ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾನೂನು ತಿದ್ದುಪಡಿ ವಿರುದ್ಧ ಹೋರಾಟಕ್ಕೆ ರೈತ ಸಂಘ ನಿರ್ಣಯ

Update: 2020-05-29 16:17 GMT

ಬೆಂಗಳೂರು, ಮೇ 29: ಕೃಷಿ ವಲಯಕ್ಕೆ ಬಂದೊದಗಿದ ಅಪಾಯಗಳಲ್ಲಿ ಮೊದಲನೆಯದು ಭೂ ಸುಧಾರಣಾ ಕಾಯ್ದೆ. ಈ ಕಾಯ್ದೆ ಕೇವಲ ರೈತರ ಉದ್ಧಾರಕ್ಕೆ ಆಗಲಿ ಅಥವಾ ಸಾರ್ವಜನಿಕರ ಹಿತಾಸಕ್ತಿಗೆ ಆಗಲಿ ಅಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಇದು ವಿದೇಶಿ ಕಂಪನಿಗಳು ಮತ್ತು ಕಾರ್ಪೋರೆಟ್ ಕಂಪನಿಗಳ ಪ್ರವೇಶಕ್ಕಾಗಿ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಇದರಿಂದ ಕೃಷಿಯಿಂದ ರೈತನನ್ನು ಹೊರದೂಡುವ ಕಾರ್ಯತಂತ್ರವೆ ಕಾಯ್ದೆಯ ತಿದ್ದುಪಡಿಯ ಮುಖ್ಯ ಅಂಶವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಈಗಾಗಲೆ ಸುಗ್ರೀವಾಜ್ಞೆಯೊಂದಿಗೆ ಹೊರ ಬಂದಿದ್ದು, ಈ ಸುಗ್ರೀವಾಜ್ಞೆ ರೈತನಿಂದ ರೈತನ ಮಾರುಕಟ್ಟೆಯನ್ನು ಕೈ ತಪ್ಪಿಸುವಂತಹ ಒಂದೇ ಉದ್ದೇಶ ಇದಾಗಿತ್ತು. ಈ ಕಾರಣಕ್ಕಾಗಿ ಎಪಿಎಂಸಿ ಕಾಯ್ದೆ ಕಲಂ 8ರ ತಿದ್ದುಪಡಿಯು ಬರುವ ಎಂಎನ್‍ಸಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಯಾವುದೆ ಬಾಧಕವಿಲ್ಲದ ಅವಕಾಶಗಳನ್ನು ಕಲ್ಪಿಸಿ, ರೈತನ ಕೃಷಿ ಮಾರುಕಟ್ಟೆಗೆ ಪರ್ಯಾಯವಾಗಿ ಕಂಪನಿಗಳೇ ಮಾರುಕಟ್ಟೆಯನ್ನು ತೆರೆಯಬಹುದಾದಂತಹ ಅವಕಾಶವನ್ನು ನೀಡಲಾಗಿದೆ. ಹಾಗಾಗಿ ರೈತ ಮಾರುಕಟ್ಟೆಯನ್ನು ಕಳೆದುಕೊಂಡು ನಾಳೆ ಕಂಪನಿಯ ಮುಂದೆ ತಲೆಬಗ್ಗಿಸಿ ನಿಲ್ಲುವಂತಹ ನೀತಿಯನ್ನು ತರಲಾಗಿದೆ ಎಂದು ಅವರು ದೂರಿದ್ದಾರೆ.

ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಣೆ ಮಾಡಿ ಕೃಷಿ ವಲಯಕ್ಕೆ ಬಹಳ ದೊಡ್ಡ ಸಹಾಯ ಹಸ್ತವನ್ನು ನೀಡಿದೆ. ಇದರಲ್ಲಿ 1 ಲಕ್ಷದ 63 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಸರಕಾರ ಘೋಷಣೆ ಮಾಡಿದೆ. ಇದರಲ್ಲಿ ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ಕಾರ್ಯಕ್ರಮ ಘೋಷಣೆಯಾಗಿದೆ. ಇದು ಕಾರ್ಪೋರೇಟ್ ಕಂಪನಿಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಎಂಬುದು ಕಂಡು ಬರುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಹಾಗೆಯೇ ಹೈನುಗಾರಿಕೆಯಲ್ಲಿ ವಿದೇಶಿ ಕಂಪನಿಗಳನ್ನು ಉತ್ತೇಜಿಸಲು ಉದಾಹರಣೆಗೆ ಗುಜರಾತಿನ ಆನಂದ ಡೈರಿ, ಕರ್ನಾಟಕದ ಕೆಎಂಎಫ್(ನಂದಿನಿ) ಇದಕ್ಕೆ ಪರ್ಯಾಯವಾದ ಖಾಸಗಿ ಪಾಲುದಾರಿಕೆಯನ್ನು ಉತ್ತೇಜಿಸಲು ಸೂಚಿಸಲಾಗಿದೆ. ಇದರಿಂದ ಕೃಷಿ ಮತ್ತು ಹೈನುಗಾರಿಕೆಯನ್ನು ಖಾಸಗಿ ಕಂಪನಿಗಳ ಪ್ರವೇಶಕ್ಕೆ ಅನುವು ಮಾಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಇದೆಲ್ಲ ಸಾಲದೆಂಬಂತೆ ಸಾಮಾನ್ಯ ರೈತನಿಗೆ ಕೃಷಿಯು ದುಬಾರಿ ಆಗಲೆಂದು ಅವನ ಉತ್ಪನ್ನಗಳಿಗೆ ಯೋಗ್ಯ ಬೆಲೆಯನ್ನು ನೀಡದೆ ಕನಿಷ್ಠ ಬೆಲೆಯ ಕನಿಷ್ಠ ದರವನ್ನು ನೀಡಿ ರೈತನಿಗೆ ದೀರ್ಘಕಾಲದ ಶೋಷಣೆಯನ್ನು ಮುದುವರಿಸಿಕೊಂಡು ಬಂದಿದೆ. ಮಾಡಿದ ಸಾಲವನ್ನು ತೀರಿಸಲಾಗದ ರೈತ ಆತ್ಮಹತ್ಯೆ ಎಂಬ ಸಾವಿನ ದಾರಿಯನ್ನು ಹಿಡಿದಿದ್ದಾನೆ. ಅವನ ಮಕ್ಕಳು ಈ ಸಾವು ಬೇಡ, ಈ ಕೃಷಿಯು ಬೇಡ ಎಂದು ವಲಸೆ ಹೋಗುವಂತಹ ಒತ್ತಡವನ್ನು ಸರಕಾರಗಳು ಮುಂದುವರಿಸಿಕೊಂಡು ಬಂದಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಭಾರತ ಸರಕಾರ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗಿ ವಲಯಕ್ಕೆ ನೀಡುವಂತಹ ತೀರ್ಮಾನವನ್ನು ಘೋಷಣೆ ಮಾಡಿದೆ. ಇನ್ನು ಮುಂದೆ ಕೃಷಿ ವಲಯಕ್ಕೆ ಬಳಸುವ ವಿದ್ಯುತ್‍ಗೆ ಸಹಾಯ ಇರುವುದಿಲ್ಲವೆಂದು ಭಾರತ ಹೇಳಿದೆ.  ರಾಜ್ಯ ಸರಕಾರಗಳಿಗೆ ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡಬಹುದೆಂದು ತಿಳಿಸಿದೆ. ಇದರಿಂದ ಕೃಷಿ ಬಳಕೆಯ ವಿದ್ಯುತ್ ದುಬಾರಿಯಾಗಲಿದೆ. ರೈತರು ವಿದ್ಯುತ್  ಮಾಡುವುದು ಕಷ್ಟವಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಈ ಹಿಂದೆ 2003ರಲ್ಲಿ ಭಾರತ ಸರಕಾರ ವಿದ್ಯುತ್ ಖಾಸಗೀಕರಣ ತರಲು ಪ್ರಯತ್ನ ಮಾಡಿತ್ತು. ಅಂಥಹ ಪ್ರಯತ್ನವನ್ನು ವಿಫಲಮಾಡಿಸುವಲ್ಲಿ ರೈತರ ಹೋರಾಟ ಸಾಕ್ಷಿಯಾಯಿತು. ಕರ್ನಾಟಕದಲ್ಲಿ ಖಾಸಗಿ ವಲಯಕ್ಕೆ ವರ್ಗಾವಣೆ ಆಗಬೇಕಾಗಿದ್ದ ವಿದ್ಯುತ್ ಕಂಪನಿಯು ತನ್ನಲೇ ಉಳಿಸಿಕೊಂಡು ಐದು ವಿಭಾಗಗಳನ್ನಾಗಿ ಮಾಡಲಾಯಿತು ಎಂದು ಅವರು ಸ್ಮರಿಸಿದ್ದಾರೆ.

