ರಾಜ್ಯದಲ್ಲಿ ಒಂದೇ ದಿನ 299 ಮಂದಿಗೆ ಕೊರೋನ ಪಾಸಿಟಿವ್: ಸಾವಿನ ಸಂಖ್ಯೆ 51ಕ್ಕೆ ಏರಿಕೆ

Update: 2020-05-31 12:58 GMT

ಬೆಂಗಳೂರು, ಮೇ, 31: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 299 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 3,221ಕ್ಕೆ ಏರಿಕೆಯಾಗಿದೆ. ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಕೊರೋನದಿಂದ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 51ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶನಿವಾರ ಸಂಜೆ 5 ಗಂಟೆಯಿಂದ ರವಿವಾರ ಸಂಜೆ 5 ಗಂಟೆವರೆಗೆ 299 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಮುಂಬೈಯಿಂದ ಹಿಂದಿರುಗಿ ಕ್ವಾರಂಟೈನ್ ನಲ್ಲಿದ್ದ ರಾಯಚೂರು ಜಿಲ್ಲೆಯ 50 ವರ್ಷದ ಪುರುಷರೊಬ್ಬರು ಮೇ.29ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇವರ ಕೊರೋನ ವರದಿ ಪಾಸಿಟಿವ್ ಬಂದಿದೆ. ಬೀದರ್ ಜಿಲ್ಲೆಯ 75 ವರ್ಷದ ಪುರುಷರೊಬ್ಬರು ಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಇವರು ಮೇ.29ರಂದು ಸಾವನ್ನಪ್ಪಿದ್ದಾರೆ. ಇವರ ಕೊರೋನ ವರದಿ ಪಾಸಿಟಿವ್ ಬಂದಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ರಾಯಚೂರು 83, ಯಾದಗಿರಿ 44, ಬೀದರ್ 33, ಕಲಬುರಗಿ 28, ವಿಜಯಪುರ 26, ಬೆಂಗಳೂರು ನಗರ 21, ದಕ್ಷಿಣ ಕನ್ನಡ 14, ಮಂಡ್ಯ ಮತ್ತು ಬೆಳಗಾವಿಯಲ್ಲಿ ತಲಾ 13, ಉಡುಪಿ 10, ದಾವಣಗೆರೆ 6, ಉತ್ತರ ಕನ್ನಡ 5, ಬಳ್ಳಾರಿ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 3,221 ಕೊರೋನ ಸೋಂಕಿತರ ಪೈಕಿ 1,218 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 221 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 51 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 1,950 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News