ಭಾರತ ವಿರುದ್ಧದ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯ

Update: 2020-05-29 05:37 GMT
File Photo

ಮೆಲ್ಬೋರ್ನ್, ಮೇ 28: ಭಾರತ ತಂಡ ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ನಾಲ್ಕು ಟೆಸ್ಟ್, ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯು ಒಳಗೊಂಡಿದೆ ಎಂದು ಗುರುವಾರ ಘೋಷಿಸಿರುವ ಕ್ರಿಕೆಟ್ ಆಸ್ಟ್ರೇಲಿಯ ಹಲವು ವಾರಗಳಿಂದ ಕೇಳಿಬಂದ ಊಹಾಪೋಹಗಳಿಗೆ ತೆರೆ ಎಳೆದಿದೆ.

ಕೋವಿಡ್-19 ಭೀತಿಯ ನಡುವೆಯೂ ಬಹು ನಿರೀಕ್ಷಿತ ಬೇಸಿಗೆ ಕ್ರಿಕೆಟ್ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯ ಘೋಷಿಸಿದ್ದು, ಆಗಸ್ಟ್ 9ರಿಂದ ಝಿಂಬಾಬ್ವೆ ವಿರುದ್ಧ ಅದರದೇ ನೆಲದಲ್ಲಿ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ತನ್ನ ಕ್ರಿಕೆಟ್ ಪ್ರವಾಸ ಆರಂಭಿಸಲಿದೆ.

ಭಾರತ ಕ್ರಿಕೆಟ್ ತಂಡ ಅಕ್ಟೋಬರ್ 11ರಂದು ಬ್ರಿಸ್ಬೇನ್‌ನಲ್ಲಿ ಟ್ವೆಂಟಿ-20 ಸರಣಿಯನ್ನು ಆಡುವುದರೊಂದಿಗೆ ಆಸ್ಟ್ರೇಲಿಯ ಪ್ರವಾಸವನ್ನು ಆರಂಭಿಸಲಿದೆ. ಅಕ್ಟೋಬರ್ 14(ಕ್ಯಾನ್‌ಬೆರ್ರಾ) ಹಾಗೂ 17ರಂದು(ಅಡಿಲೇಡ್) ಇನ್ನೆರಡು ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಟ್ವೆಂಟಿ-20 ಸರಣಿ ಮುಗಿದ ಬಳಿಕ ವಿರಾಟ್ ಕೊಹ್ಲಿ ಬಳಗ ಡಿಸೆಂಬರ್ 3ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಕ್ಕೆ ವಾಪಸಾಗಲಿದೆ. ಟೆಸ್ಟ್ ಸರಣಿಯ ಬಳಿಕ ಜನವರಿ 12ರಿಂದ ಪರ್ತ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

‘‘ಸಂದರ್ಭಗಳು ಅಥವಾ ಸ್ಪರ್ಧೆಗಳು ನಮ್ಮ ನಿಯಂತ್ರಣವನ್ನು ಮೀರಿದ್ದು ಎನ್ನುವ ವಿಚಾರ ನಮಗೆ ಗೊತ್ತಿದೆ. ಇಂದು ಬಿಡುಗಡೆಯಾಗಿರುವ ವೇಳಾಪಟ್ಟಿಯು ಅಂತಿಮ ವೇಳಾಪಟ್ಟಿ ಬಿಡುಗಡೆಯಾಗುವಾಗ ಭಿನ್ನವಾಗಿ ಕಾಣುವ ಸಾಧ್ಯತೆಯಿದೆ. ಆದರೆ, ಈ ಬೇಸಿಗೆಯಲ್ಲೇ ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಡೆಯುವ ನಿಟ್ಟಿಲ್ಲಿ ಎಲ್ಲ ಪ್ರಯತ್ನ ನಡೆಸುತ್ತೇವೆ. ಅಗತ್ಯವಿದ್ದರೆ, ವೇಳಾಪಟ್ಟಿಯ ಬದಲಾವಣೆಯ ಬಗ್ಗೆ ನಾವು ಮಾಹಿತಿ ಹಂಚಿಕೊಳ್ಳುತ್ತೇವೆ’’ಎಂದು ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಕೇವಿನ್ ರಾಬರ್ಟ್ಸ್ ಹೇಳಿದ್ದಾರೆ. ಭಾರತದ ಮಹಿಳಾ ತಂಡ ಕೂಡ ಏಕದಿನ ಸರಣಿಯನ್ನಾಡಲು ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಳ್ಳಲಿದೆ. ಕ್ಯಾನ್‌ಬೆರ್ರಾ(ಜನವರಿ 22), ಮೆಲ್ಬೋರ್ನ್(ಜನವರಿ 25) ಹಾಗೂ ಹೊಬರ್ಟ್‌ನಲ್ಲಿ(ಜನವರಿ 28)ಏಕದಿನ ಸರಣಿಯನ್ನು ಆಡಲಿದೆ.

