ಲಾಕ್‍ಡೌನ್- 5.0 ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

Update: 2020-05-31 14:33 GMT

ಬೆಂಗಳೂರು, ಮೇ.31: ಮಾರಕ ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ `ಕಂಟೈನ್ಮೆಂಟ್ ಝೋನ್‍ಗಳಲ್ಲಿ' ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಜೂನ್ 30ರ ವರೆಗೆ ಲಾಕ್‍ಡೌನ್ ಮುಂದುವರಿಸಿದ್ದು, ಉಳಿದ ಪ್ರದೇಶಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲು ರಾಜ್ಯ ಸರಕಾರ ರವಿವಾರ ತೀರ್ಮಾನಿಸಿದೆ.

ರವಿವಾರ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಲಾಕ್‍ಡೌನ್-5.0 ಮಾರ್ಗಸೂಚಿ ಹೊರಡಿಸಿದ್ದು, ಜೂನ್ 8ರ ಬಳಿಕ ದೇವಸ್ಥಾನ, ಚರ್ಚ್, ಮಸೀದಿ ಸಹಿತ ಧಾರ್ಮಿಕ ಸ್ಥಳಗಳು, ಹೊಟೇಲ್ ಹಾಗೂ ಮಾಲ್‍ಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ರಾತ್ರಿ 9ಗಂಟೆಯಿಂದ ಬೆಳಗ್ಗೆ 5ಗಂಟೆಯ ವರೆಗೆ ಕಪ್ರ್ಯೂ ಇರಲಿದೆ ಎಂದು ತಿಳಿಸಲಾಗಿದೆ. ಇದೀಗ ರಾತ್ರಿ 7ಗಂಟೆಯಿಂದ ಬೆಳಗ್ಗೆ 7ಗಂಟೆಯ ವರೆಗೆ ವಿಧಿಸಲಾಗಿದ್ದ ಕಲಂ 144ರ ಅನ್ವಯ ನಿಷೇಧಾಜ್ಞೆಯನ್ನು ಸಡಿಲಿಕೆ ಮಾಡಲಾಗಿದೆ ಎಂದು ರಾಜ್ಯ ಸರಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೊರೋನ ವೈರಸ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ವಲಯಗಳಲ್ಲಿ ಕೇಂದ್ರದ ಮಾರ್ಗಸೂಚಿ ಅನ್ವಯ ಮೂರು ಹಂತಗಳಲ್ಲಿ ಲಾಕ್‍ಡೌನ್ ಸಡಿಲಿಸಲಾಗಿದ್ದು, ಅದೇ ಮಾದರಿಯಲ್ಲೆ ರಾಜ್ಯ ಸರಕಾರವು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಜೂನ್ 8ರ ಬಳಿಕ ಕಂಟೈನ್ಮೆಂಟ್ ವಲಯಗಳಲ್ಲಿ ಹೊರತುಪಡಿಸಿ ಉಳಿದೆಡೆಗಳಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಸಲಗೊಳ್ಳಲಿದೆ.

ಎರಡನ ಹಂತದಲ್ಲಿ ಶಾಲಾ, ಕಾಲೇಜುಗಳು ಸೇರಿದಂತೆ ಶೈಕ್ಷಣಿಕ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದು, ಈ ಸಂಬಂಧ ಶಿಕ್ಷಣ ಸಂಸ್ಥೆಗಳು, ತಜ್ಞರು ಹಾಗೂ ಪೋಷಕರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನ ಮಾಡಲಾಗುವುದು. ಶಿಕ್ಷಣ ಸಂಸ್ಥೆಗಳನ್ನು ಜುಲೈ ತಿಂಗಳಲ್ಲಿ ತೆರೆಯುವ ಸಂಬಂಧ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ.

ಮೂರನೆ ಹಂತದಲ್ಲಿ ಕೇಂದ್ರ ಸರಕಾರದ ಅನುಮತಿ ಬಳಿಕ ಅಂತರ ರಾಷ್ಟ್ರೀಯ ವಿಮಾನಯಾನ, ಮೆಟ್ರೋ, ಚಿತ್ರಮಂದಿರ, ಜಿಮ್, ಈಜುಕೊಳ, ಸಭೆ, ಸಮಾರಂಭಗಳಉ ಸೇರಿದಂತೆ ಜನದಟ್ಟಣೆ ಕಾರ್ಯಕ್ರಮಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಸೋಪು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಸೋಂಕು ತಡೆಗಟ್ಟಬೇಕು. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರಕಾರದ ಕೋವಿಡ್-19 ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News