ವಿದ್ಯುತ್ ವಿತರಣೆ ಮಾಡುವಂತ ಸಂಸ್ಥೆಗೆ ಕೆಪಿಟಿಸಿಎಲ್ ಎಂದು ನಾಮಕರಣ ಮಾಡಲಾಯಿತು. ಉತ್ಪಾದನಾ ಕಂಪನಿಗೆ ಕೆಪಿಸಿಎಲ್ ಎಂದು ನಾಮಕರಣ ಮಾಡಲಾಯಿತು. ಆ ಸಂಸ್ಥೆಗಳನ್ನು  ಈಗ ಸಂಪೂರ್ಣ ಖಾಸಗೀಕರಣದ ಭರಾಟೆಯಲ್ಲಿ ಸರಕಾರದ ಸ್ವಾಮ್ಯದಲ್ಲಿದ್ದ ಸಂಸ್ಥೆಗಳನ್ನು ಖಾಸಗಿಯಾಗಿ ವರ್ಗಾಯಿಸುವ ಸಂದರ್ಭ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಸಮರ್ಥವಾಗಿ ಎದರಿಸಲು ರೈತ ಚಳವಳಿಯನ್ನು ಸಿದ್ಧಗೊಳಿಸಬೇಕಾಗಿದೆ. ಈ ಸರಕಾರಗಳ ದೇಶಾಭಿಮಾನ ಮತ್ತು ದೇಶದ ಸಾರ್ವಭೌಮತೆಗೆ ಅಪಾಯ ತರುವ ತೀರ್ಮಾನಗಳನ್ನು ಜಾರಿಗೆ ತಂದಿರುವ ಕಾರಣ ನಾವೆಲ್ಲ ವಿರೋಧ ಮಾಡಬೇಕಾಗಿದೆ. ಇದನ್ನು ಹಿಮ್ಮೆಟ್ಟಿಸಲು ರೈತ ಹೋರಾಟ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ರೈತ ಪಂಪ್‍ಸೆಟ್‍ಗಳಿಗೆ ಹಾಕಲಾದ ಮೀಟರ್ ಗಳನ್ನು ಕಿತ್ತೊಗೆದು ಈ ಖಾಸಗೀಕರಣವನ್ನು ನಿಲ್ಲಿಸಲಾಯಿತು. ಇದೇ ರೀತಿಯಲ್ಲಿ ಮುಂದುವರೆದ ಭಾಗವಾಗಿ ಎಪಿಎಂಸಿ ಕಾನೂನು ತಿದ್ದುಪಡಿ ವಿರುದ್ಧ ಹಾಗೂ ವಿದ್ಯುತ್ ಖಾಸಗೀಕರಣ ವಿರುದ್ದ, ಕೃಷಿಗೆ ಕಾರ್ಪೋರೇಟ್ ಕಂಪನಿ ಪ್ರವೇಶದ ವಿರುದ್ಧ ಹೋರಾಟ ನಿರ್ಣಯ ಕೈಗೊಳ್ಳಲು ಜೂನ್ 8 ರಂದು ದಾವಣಗೆರೆಯಲ್ಲಿ ರಾಜ್ಯ ಸಮಿತಿ ಸಭೆ ಕರೆಯಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News