ಭಾರತ ವಿರುದ್ಧ ಆಸ್ಟ್ರೇಲಿಯ ಸರಣಿ ವೇಳಾಪಟ್ಟಿ

ಪುರುಷರ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿ

ಮೊದಲ ಟ್ವೆಂಟಿ-20: ಅಕ್ಟೋಬರ್ 11, ಗಾಬಾ, ಬ್ರಿಸ್ಬೇನ್

ಎರಡನೇ ಟ್ವೆಂಟಿ-20: ಅಕ್ಟೋಬರ್ 14, ಮನುಕಾ ಓವಲ್, ಕ್ಯಾನ್‌ಬೆರ್ರಾ

ಮೂರನೇ ಟ್ವೆಂಟಿ-20: ಅಕ್ಟೋಬರ್ 17, ಅಡಿಲೇಡ್ ಓವಲ್

ಪುರುಷರ ಟೆಸ್ಟ್ ಸರಣಿ

ಮೊದಲ ಟೆಸ್ಟ್: ಡಿ.3-7, ಗಾಬಾ, ಬ್ರಿಸ್ಬೇನ್

ಎರಡನೇ ಟೆಸ್ಟ್: ಡಿ.11-15, ಅಡಿಲೇಡ್ ಓವಲ್(ಹಗಲು-ರಾತ್ರಿ)

ಮೂರನೇ ಟೆಸ್ಟ್: ಡಿ.26-30, ಎಂಸಿಜಿ, ಮೆಲ್ಬೋರ್ನ್

ನಾಲ್ಕನೇ ಟೆಸ್ಟ್: ಜನವರಿ 3-7, ಎಸ್‌ಸಿಜಿ, ಸಿಡ್ನಿ

ಪುರುಷರ ಏಕದಿನ ಸರಣಿ

ಮೊದಲ ಏಕದಿನ: ಜನವರಿ 12,ಪರ್ತ್ ಸ್ಟೇಡಿಯಂ

ಎರಡನೇ ಏಕದಿನ: ಜನವರಿ 15, ಎಂಸಿಜಿ

 ಮೂರನೇ ಏಕದಿನ: ಜನವರಿ 17, ಎಸ್‌ಸಿಜಿ

ಮಹಿಳೆಯರ ಏಕದಿನ ಸರಣಿ

ಮೊದಲ ಏಕದಿನ: ಜನವರಿ 22, ಮನುಕಾ ಓವಲ್, ಕ್ಯಾನ್‌ಬೆರ್ರಾ

ಎರಡನೇ ಏಕದಿನ: ಜನವರಿ 25, ಜಂಕ್ಷನ್ ಓವಲ್, ಮೆಲ್ಬೋರ್ನ್

ಮೂರನೇ ಏಕದಿನ: ಜನವರಿ 28, ಬ್ಲಂಡ್‌ಸ್ಟೋನ್ ಅರೆನಾ, ಹೊಬರ್ಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News