ಚಿಕ್ಕಬಳ್ಳಾಪುರ: ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು, ಎಸ್‍ಪಿ ಕಚೇರಿ ಸೀಲ್‍ಡೌನ್

Update: 2020-05-29 16:18 GMT

ಚಿಕ್ಕಬಳ್ಳಾಪುರ, ಮೇ.29: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನ ಸೋಂಕು ಗ್ರಾಮೀಣ ಪ್ರದೇಶಕ್ಕೆ ಹಬ್ಬುವ ಜೊತೆಗೆ ಪೊಲೀಸ್ ಸಿಬ್ಬಂದಿಗೂ ತಗಲಿದ್ದು, ಕಳೆದ ಮೂರು ತಿಂಗಳಿನಿಂದ ನಿಯಂತ್ರಣದಲ್ಲಿದ್ದ ಸೋಂಕು ಈಗ ಗ್ರಾಮೀಣ ಪ್ರದೇಶದತ್ತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮುಂಬೈ ವಲಸೆ ಕಾರ್ಮಿಕರಿಗೆ ಹಬ್ಬಿರುವ ಸೋಂಕು ತೀವ್ರವಾಗಿದ್ದು, ಇದು ಶತಕ ಮೀರಿ ಬೆಳೆದಿದ್ದರೆ, ಜಿಲ್ಲೆಯಲ್ಲಿ ಪತ್ತೆಯಾಗಿದ್ದ 27 ಸೋಂಕಿತರಿಂದ ಇತರರಿಗೆ ಸೋಂಕು ಹಬ್ಬದಂತೆ ಜಿಲ್ಲಾಡಳಿತ ತೀವ್ರವಾಗಿಯೇ ಶ್ರಮಿಸುವ ಮೂಲಕ ಜಿಲ್ಲೆಯಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಣದಲ್ಲಿ ಇರಿಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ತೀವ್ರ ರೂಪ ತಾಳುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪೊಲೀಸ್ ಸಿಬ್ಬಂದಿಗೂ ಹಬ್ಬಿದ ಸೋಂಕು: ರಾಜ್ಯದ ಹಲವು ಪ್ರದೇಶಗಳಲ್ಲಿ ಪೊಲೀಸರನ್ನು ತೀವ್ರವಾಗಿ ಕಾಡುತ್ತಿದ್ದ ಸೋಂಕು ಇದೀಗ ಜಿಲ್ಲೆಯಲ್ಲಿಯೂ ಆರಂಭವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ವೈರ್ ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 30 ವರ್ಷದ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದ ಪೊಲೀಸ್ ಇಲಾಖೆಯಲ್ಲಿಯೂ ಆತಂಕ ತೀವ್ರವಾಗಿದೆ.

ಇವರು ನಗರ ಹೊರವಲಯದ ಎಸ್‍ಪಿ ಕಚೇರಿಯ ವೈರ್ ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಸೋಂಕು ಬಂದಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಇತ್ತೀಚಿಗೆ ಸೋಂಕಿತ ಸಿಬ್ಬಂದಿ ರಾಮನಗರಕ್ಕೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದ್ದು, ಇದೇ ವೇಳೆ ಸೋಂಕು ಹಬ್ಬಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿರ್ಧಿಷ್ಟವಾಗಿ ಸೋಂಕು ಹಬ್ಬಿರುವ ಮೂಲ ಮಾತ್ರ ಇನ್ನೂ ಪತ್ತೆಯಾಗಬೇಕಿದೆ.

ವೈರ್ ಲೆಸ್ ವಿಭಾಗ ನಂದಿಗೆ ಸ್ಥಳಾಂತರ: ಚಿಕ್ಕಬಳ್ಳಾಪುರ ಎಸ್‍ಪಿ ಕಚೇರಿಯ ವೈರ್ ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವೈರ್ ಲೆಸ್ ವಿಭಾಗವನ್ನು ತಾತ್ಕಾಲಿಕವಾಗಿ ನಂದಿಗಿರಿಧಾಮ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. ಇನ್ನು ಇಡೀ ಎಸ್‍ಪಿ ಕಚೇರಿಯನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು, ಮುಂದಿನ ಮೂರು ದಿನಗಳ ಕಾಲ ಎಸ್‍ಪಿ ಕಚೇರಿ ಸ್ಯಾನಿಟೈಸ್ ಮಾಡುವ ಜೊತೆಗೆ ಸೀಲ್ ಡೌನ್ ಮಾಡಲಾಗಿದೆ.

