ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Update: 2020-05-31 12:45 GMT

ಚಿಕ್ಕಮಗಳೂರು, ಮೇ 31: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ನಗರದ ಕಾಂಗ್ರೇಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು ಮತ್ತು ಮಹಿಳೆಯರ ಏಳಿಗೆಗಾಗಿ ಸಾಕಷ್ಟು ದುಡಿದಿದೆ. ಈ ಸಂಗತಿಯನ್ನು ಸಾಮಾನ್ಯ ಜನಕ್ಕೆ ಮುಟ್ಟಿಸುವಲ್ಲಿ ನಾವು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.

ಪ್ರಸಕ್ತ ರಾಜ್ಯ ಸರಕಾರ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದೆ. ಎಪಿಎಂಸಿ ವಿಚಾರದಲ್ಲಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ಬಡವರು, ದಲಿತರು, ಮಧ್ಯಮ ವರ್ಗದವರು ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಅವರು, ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮನದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಹೊಸ ಹುರುಪು ಬಂದಿದೆ. ಅವರ ನೇತೃತ್ವದಲ್ಲಿ ಪಕ್ಷವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತದೆ. ರಾಜ್ಯ ಸರಕಾರದ ರೈತ ಮತ್ತು ಜನವಿರೋಧಿ ನೀತಿ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಸಧೃಡಗೊಳ್ಳಲಿದೆ ಎಂದು ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬಿಜೆಪಿಯವರಿಗೆ ಬಡವರ ಕಷ್ಟ ಕಾಣುವುದಿಲ್ಲ, ಬಡವರ ಕೂಗು ಕೇಳುವುದಿಲ್ಲ, ಅವರ ಕಣ್ಣು ಕುರುಡಾಗಿದೆ, ಕಿವಿ ಕಿವುಡಾಗಿದೆ, ಲಾಕ್‍ಡೌನ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯದಿಂದಾಗಿ ಅನೇಕ ಸಂಕಷ್ಟ ಎದುರಿಸುತ್ತಿರುವ ಬಡವರು ಮತ್ತು ವಲಸೆ ಕಾರ್ಮಿಕರ ಶಾಪ ಬಿಜೆಪಿಗೆ ತಟ್ಟುತ್ತದೆ ಎಂದರು.

ಮಾಜಿ ಸಚಿವ ಸಗೀರ್ ಅಹ್ಮದ್ ಮಾತನಾಡಿ, 8 ಬಾರಿ ಸತತವಾಗಿ ಆಯ್ಕೆಯಾಗಿರುವ ಧೀಮಂತ ನಾಯಕ ಡಿ.ಕೆ.ಶಿವಕುಮಾರ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಅವರ ನಾಯಕತ್ವದಡಿ ಕಾಂಗ್ರೆಸ್ಸಿಗರು ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮತ್ ಮಾತನಾಡಿ, ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ, ಸಂಸದರು ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಜಿಲ್ಲಾ ಕಾಂಗ್ರೇಸ್ ವತಿಯಿಂದ ಅಭಿನಂದಿಸಲಾಯಿತು. ಜಿಲ್ಲಾ ಕಾಂಗ್ರೇಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಭಾವ, ಎಂ.ಎಲ್.ಮೂರ್ತಿ, ಕಾರ್ಯದರ್ಶಿ ಟಿ.ಎಂ.ಶಾಹೀದ್, ಮಾಜಿ ಶಾಸಕರಾದ ಎಸ್.ಎಂ.ನಾಗರಾಜ್, ಟಿ.ಹೆಚ್.ಶಿವಶಂಕರಪ್ಪ, ಆನಂದ್, ಕೆ.ಮುಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News