ರಾಜ್ಯ ಸರಕಾರಕ್ಕೆ ಹೃದಯವೇ ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Update: 2020-05-30 16:38 GMT

ಚಿಕ್ಕಮಗಳೂರು, ಮೇ 30: ಕೋವಿಡ್-19 ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ಶಿಫಾರಸಿಗೆ ಸ್ವೀಕರ್ ತಡೆ ನೀಡಿರುವ ಕ್ರಮ ಸರಿಯಲ್ಲ. ಶಿಫಾರಸಿಗೆ ತಡೆ ನೀಡಿದ್ದನ್ನು ನೋಡಿದರೆ ಕಿಟ್‍ಗಳ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರಕಾರ ಈ ಸಂಬಂಧ ಸ್ಪಷ್ಟನೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.

ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಬಡವರ ನೋವಿಗೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಲಾಕ್‍ಡೌನ್ ಸಂದರ್ಭ ಬಡವರನ್ನು ನಡೆಸಿಕೊಂಡಿದ್ದನ್ನು ನೋಡಿದರೆ ಈ ಸರಕಾರಕ್ಕೆ ಹೃದಯವೇ ಇಲ್ಲ ಎಂಬುದು ಸ್ಪಷ್ಟ ಎಂದು ಟೀಕಿಸಿದ ಅವರು, ಲಾಕ್‍ಡೌನ್ ವೇಳೆ ಬಸ್ ಸಂಚಾರವಿಲ್ಲದೇ ಬಡವರು ಪರದಾಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ 1 ಕೋಟಿ ನೀಡಲು ಮುಂದಾಗಿದ್ದರಿಂದಲೇ ಸರಕಾರ ಮುಖಭಂಗ ಅನುಭವಿಸಿ ಎಚ್ಚೆತ್ತು ಕೊಂಡಿತು ಎಂದರು.

ಲಾಕ್‍ಡೌನ್ ಸಂದರ್ಭ ಬಿಲ್ಡರ್ ಗಳ ಲಾಭಿಯಿಂದ ಶ್ರಮಿಕ್ ರೈಲು ನಿಲ್ಲಿಸಲು ರಾಜ್ಯ ಸರಕಾರ ಪ್ರಯತ್ನಿಸಿತ್ತು. ಆದರೆ ಪಕ್ಷ ನೀಡಿದ ಪ್ರತಿಭಟನೆಯ ಎಚ್ಚರಿಕೆಗೆ ಮಣಿದ ಸರಕಾರ ನಂತರ ರೈಲು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿತು. ಈ ಎಲ್ಲಾ ಘಟನೆಗಳನ್ನು ನೋಡಿದಾಗ ಕೊರೋನ ಸೋಂಕು ಹರಡುತ್ತಿರುವ ಸಂಕಷ್ಟದ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿರುವುದು ಎದ್ದು ಕಾಣುತ್ತದೆ ಎಂದು ದೂರಿದ ಅವರು, ಕೊರೋನ ಮಹಾಮಾರಿ ಇಡೀ ದೇಶವನ್ನೇ ಕಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮರ್ಥ ಆಡಳಿತ ನಿರ್ವಹಣೆ ಮಾಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಂದರ್ಭವನ್ನು ಭ್ರಷ್ಟಚಾರಕ್ಕೆ ಬಳಸಿಕೊಂಡಿದ್ದಾರೆ. ಸರಕಾರಗಳ ತಪ್ಪು ನಿರ್ಧಾರದಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.

50 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರುವಂತೆ ರಾಜ್ಯ ಸರಕಾರಕ್ಕೆ ಒತ್ತಡ ಹಾಕಿದ್ದೆವು, ಆದರೆ ಸರಕಾರ ಕೇಂದ್ರದ ಬಳಿ ಈ ಬೇಡಿಕೆ ಮುಂದಿಡಲು ಹಿಂಜರಿದೆ. ಕೇರಳ ಹಾಗೂ ತೆಲಂಗಾಣಕ್ಕೆ 50 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಕೇಂದ್ರ ಸರಕಾರ ನೀಡಿದೆ. ಕರ್ನಾಟಕ್ಕೆ ಕೇವಲ 2,500 ಕೋಟಿ ರೂ. ನೀಡಿ ರಾಜ್ಯವನ್ನು ಕಡೆಗಣಿಸಿದೆ. ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಬೋಗಸ್ ಪ್ಯಾಕೇಜ್ ಆಗಿದೆ ಎಂದು ಟೀಕಿಸಿದ ಅವರು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ವಿದೇಶಿ ಬ್ಯಾಂಕ್‍ಗಳಲ್ಲಿನ ಕಪ್ಪುಹಣವನ್ನು ತರುತ್ತೇವೆ ಎಂದು ಸುಳ್ಳು ಹೇಳಿದ್ದರು. ಅದೇ ರೀತಿ 50 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಕೂಡ ಸುಳ್ಳಿನಕಂತೆಯಾಗಿದೆ ದೂರಿದರು.

ಸರಕಾರಿ ಗ್ರಾಮ ಪಂಚಾಯತ್‍ಗಳಿಗೆ ರಾಜಕೀಯ ಪ್ರತಿನಿಧಿಗಳನ್ನು ನೇಮಕ ಮಾಡಲು ಮುಂದಾಗಿರುವುದು ಖಂಡನೀಯ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದೂ ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಆರೋಪಿಸಿದ ಸಲೀಂ ಅಹ್ಮದ್ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ರೂಪಿಸಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಶುಮಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News