ಮುಂಬೈ ಆಸ್ಪತ್ರೆಯ ಐಸಿಯುನಿಂದ ಕೊರೋನ ವೈರಸ್ ರೋಗಿ ನಾಪತ್ತೆ!

Update: 2020-06-02 09:14 GMT

  ಹೊಸದಿಲ್ಲಿ, ಜೂ.2: ಕುಟುಂಬ ಸದಸ್ಯರುಗಳಿಗೆ ಮಾಹಿತಿ ನೀಡದೆ ಕೋವಿಡ್-19 ರೋಗಿಯ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ ಪ್ರಕರಣ ವರದಿಯಾದ ಬೆನ್ನಿಗೇ ಮುಂಬೈನ ಸರಕಾರಿ ಆಸ್ಪತ್ರೆಯ ಐಸಿಯುನಲ್ಲಿದ್ದ ಕೋವಿಡ್-19 ರೋಗಿಯೇ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

  67ರ ಹರೆಯದ ರೋಗಿಯನ್ನು ಮುಂಬೈನ ಕೆಇಎಂ ಆಸ್ಪತ್ರೆಗೆ ಮೇ 14ರಂದು ದಾಖಲಿಸಲಾಗಿತ್ತು ಎಂದು ರೋಗಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮಾರಣಾಂತಿಕ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟ ಬಳಿಕ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೆ, ಮೇ 19ರಿಂದ ರೋಗಿ ನಾಪತ್ತೆಯಾಗಿದ್ದಾರೆ. ರೋಗಿ ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ.

"ನಮಗೆ ಮೇ 20ರಂದು ಬೆಳಗ್ಗೆ ಕರೆ ಬಂದಿತ್ತು. ನಾನು ಆ ಕರೆಯನ್ನು ಸ್ವೀಕರಿಸಿರಲಿಲ್ಲ. ನಾನು 10:30ಕ್ಕೆ ಮರಳಿ ಕರೆ ಮಾಡಿದ್ದೆ. ರೋಗಿಯು ಎಲ್ಲಿಯೂ ಕಾಣುತ್ತಿಲ್ಲ. ನೀವು ಸ್ಥಳಾಂತರಗೊಳಿಸಿದ್ದೀರಾ?ಎಂದು ನಮ್ಮನ್ನೇ ಆಸ್ಪತ್ರೆಯವರು ಪ್ರಶ್ನಿಸಿದ್ದಾರೆ. ನನಗೆ ಆ ಕುರಿತು ಏನೂ ಗೊತ್ತಿಲ್ಲ ಎಂದು ಅವರಿಗೆ ತಿಳಿಸಿದ್ದೆ. ನಾನು ಅವರನ್ನು ಅಲ್ಲಿ ಬಿಟ್ಟು ಕ್ವಾರಂಟೈನ್‌ನಲ್ಲಿದ್ದೆ. ಆ ನಂತರ ಅವರು ರೋಗಿಗಾಗಿ ಹುಡುಕಾಟ ನಡೆಸಿದ್ದು, ಹೀಗಿಯೇ ನಾಲ್ಕೈದು ದಿನ ಕಳೆದಿದ್ದಾರೆ. ಅವರು ಎಲ್ಲಿದ್ದಾರೆಂದು ನಮಗೆ ಗೊತ್ತಿಲ್ಲ'' ಎಂದು ನಾಪತ್ತೆಯಾಗಿರುವ ರೋಗಿಯ ಸಂಬಂಧಿಕರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ರೋಗಿ ನಾಪತ್ತೆಯಾದ ಐದು ದಿನಗಳ ಬಳಿಕ ಮುಂಬೈ ಪೊಲೀಸರು ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ಮುಂಬೈನ ನಿವಾಸಿ ಕೋವಿಡ್-19ಗೆ ಮೃತಪಟ್ಟ ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ಮೃತ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡದೇ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಪ್ರಕರಣದಲ್ಲಿ ಕೂಡ ರೋಗಿಯ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಬಳಿಕ ಬಿಎಂಸಿ ಅಧಿಕಾರಿಗಳು ರೋಗಿಯ ಕುಟುಂಬದವರನ್ನು ಪತ್ತೆ ಹಚ್ಚಲು ಕಷ್ಟವಾದ ಕಾರಣ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು.

ಮುಂಬೈನ ವಡಾಲ ನಿವಾಸಿಯಾಗಿರುವ ರಾಕೇಶ್ ವರ್ಮಾ ಮೇ 17ರಂದು ಮೃತಪಟ್ಟಿದ್ದು, ಪೊಲೀಸ್ ಅಧಿಕಾರಿಗಳು ಅವರ ಅಂತ್ಯಕ್ರಿಯೆ ನಡೆಸಿದ್ದರು. ವರ್ಮಾ ಅವರ ಅಂತ್ಯಕ್ರಿಯೆ ನಡೆಸಿದ್ದು ನಮಗೆ ಗೊತ್ತಿರಲಿಲ್ಲ. ಅವರು ಸಾವನ್ನಪ್ಪಿರುವುದೂ ನಮಗೆ ಗೊತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

 ಕೆಇಎಂ ಆಸ್ಪತ್ರೆಯಲ್ಲಿ ನಾಪತ್ತೆಯಾಗಿರುವ ರೋಗಿಗಳ ಪ್ರಕರಣದಲ್ಲಿ ಪೊಲೀಸರು ಇನ್ನಷ್ಟೇ ವ್ಯಕ್ತಿಯನ್ನು ಪತ್ತೆ ಹಚ್ಚಬೇಕಾಗಿದೆ. 67ರ ಹರೆಯದ ಕೋವಿಡ್-19 ರೋಗಿಯು ಯಾರಿಗೂ ಗೊತ್ತಾಗದೆ ಆಸ್ಪತ್ರೆಯ ವಾರ್ಡ್‌ನಿಂದ ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News