ಊರಿಗೆ ವಾಪಸಾದ ಕಾರ್ಮಿಕರಿಗೆ ಒಪ್ಪೊತ್ತಿನ ಊಟವೇ ಗತಿ: 16 ಕೋಟಿಗೂ ಅಧಿಕ ಮಂದಿಗೆ ನಿರುದ್ಯೋಗದ ಭೀತಿ

Update: 2020-05-29 16:44 GMT

ಹೊಸದಿಲ್ಲಿ, ಎ. 26: ಕೋವಿಡ್-19 ನಿಯಂತ್ರಣಕ್ಕಾಗಿ ರಾಷ್ಟ್ರಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಬಿಹಾರದಲ್ಲಿ ತಮ್ಮ ಮನೆಗೆ ವಾಪಸಾಗಿರುವ ವಲಸೆ ಕಾರ್ಮಿಕರ ಶೋಚನೀಯ ಬದುಕಿನ ವಿವರಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.50ಕ್ಕೂ ಅಧಿಕ ಮಂದಿ ಬಿಹಾರದ ವಲಸೆ ಕಾರ್ಮಿಕರು ಲಾಕ್‌ಡೌನ್ ಆನಂತರ ತಾವು ಒಂದು ಹೊತ್ತಿನ ಊಟದಲ್ಲೇ ದಿನಗಳೆಯುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರ ಪೈಕಿ ಶೇ. 70 ಮಂದಿಯ ಸಾಲದ ಬಾಧೆಯಿಂದ ತತ್ತರಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ, ಲಾಕ್‌ಡೌನ್ ನಂತರ ದೇಶದ ವಿವಿಧೆಡೆಯಿಂದ ಬಿಹಾರದ 15 ಜಿಲ್ಲೆಗಳಿಗೆ ವಾಪಾಸಾಗಿರುವ 177 ಕಾರ್ಮಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಊರಿಗೆ ಪ್ರಯಾಣವನ್ನು ಆರಂಭಿಸುವ ಮುನ್ನ ಈ ಕಾರ್ಮಿಕರು ಸರಾಸರಿ 18 ದಿನಗಳ ಕಾಲ ಸಂಕಷ್ಟದಲ್ಲಿ ಸಿಲುಕಿದ್ದರೆಂದು ಸಮೀಕ್ಷಾ ವರದಿ ತಿಳಿಸಿದೆ.

ತಾವಿದ್ದ ಮನೆಗಳ ಮಾಲಕರು ತಮ್ಮನ್ನು ಮನೆಖಾಲಿ ಮಾಡುವಂತೆ ಹೇಳಿದ್ದರಿಂದ ತಾವು ಅನಿವಾರ್ಯವಾಗಿ ನಗರಗಳನ್ನು ತೊರೆಯಬೇಕಾಯಿತು ಎಂದು ಕಾರ್ಮಿಕರು ತಿಳಿಸಿದ್ದಾರೆ. ಶೇ.26 ಮಂದಿಗೆ ಜೀವನ ನಿರ್ವಹಣೆಗೆ ಯಾವುದೇ ಉದ್ಯೋಗ ಇಲ್ಲದಿರುವುದು ಅವರು ನಗರ ತೊರೆಯಲು ಕಾರಣವಾಯಿತೆಂದು ಸಮೀಕ್ಷಾ ವರದಿ ತಿಳಿಸಿದೆ.

ಲಾಕ್‌ಡೌನ್ ಆನಂತರ ಹಠಾತ್ತನೆ ತಮ್ಮ ಆದಾಯದಲ್ಲಿ ಕಡಿತವುಂಟಾಗಿದ್ದರಿಂದ ಕುಟುಂಬಕ್ಕೆ ಲಭ್ಯವಿರುವ ಆಹಾರದ ಪ್ರಮಾಣವು ಶೇ.72ರಷ್ಟಿದ್ದುದು, ಶೇ.8ಕ್ಕೆ ಕುಸಿದಿರುವುದಾಗಿ ಸಮೀಕ್ಷೆ ತಿಳಿಸಿದೆ. ಲಾಕ್‌ಡೌನ್ ಮುಂಚಿನ ದಿನಗಳಿಗೆ ಹೋಲಿಸಿದರೆ ಶೇ.71 ಮಂದಿಗೆ ನೀರಿನ ಸಮರ್ಪಕ ಲಭ್ಯತೆಯಿತ್ತು. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಅದು ಶೇ.38ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

 ಲಾಕ್‌ಡೌನ್ ಆನಂತರ ಸುಮಾರು 16.10 ಕೋಟಿ ಮಂದಿ ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಸಮೀಕ್ಷಾ ತಂಡದ ಸದಸ್ಯರಾದ ರಾಹುಲ್ ಸುರೇಶ್ ಸಪ್ಕಾಳ್ ತಿಳಿಸಿದ್ದಾರೆ.

ಲಾಕ್‌ಡೌನ್ ಆನಂತರ ಶೇ.66 ವಲಸೆ ಕಾರ್ಮಿಕರು ಯಾವುದೇ ವೇತನವಿಲ್ಲದೆ ಮನೆಗಳಿಗೆ ವಾಪಸಾಗಿದ್ದಾರೆ. ಶೇ.14 ಮಂದಿ ಪೂರ್ಣ ವೇತನ ಪಡೆದಿದ್ದಾರೆ ಹಾಗೂ ಶೇ.21 ಮಂದಿ ಭಾಗಶಃ ವೇತನವಷ್ಟೇ ದೊರೆತಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 40 ಮಂದಿಗೆ ಲಾಕ್‌ಡೌನ್‌ಗೆ ಮೊದಲು ಸರಾಸರಿ ಪ್ರತಿ ವ್ಯಕ್ತಿಗೆ 53 ಸಾವಿರ ರೂ. ಸಾಲವಿತ್ತು. ಆದರೆ ಲಾಕ್‌ಡೌನ್ ಆನಂತರ ಅವರ ಸಾಲದ ಪ್ರಮಾಣವು 40 ಸಾವಿರದಿಂದ ಹಿಡಿದು 2.80 ಲಕ್ಷ ರೂ.ವರೆಗೆ ಏರಿದೆ. ಮನೆ ಖರ್ಚನ್ನು ಸರಿದೂಗಿಸಲು, ತುರ್ತು ಆರೋಗ್ಯ ಸನ್ನಿವೇಶ, ಮುಂಗಾರು ಋತುವಿನಲ್ಲಿ ಕೃಷಿ ಚಟುವಟಿಕೆಗಳಿಗೆ ತಗಲುವ ವೆಚ್ಚಗಳ ಕಾರಣದಿಂದಾಗಿ ವಸೆ ಕಾರ್ಮಿಕರ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿದೆಯೆಂದು ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News