ಆಟೋ, ಟ್ಯಾಕ್ಸಿ ಚಾಲಕರಿಗೆ ಇನ್ನೆರಡು ದಿನಗಳಲ್ಲಿ ಪರಿಹಾರ ಧನ

Update: 2020-06-01 18:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 1: ಕೊರೋನ ಸೋಂಕು ತಡೆಗೆ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಪರಿಹಾರ ಧನಕ್ಕಾಗಿ ಈವರೆಗೆ ಒಟ್ಟು 1,77,872 ಅರ್ಜಿಗಳನ್ನು ಸ್ವೀಕೃತವಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪ್ರಥಮ ಹಂತವಾಗಿ ಪರಿಹಾರ ಧನ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿರುವಂತೆ 5 ಸಾವಿರ ರೂ.ಪರಿಹಾರ ಧನ ನೀಡಲು 'ಸೇವಾಸಿಂಧು' ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಪರಿಹಾರ ಧನವನ್ನು ಕೋರಿ ಸಲ್ಲಿಸುವ ಎಲ್ಲ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‍ನ ಆನ್‍ಲೈನ್ ಮೂಲಕವಾಗಿ ಸ್ವೀಕರಿಸಲಾಗುತ್ತಿದೆ. ಯಾವುದೇ ಲಿಖಿತ ಅರ್ಜಿಗಳನ್ನು ಸಲ್ಲಿಸುವ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಸೇವೆ ಕೇವಲ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಅನ್ವಯವಾಗುತ್ತದೆ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಅನ್ವಯಿಸುವುದಿಲ್ಲ. ಅರ್ಜಿದಾರರ ಚಾಲನಾ ಪರವಾನಿಗೆ 2020ರ ಮಾರ್ಚ್ 24ರಂದು ಮಾನ್ಯವಿದ್ದಲ್ಲಿ ಮಾತ್ರ ಅನ್ವಯವಾಗುತ್ತದೆ. ಅರ್ಜಿದಾರರ ವಾಹನದ ನೋಂದಣಿ ಸಂಖ್ಯೆ ಹಾಗೂ ಚಾಸಿಸ್ ಸಂಖ್ಯೆಯ ಕೊನೆಯ ಐದು ಅಂಕಿಗಳನ್ನು ನಮೂದಿಸಬೇಕು. ಚಾಲಕರು ತಮ್ಮ ಮೊಬೈಲ್ ಸಂಖ್ಯೆಯ ಓಟಿಪಿ ಮೂಲಕ ಅರ್ಜಿಯ ವಿವರಗಳನ್ನು ತಿಳಿದುಕೊಳ್ಳಬಹುದು.

ಒಂದು ವಾಹನಕ್ಕೆ ಸಂಬಂಧಿಸಿದಂತೆ ಒಬ್ಬ ಚಾಲಕರಿಗಷ್ಟೇ ಪರಿಹಾನ ಧನ ನೀಡಲಾಗುತ್ತದೆ. ಅಲ್ಲದೆ ಚಾಲಕರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿಸಿಕೊಂಡಿರಬೇಕು ಎಂದು ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News