ಕೊರೋನ ಹಿನ್ನೆಲೆ: ಪಾಲಿಹೌಸ್ ಹೂ ಬೆಳೆಗಾರರು ತರಕಾರಿ ಬೆಳೆಗಳತ್ತ ಒಲವು

Update: 2020-05-31 17:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.31: ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಇದರ ನಡುವೆ ಪಾಲಿ ಹೌಸ್‍ಗಳಲ್ಲಿ ಬೆಳೆಯುವ ಹೂಗಳಿಗೆ ಬೇಡಿಕೆ ಕುಸಿಯುತ್ತಿದೆ. ಹೀಗಾಗಿ, ಅನೇಕ ಕಡೆಗಳಲ್ಲಿ ಪಾಲಿಹೌಸ್‍ಗಳಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುವ ಕಡೆಗೆ ಮುಖ ಮಾಡುತ್ತಿದ್ದಾರೆ.

ಹೂ ಬೆಳೆಗಾರರು ಈ ಸಂಬಂಧ ನಿರ್ಧಾರಗಳನ್ನು ಕೈಗೊಂಡಿದ್ದು, ನಗರದ ಹಲವು ಕಡೆಗಳಲ್ಲಿ ಪಾಲಿಹೌಸ್‍ಗಳನ್ನು ತರಕಾರಿಗಳನ್ನು ಬೆಳೆಯುವ ಕಡೆಗೆ ಮಾರ್ಪಾಡುಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹಲವು ಬೆಳೆಗಾರರು ಹೇಳಿದ್ದಾರೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ 2,500 ಎಕರೆ ಪ್ರದೇಶದಷ್ಟು ಪಾಲಿ ಹೌಸ್ ಗಳಲ್ಲಿ ಜರ್ಬೆರಾ, ಗುಲಾಬಿ, ಕಾರ್ನೇಷನ್, ಆಂತೋರಿಯಂ, ಲಿಲ್ಲಿ ಮತ್ತಿತರ ಹೂವುಗಳನ್ನು ಬೆಳೆಯಲಾಗುತ್ತಿತ್ತು. ಇದೀಗ ಕೊರೋನ ಹಿನ್ನೆಲೆಯಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ ಶೇ. 10 ರಷ್ಟು ಬೆಳೆಗಾರರು ಹೂ ಬೆಳೆಯನ್ನು ಸಂಪೂರ್ಣ ಕಿತ್ತು ತರಕಾರಿ ಬೆಳೆಗೆ ವರ್ಗವಾಗಿದ್ದಾರೆ. ಇನ್ನಷ್ಟು ಮಂದಿ ವರ್ಗವಾಗುವವರಿದ್ದಾರೆ.

ರಾಜ್ಯ ಹಾಗೂ ದೇಶದಲ್ಲಿ ಸಧ್ಯಕ್ಕೆ ಕೊರೋನ ವೈರಸ್ ಹರಡುವಿಕೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಇದರಿಂದಾಗಿ ಹೂಗಳ ಮಾರುಕಟ್ಟೆಯೂ ತಗ್ಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬೇರೆ ಕಡೆಗೆ ಮುಖ ಮಾಡುವಂತಾಗಿದೆ ಎಂದು ಸೌತ್ ಇಂಡಿಯಾ ಫ್ಲೋರಿಕಲ್ಚರ್ ಅಸೋಸಿಯೇಷನ್  ನಿರ್ದೇಶಕ ಬಿ. ಶ್ರೀಕಾಂತ್ ಅಭಿಪ್ರಾಯಿಸಿದ್ದಾರೆ.