ಜೊತೆಗೆ ಚಿಕ್ಕಬಳ್ಳಾಪುರ ಪೊಲೀಸ್ ವಸತಿ ಗೃಹದಲ್ಲಿ ಸೋಂಕಿತ ಸಿಬ್ಬಂದಿ ವಾಸವಿದ್ದ ವಸತಿ ಸಮುಚ್ಚಯವನ್ನೂ ಸ್ಯಾನಿಟೈಸ್ ಮಾಡಿ, ಸೀಲ್‍ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ವೈರ್ ಲೆಸ್ ವಿಭಾಗ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದೇ ವಿಭಾಗದಲ್ಲಿ ಪ್ರಸ್ತುತ ಸೋಂಕು ಪತ್ತೆಯಾಗಿರುವುದರಿಂದ ವೈರ್‍ ಲೆಸ್ ಕರ್ತವ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಂದಿ ಪೊಲೀಸ್ ಠಾಣೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ಗ್ರಾಮೀಣ ಪ್ರದೇಶಕ್ಕೂ ಹಬ್ಬಿದ ಸೋಂಕು: ಈವರೆಗೆ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಸೋಂಕು ಇದೀಗ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ತೀವ್ರವಾಗಿದ್ದು, ನಗರ ಹೊರವಲಯದ ಹಾರೋಬಂಡೆ ಗ್ರಾಮದ ನಿವಾಸಿ ಮತ್ತು ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿ ಸಿರಿಡಿ ಸಾಯಿಬಾಬಾ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಾರೋಬಂಡೆ ಗ್ರಾಮದಲ್ಲಿ ವಾಸವಿದ್ದರು ಎನ್ನಲಾಗಿದೆ. ಸೋಂಕಿತನನ್ನು ಈಗಾಗಲೇ ಚಿಕ್ಕಬಳ್ಳಾಪುರ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗ್ರಾಮದಲ್ಲಿ ಸೋಂಕಿತ ವಾಸವಿದ್ದ ಮನೆ ಸೇರಿದಂತೆ ಬೀದಿಯನ್ನು ರಾಸಾಯನಿಕ ಮಿಶ್ರಿತ ನೀರಿನಿಂದ ಸ್ಯಾನಿಟೈಸ್ ಮಾಡಲಾಗಿದೆ.

ಚಿಂತಾಮಣಿಯಲ್ಲಿ ಮತ್ತೊಂದು ಸೋಂಕು ದೃಢ: ಈ ಹಿಂದೆ ಚಿಂತಾಮಣಿಯಲ್ಲಿ ಮೊದಲಿಗೆ ಸೋಂಕು ದೃಢಪಟ್ಟಿದ್ದ ವೃದ್ದ ವ್ಯಕ್ತಿಯ ಮೊಮ್ಮಗನಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ವೃದ್ದರಿಗೆ ಸೋಂಕು ದೃಢಪಟ್ಟ ದಿನವೇ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದ್ದು, ಶುಕ್ರವಾರ ಪತ್ತೆಯಾದ ಸೋಂಕಿತನೊಂದಿಗೆ ಒಂದೇ ಕುಟುಂಬದ ಆರು ಮಂದಿಗೆ ಸೋಂಕು ದೃಢಪಟ್ಟಿದೆ.

ಮುಂಬೈ ವಲಸೆ ಕಾರ್ಮಿಕರಿಗೂ ದೃಢ: ಮುಂಬೈನಿಂದ ರಾಜ್ಯಕ್ಕೆ ಆಗಮಿಸಿದ್ದ ಒಟ್ಟು 253 ಮಂದಿ ವಲಸೆ ಕಾರ್ಮಿಕರಲ್ಲಿ ಈಗಾಗಲೇ 104 ಮಂದಿಗೆ ಸೋಂಕು ದೃಢಪಟ್ಟಿದ್ದು, ಶುಕ್ರವಾರ 28 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಮುಂಬೈ ವಲಸೆ ಕಾರ್ಮಿಕರಲ್ಲಿ 105 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ 27 ಮಂದಿ ವಲಸೆ ಕಾರ್ಮಿಕರ ವರದಿ ಬರಬೇಕಿದೆ. ಹಾಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ 135 ಸೋಂಕಿತರು: ಕಳೆದ ಮಾ.22 ರಂದು ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ವಿದೇಶದಿಂದ ಬಂದಿದ್ದ ವ್ಯಕ್ತಿಗೆ ಸೋಂಕು ಪತ್ತೆಯಾಗುವ ಮೂಲಕ ಆರಂಭವಾದ ಸೋಂಕು ಇದೀಗ 135ಕ್ಕೆ ಮುಟ್ಟಿದೆ. ಇದರಲ್ಲಿ 105 ಮಂದಿ ಮುಂಬೈ ವಲಸೆ ಕಾರ್ಮಿಕರಾಗಿದ್ದರೆ, ಉಳಿದ 30 ಮಂದಿ ಮಾತ್ರ ಜಿಲ್ಲೆಯಲ್ಲಿ ಸೋಂಕು ಪತ್ತೆಯಾದ ವ್ಯಕ್ತಿಗಳಾಗಿದ್ದಾರೆ.

ಇವರಲ್ಲಿ ಮೂರು ಮಂದಿ ಮೃತಪಟ್ಟಿದ್ದು, 20 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 8 ಮಂದಿ ಮಾತ್ರ ಪ್ರಸ್ತುತ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂಬೈ ವಲಸೆ ಕಾರ್ಮಿಕರೆಲ್ಲರೂ ಪ್ರಸ್ತುತ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News