ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ತೀರ್ಮಾನ: ಎಚ್.ಕೆ.ಪಾಟೀಲ್

Update: 2020-05-31 18:31 GMT

ಬೆಂಗಳೂರು, ಮೇ 31: ಕೊರೋನ ಸಂದರ್ಭದಲ್ಲಿ ಔಷಧ ಮತ್ತು ಇನ್ನಿತರ ಪರಿಕರಗಳ ಖರೀದಿ ಅವ್ಯವಹಾರ ಸಂಬಂಧ ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಥಳ ಹಾಗೂ ದಾಖಲೆ ಪರಿಶೀಲನೆಗೆ ತಡೆಯೊಡ್ಡಿದ ವಿಧಾನಸಭೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ತೀರ್ಮಾನಿಸಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. 

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೂ.2ರಂದು ಸಮಿತಿ ಸಭೆ ಕರೆಯಲಾಗಿದ್ದು, ಆ ಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ನಿರ್ಣಯ ಕೈಗೊಳ್ಳಲಾಗುವುದು. ನಮ್ಮ ಸಮಿತಿ ಸದಸ್ಯರ ಹಕ್ಕುಗಳಿಗೆ ಚ್ಯುತಿಯಾಗಿದೆ. ಸ್ಪೀಕರ್ ಅವರ ನಡೆ ಸಂವಿಧಾನದ ನಿಯಮಕ್ಕೆ ತದ್ವಿರುದ್ಧವಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಈ ರೀತಿ ನಡೆದುಕೊಂಡಿದ್ದಾರೆಂದು ಟೀಕಿಸಿದರು.

ಯಾವುದೇ ಅವ್ಯವಹಾರದ ಆರೋಪ ಬಂದರೂ ಸ್ಥಳ ಪರೀಶೀಲನೆ ಹಾಗೂ ದಾಖಲೆಗಳ ಪರಿಶೀಲನೆ ಮಾಡುವ ಅಧಿಕಾರಿ ಲೆಕ್ಕಪತ್ರಗಳ ಸಮಿತಿಗೆ ಹಕ್ಕಿದೆ. ಅದಕ್ಕೆ ತಡೆಯೊಡ್ಡಿ ದ ಸ್ಪೀಕರ್ ಅವರ ಕ್ರಮವನ್ನು ನೋಡಿದರೆ ಭ್ರಷ್ಟರಿಗೆ ರಕ್ಷಣೆ ನೀಡುವಂತಿದೆ. ಹೀಗಾಗಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೊರೋನ ಸೋಂಕಿನ ನೆಪದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಸರಿಯಲ್ಲ. ಬಸ್ಸು, ಕಾರು ಎಲ್ಲವೂ ಓಡಾಡುತ್ತಿವೆ. ಲಾಕ್‌ಡೌನ್ ಎಂದರೆ ಎಲ್ಲವೂ ಬಾಗಿಲು ಮುಚ್ಚಿವೆಯೇ? ಚುನಾವಣೆ ಮುಂದೂಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಪಂಚಾಯತ್‌ರಾಜ್ ಅಧಿನಿಯಮದಲ್ಲಿಯೂ ಇದಕ್ಕೆ ಅವಕಾಶವಿಲ್ಲ. ಹೀಗಿದ್ದರೂ ಚುನಾವಣೆ ಮುಂದೂಡಲಾಗಿದೆ ಎಂದು ಟೀಕಿಸಿದರು. ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆಸಬೇಕೆಂದು ಕೋರಿಕೋರ್ಟ್ ಮೆಟ್ಟಿಲೇರಲಾಗುವುದು. ನಮಗೆ ಕಾನೂನು ಹೋರಾಟ ಬಿಟ್ಟರೆ ಬೇರೆದಾರಿಯೇ ಇಲ್ಲ. ನ್ಯಾಯಾಲಯಕ್ಕೆ ಹೋಗಲು ಪಕ್ಷದಿಂದ ನಿರ್ಧರಿಸಿದ್ದು, ನಮಗೆ ಈ ಹೋರಾಟದಲ್ಲಿ ಜಯ ಸಿಗುವ ವಿಶ್ವಾಸವಿದೆ ಎಂದು ಎಚ್. ಕೆ.ಪಾಟೀಲ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆಗೆ ಕಾನೂನಿನಲ್ಲಿ ಯಾವುದೇ ರೀತಿಯ ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಚುನಾವಣೆ ಮುಂದೂಡಿದ್ದು, ಶೀಘ್ರದಲ್ಲೆ ಈ ಬಗ್ಗೆ ಪಕ್ಷದಿಂದ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಲಾಗಿದೆ

-ಎಚ್.ಕೆ.ಪಾಟೀಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News