ಅಮೆರಿಕದಲ್ಲಿರುವ ಕನ್ನಡಿಗರ ಜೊತೆ ಡಿಸಿಎಂ ಅಶ್ವಥ್ ನಾರಾಯಣ ವಿಡಿಯೋ ಸಂವಾದ

Update: 2020-05-31 12:15 GMT

ಬೆಂಗಳೂರು, ಮೇ 31: ಕೊರೋನ ಸಂಕಷ್ಟದಲ್ಲಿ ನಿಮ್ಮವರ ಕಾಳಜಿ, ರಕ್ಷಣೆಗೆ ನಮ್ಮ ಸರಕಾರ ಇದೆ. ಈ ಬಗ್ಗೆ ಯಾವುದೆ ಆತಂಕ ಬೇಡ. ಉತ್ತಮ ಆರೋಗ್ಯ ಸೇವೆ ನಮ್ಮಲ್ಲಿದೆ ಎಂದು ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ.

'ನಾವು ವಿಶ್ವ ಕನ್ನಡಿಗರು' (ನಾವಿಕ) ಅಮೆರಿಕದ ಕನ್ನಡ ಒಕ್ಕೂಟ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅಶ್ವಥ್ ನಾರಾಯಣ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾವಿಕದ ಬಂಧುಗಳು ನೀಡಿರುವ 10 ಲಕ್ಷ ರೂ. ದೇಣಿಗೆಗೆ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕೊರೋನ ಲಾಕ್‍ಡೌನ್, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮವರಿಗೆ ಧೈರ್ಯ ಹೇಳಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ನಾವಿಕ ಬಳಗಕ್ಕೆ ಅಭಿನಂದನೆ. ವೀಡಿಯೋ ಕಾನ್ಫರೆನ್ಸ್ ಮೂಲಕ 'ನಾವಿಕ', ಅಮೆರಿಕದಲ್ಲಿರುವ ಕನ್ನಡಿಗರ ಕೈ ಹಿಡಿಯುತ್ತಿದೆ. ಪರಿಣಿತರಿಂದ ಕೊರೋನ ಮಾಹಿತಿ, ಮುನ್ನೆಚ್ಚರಿಕಾ ಸಲಹೆಗಳನ್ನು ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಕೊರೋನ ದೀರ್ಘಕಾಲ ನಮ್ಮೊಂದಿಗೆ ಇರುವುದರಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಎದುರಿಸಲು ಪರಸ್ಪರ ಸಹಕಾರ ಬಹಳ ಮುಖ್ಯ. ಇಂಥ ಸನ್ನಿವೇಶದಲ್ಲಿ ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ. ಇಲ್ಲಿರುವ ನಿಮ್ಮ ಆಪ್ತರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಅಶ್ವಥ್ ನಾರಾಯಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೊರೋನ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ. ನಿಮ್ಮ ಜನ್ಮಭೂಮಿ ಬಗ್ಗೆ ಹೆಮ್ಮೆ ಪಡುವಂತ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು. 

ಲಾಕ್‍ಡೌನ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ 3 ತಿಂಗಳ ಅವಧಿಯಲ್ಲಿ 2 ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್, ಎನ್ 95 ಮಾಸ್ಕ್, ವೆಂಟಿಲೇಟರ್ ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ ಎಂದು ಅವರು ತಿಳಿಸಿದರು.

ಟೆಲಿಮೆಡಿಸನ್, ಟೆಲಿಕನ್ಸಲ್ಟೇಷನ್ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅಶ್ವಥ್ ನಾರಾಯಣ ಮಾಹಿತಿ ನೀಡಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೈಸ್ ಮಾಡಲಾಗಿದೆ. ಜತೆಗೆ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ, ಸಿಬ್ಬಂದಿ, ಔಷಧ, ವೈದ್ಯಕೀಯ ಪರಿಕಗಳ ದತ್ತಾಂಶದ ಡ್ಯಾಶ್‍ಬೋರ್ಡ್ ಇದ್ದು, ರಿಯಲ್ ಟೈಮ್ ಮಾಹಿತಿ ಲಭ್ಯವಾಗುತ್ತಿದೆ. ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್ ಬಗ್ಗೆ ಮಾಹಿತಿ ಇರುತ್ತದೆ.  ಈ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಯಾವುದೇ ಕೊರತೆ, ಸಮಸ್ಯೆ ಉಂಟಾಗದಂತೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವಿಶ್ವದ ಯಾವುದೇ ಭಾಗದಲ್ಲಿದ್ದರೂ ನಮ್ಮವರ ಕಷ್ಟಕ್ಕೆ ಸ್ಪಂದಿಸುವ ಔದರ್ಯ ನಮ್ಮ ಕನ್ನಡಿಗರಿಗಿದೆ. ಕೊರೋನ ಸಂದರ್ಭದಲ್ಲಿ ಇಡಿ ವಿಶ್ವ ತತ್ತರಿಸಿಹೋಗಿದೆ. ಇಂಥ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮ ದೇಶ ಅದರಲ್ಲೂ ವಿಶೇಷವಾಗಿ ಕರ್ನಾಟಕ ಮೂಲದ ವೈದ್ಯರು ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜತೆ ಮಾತನಾಡಿ ಅವರಿಂದ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ನಮ್ಮ ದೇಶದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ವೈದ್ಯರಿಗೆ ಅಮೆರಿಕದಲ್ಲಿ  ಅಪಾರ ಗೌರವ, ಮನ್ನಣೆ ದೊರೆತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅಶ್ವಥ್ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News