ಚಿಕ್ಕಮಗಳೂರಿಗೆ ಕೋಲ್ಡ್ ಸ್ಟೋರೇಜ್: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

Update: 2020-06-02 06:03 GMT

ಚಿಕ್ಕಮಗಳೂರು, ಜೂ.2: ಚಿಕ್ಕಮಗಳೂರು ಎಪಿಎಂಸಿಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪರಿಶೀಲನೆ ನಡೆಸಿದರು.

ಬಳಿಕ ವರ್ತಕರು ಹಾಗೂ ರೈತರ ಬಳಿ ತೆರಳಿದ ಸಚಿವರು, ಸಮಸ್ಯೆಗಳನ್ನು ಖುದ್ದು ಆಲಿಸಿದರು. ಸೊಪ್ಪು, ತರಕಾರಿಗಳ ಬೆಳೆ, ಮಾರಾಟ ಹಾಗೂ ದರದ ಸ್ಥಿತಿಗತಿ ಬಗ್ಗೆ ವಿಚಾರಿಸಿದರು. ಸ್ಥಳೀಯ ಬೆಳೆಗಳು ಹಾಗೂ ಅವುಗಳನ್ನು ಕೆಡದಂತೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾವ ಯಾವ ಪ್ರದೇಶಗಳಿಗೆ ಸಾಗಾಟವಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಂಡರು.

ಪತ್ರ ಕೊಟ್ಟರೆ ಕೋಲ್ಡ್ ಸ್ಟೋರೇಜ್ ಮಂಜೂರು

ಬಳಿಕ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಎಲ್ಲ ಜಿಲ್ಲೆಗಳಲ್ಲಿರುವ ಎಪಿಎಂಸಿಗಳಿಗೆ ಭೇಟಿ ಮಾಡುತ್ತಿದ್ದೇನೆ. ಇಲ್ಲಿಗೆ ಒಂದು ಕೋಲ್ಡ್ ಸ್ಟೋರೇಜ್ ಹಾಗೂ ಜಾಗ ಬೇಕು ಎಂದು ಸಚಿವ ಸಿ.ಟಿ.ರವಿ ಕೇಳಿಕೊಂಡಿದ್ದಾರೆ. ಅವರು ಪತ್ರ ಕೊಟ್ಟ 2 ದಿನಗಳಲ್ಲಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲ

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ಇದು ಕೇಂದ್ರ ಸರ್ಕಾರ ಮಾಡಿರುವ ಉತ್ತಮ ಯೋಜನೆಯಾಗಿದೆ. ಇದು ರೈತರಿಗೆ ಅನುಕೂಲವಾಗಲು ಮಾತ್ರ ತಂದಿರುವ ಕಾಯ್ದೆಯಾಗಿದೆ ಎಂದು ಸಚಿವರು ತಿಳಿಸಿದರು.

ಎಪಿಎಂಸಿ ಬೋರ್ಡ್ ಗೆ ಸಂಪೂರ್ಣ ಅಧಿಕಾರವಿದೆ. ಪರವಾನಿಗೆ ಕೊಡುವ ರದ್ದು ಮಾಡುವ ಅಧಿಕಾರ ಎಪಿಎಂಸಿ ಬೋರ್ಡ್ ಗೆ ಇದೆ. ಹೀಗಾಗಿ ಯಾವುದೇ ಖಾಸಗಿ ಸಂಸ್ಥೆಗಳಿಗೆ ಪರವಾನಿಗೆ ಕೊಡಬೇಕಿದ್ದರೆ ರೈತರ ಹಿತದೃಷ್ಟಿ ನೋಡಲಾಗುವುದು ಎಂದು ತಿಳಿಸಿದರು.

ಅವ್ಯವಹಾರ ತನಿಖೆಗೆ ಪ್ರತ್ಯೇಕ ತಂಡ

ಡಿಸಿಸಿ ಬ್ಯಾಂಕ್ ಸಹಿತ ಸಹಕಾರ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದಕ್ಕಾಗಿ 25 ಬೇರೆ ಬೇರೆ ಕಡೆ ನಿಯೋಜನೆಗೊಂಡಿರುವ ಆಡಿಟ್ ಅಧಿಕಾರಿಗಳನ್ನು ಮರಳಿ ಸಹಕಾರ ಇಲಾಖೆಗೆ ಕರೆಸಿಕೊಳ್ಳಲಾಗಿದೆ. ಎಲ್ಲ ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಸೊಸೈಟಿಗಳಲ್ಲಿ ನಡೆದಿರುವ ವ್ಯವಹಾರಗಳ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ಸಹಕಾರ ಸಚಿವರಾದ ಸೋಮಶೇಖರ್ ತಿಳಿಸಿದರು.

ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ರೈತರಿಗೆ ಇದು ಅನುಕೂಲ. ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡಲಿ, ಅವರೇ ಬೇಕಿದ್ದರೆ ಪ್ರತ್ಯೇಕ ಸೊಸೈಟಿ ಮಾದರಿಯಲ್ಲಿ ತಂಡ ಕಟ್ಟಿಕೊಂಡು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಬಹುದು. ಜೊತೆಗೆ ರೈತರ ಬೆಳೆಗೆ ಮೊದಲೇ ಬೆಲೆ ಖಾತ್ರಿಯಾಗುವುದರಿಂದ ಅನ್ಯಾಯವಾಗದು ಎಂದು ತಿಳಿಸಿದರು.

ಬಳಿಕ ಎಪಿಎಂಸಿ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News