗ್ಗೆ ಮೆಸ್ಕಾಂ ಹಾಗೂ ಪಿ.ಡಬ್ಲು.ಡಿ ಅಧಿಕಾರಿಗಳು ಕ್ರಮವಹಿಸಿ ಮುಂಜಾಗ್ರತೆಯಾಗಿ ವಿದ್ಯುತ್ ತಂತಿಗಳು ಹಾಗೂ ಟ್ರಾನ್ಸ್ ಫಾರಂಗಳ ಪರಿಶೀಲನೆ ನಡೆಸಬೇಕು. ಉರುಳುವ ಹಂತದಲ್ಲಿರುವ ಮರಗಳಿದ್ದಲ್ಲಿ ತೆರವುಗೊಳಿಸಬೇಕು. ಕಚ್ಚಾ ರಸ್ತೆಗಳಿದ್ದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರಿಗೆ ಓಡಾಟಕ್ಕೆ ಅನುವಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಪ್ರತೀ ತಾಲೂಕುಗಳಲ್ಲಿ ಇಂತಹ ಸಂದರ್ಭ ಕಾಮಗಾರಿಗೆ ಅನುಕೂಲವಾಗುವಂತೆ ಲಭ್ಯವಿರುವ ಜೆ,ಸಿ.ಬಿ ಹಾಗೂ ಹಿಟಾಚಿಗಳ ಕೊರತೆ ಇದ್ದಲ್ಲಿ ಪಕ್ಕದ ಜಿಲ್ಲೆಗಳಿಂದ ತರಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಹದ ಮುಂಜಾಗ್ರತೆಗಾಗಿ ಜಿಲ್ಲೆಯಲ್ಲಿನ ಎಲ್ಲಾ ಸ್ಥಳೀಯ ಆರೋಗ್ಯ ಕೇಂದ್ರಗಳ ವೈದ್ಯರುಗಳೊಂದಿಗೆ ಚರ್ಚಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಹಾಗೂ ಔಷಧಗಳು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು.  ಎನ್,ಆರ್.ಪುರ ಹಾಗೂ ಬಾಳೆಗದ್ದೆ ಪ್ರದೇಶಗಳಲ್ಲಿ ನದಿ ಪ್ರದೇಶಗಳಿದ್ದು, ಅಲ್ಲಿನ ಜನತೆಗೆ ಬೋಟಿಂಗ್ ಅನುಕೂಲವಾಗುವಂತಿದ್ದಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ವಿವಿಧ ತಾಲೂಕುಗಳ ತಹಶೀಲ್ದಾರ್‍ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಳೆದ ಬಾರಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗಾಗಿ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಕೆಲವರು ಮನೆ ನಿರ್ಮಿಸಿಕೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದು ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಪರಿಹರಿಸಿ ಮನೆ ನಿರ್ಮಾಣಕ್ಕೆ ಕ್ರಮವಹಿಸಬೇಕು. ಕಾಫಿ ಹಾಗೂ ಇತರ ಬೆಳೆಗಳು ಹಾನಿಯಾಗಿದ್ದಲ್ಲಿ ಭೇಟಿ ನೀಡಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕು.

ಜಾನುವಾರುಗಳಿಗೆ ಸೂಕ್ತ ಮೇವು ಇರುವಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಪ್ರವಾಹದ ಹಿನ್ನೆಲೆ ಚಾನೆಲ್ ಮತ್ತು ಅಸುರಕ್ಷಿತ ಪ್ರದೇಶಗಳಲ್ಲಿ ನೆಲೆಸಿರುವವರನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿದ್ದಲ್ಲಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು.
- ಡಾ. ಬಗಾದಿಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News