ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ತಾತ್ಕಾಲಿಕ ಸದಸ್ಯರ ಆಯ್ಕೆಗೆ ಮುಂದಿನ ತಿಂಗಳು ಚುನಾವಣೆ

Update: 2020-05-31 16:09 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಮೇ 31: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐವರು ತಾತ್ಕಾಲಿಕ ಸದಸ್ಯರನ್ನು ಆರಿಸಲು ಜೂನ್‌ನಲ್ಲಿ ಚುನಾವಣೆ ನಡೆಸಲು ವಿಶ್ವಸಂಸ್ಥೆಯ ಮಹಾಸಭೆ ನಿರ್ಧರಿಸಿದೆ. ಕೋವಿಡ್-19ಕ್ಕೆ ಸಂಬಂಧಿಸಿ ವಿಧಿಸಲಾಗಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ನೂತನ ಮತದಾನ ವ್ಯವಸ್ಥೆಯಂತೆ ಚುನಾವಣೆ ನಡೆಯಲಿದೆ.

ಏಶ್ಯ ಪೆಸಿಫಿಕ್ ಸ್ಥಾನಕ್ಕಾಗಿ ಭಾರತ ಏಕೈಕ ಸ್ಪರ್ಧಿಯಾಗಿದ್ದು, ಭಾರತದ ಗೆಲುವು ಖಚಿತವಾಗಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಪೂರ್ಣಾಧಿವೇಶನ ಇಲ್ಲದೆ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸುವ ವಿಧಾನಕ್ಕೆ 193 ಸದಸ್ಯರ ವಿಶ್ವಸಂಸ್ಥೆಯ ಮಹಾಸಭೆ ಶುಕ್ರವಾರ ಅಂಗೀಕಾರ ನೀಡಿದೆ.

ಏಶ್ಯ ಪೆಸಿಫಿಕ್ ಗುಂಪಿನಿಂದ ಭಾರತ ಸ್ಪರ್ಧಿಸುವ ಒಮ್ಮತದ ನಿರ್ಧಾರವನ್ನು ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಈ ಗುಂಪಿನ 55 ಸದಸ್ಯರು ಕಳೆದ ವರ್ಷದ ಜೂನ್‌ನಲ್ಲಿ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News