ಹೂ ಬೆಳೆಯಿಂದ ವಿಮುಕ್ತಿ ಹೊಂದಲು ಕಾರಣ ಮದುವೆ, ಗೃಹ ಪ್ರವೇಶದಂತಹ ಶುಭ ಸಮಾರಂಭಗಳು ಹೆಚ್ಚು ನಡೆಯುವುದಿಲ್ಲ. ನಡೆದರೂ ಅದ್ಧೂರಿಯಿಲ್ಲ. ಸ್ಟಾರ್ ಹೋಟೆಲ್ ಗಳು ತೆರೆದಿಲ್ಲ. ಪಾಲಿಹೌಸ್ ಗಳಲ್ಲಿ ಬೆಳೆದ ಹೂವು ಇಂತಹ ಸಮಾರಂಭಗಳಲ್ಲಿ ಹಾಗೂ ಸ್ಟಾರ್ ಹೋಟೆಲ್ ಗಳಲ್ಲಿ ವೇದಿಕೆ ಅಲಂಕಾರಕ್ಕೆ ಬಳಸಲಾಗುತ್ತದೆ. ಅಲ್ಲದೆ ಇದೇ ಉದ್ದೇಶಗಳಿಗಾಗಿ ನಮ್ಮ ಹೂವು ಕೋಲ್ಕತ್ತಾ, ಹೈದರಾಬಾದ್, ಹೊಸದಿಲ್ಲಿ, ಬಾಂಬೆ ಮತ್ತಿತರ ಭಾಗಗಳಿಗೆ ಹೋಗುತ್ತಿತ್ತು. ಹೊರ ರಾಷ್ಟ್ರಗಳಿಗೂ ರಫ್ತಾಗುತ್ತಿತ್ತು. ಆದರೆ ಎರಡು ತಿಂಗಳಿನಿಂದ ಕೊರೋನ ಹಿನ್ನೆಲೆಯಲ್ಲಿ ವಿಮಾನ ಹಾರಾಟ, ರೈಲು, ಹಡಗು ಸೇವೆ ಎಲ್ಲವೂ ಬಂದ್ ಆಗಿದ್ದು, ಪಾಲಿಹೌಸ್ ಗಳಲ್ಲಿ ಬೆಳೆದ ಹೂವು ರವಾನೆಯಾಗುತ್ತಿಲ್ಲ.

ತಿಂಗಳಿಗೆ 1.25 ರಿಂದ 1.50 ಲಕ್ಷ ಖರ್ಚು: ಒಂದು ಬೋರ್ ವೆಲ್ ಗೆ ಮಾಸಿಕ 40 ಸಾವಿರ ರೂ. (ಹನಿ ನೀರಾವರಿ ಸೇರಿ) ಕರೆಂಟ್ ಬಿಲ್ಲು ಬರುತ್ತೆ. ನಿರಂತರವಾಗಿ ಔಷಧಿಗಳನ್ನು ಸಿಂಪಡಿಸಬೇಕು. ನೀರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕು. ಪಾಲಿಹೌಸ್ ಗಳಲ್ಲಿ ಪ್ರತಿ ಹೆಕ್ಟೇರ್ ಗೆ ಕಡಿಮೆ ಎಂದರೂ ತಿಂಗಳಿಗೆ 1.25 ರಿಂದ 1.50 ಲಕ್ಷ ಖರ್ಚು ಬರುತ್ತದೆ ಎಂದು ಅಂದಾಜಿಸಲಾಗಿದೆ.

ಸರಕಾರದಿಂದ ಪಾಲಿಹೌಸ್ ಗಳಲ್ಲಿ ಬೆಳೆಯುವ ಬೆಳೆಗಳಿಗೆ ಸಬ್ಸಿಡಿ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು. ಆದರೆ, ಈಗ ಸರಕಾರ ಇವರನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಉದ್ಯಮವು ಸಂಕಷ್ಟದಲ್ಲಿದೆ. ವಿದ್ಯುತ್ ಬಿಲ್ ದುಬಾರಿಯಾಗಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಇದನ್ನು ಭರಿಸಲು ದುಬಾರಿಯಾಗುತ್ತಿದೆ. ವಿನಾಯಿತಿ ನೀಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ನಮ್ಮ ಮನವಿಗೆ ಸ್ಪಂದಿಸಿಲ್ಲ. ತರಕಾರಿಯನ್ನು ಎಸೆನ್ಷಿಯಲ್ ಎಂದು ಪರಿಗಣಿಸಿ, ಹೂವನ್ನು ನಾನ್ ಎಸೆನ್ಷಿಯಲ್ ಗೆ ಸೇರಿಸಲಾಗಿದೆ. ವ್ಯಾಪಾರವೂ ಇಲ್ಲ. ಖರ್ಚುಗಳೂ ಹೆಚ್ಚು. ಹೀಗಾಗಿ ಪರ್ಯಾಯ ಬೆಳೆಗಳತ್ತ ನೋಡುವುದು ಅನಿವಾರ್ಯವಾಗಿದೆ.

- ಬಿ. ಶ್ರೀಕಾಂತ್, ನಿರ್ದೇಶಕರು, ಸೌತ್ ಇಂಡಿಯಾ ಫ್ಲೋರಿಕಲ್ಚರ್ ಅಸೋಸಿಯೇಷನ್

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News