ಕೋವಿಡ್-19: ತಾಲೂಕು ಕೇಂದ್ರಗಳಲ್ಲಿ ವಾಸ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

Update: 2020-06-02 13:06 GMT

ಬೆಂಗಳೂರು, ಜೂ.2: ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತಾಲೂಕುಗಳನ್ನು ವಿಭಾಗಿಸಿಕೊಂಡು ತಾಲೂಕು ಕೇಂದ್ರಗಳಲ್ಲಿ ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ, ವಿಜಯಪುರ, ಉಡುಪಿ, ಯಾದಗಿರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಅವರು ವೀಡಿಯೊ ಸಂವಾದದಲ್ಲಿ ಮಾತನಾಡಿದರು.

ತಾಲೂಕು ಕೇಂದ್ರಗಳಲ್ಲಿಯೆ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ ಮುಖ್ಯಮಂತ್ರಿ, ಜೂ.8 ರಿಂದ ಸಡಿಲಿಕೆಗಳನ್ನು ಮಾಡುತ್ತಿರುವುದರಿಂದ ಕಟ್ಟೆಚ್ಚರ ವಹಿಸಿ, ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. 

ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ವಲಸಿಗರಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್-19 ಪರೀಕ್ಷಾ ಕಿಟ್‍ಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು ಎಂದು ಅವರು ಸೂಚಿಸಿದರು.

ಗೃಹ ಬಂಧನದಲ್ಲಿದ್ದವರು(ಹೋಮ್ ಕ್ವಾರಂಟೈನ್) ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು.  ಪೊಲೀಸ್ ಇಲಾಖೆ ವತಿಯಿಂದ ಗೃಹ ಬಂಧನದಲ್ಲಿರುವವರ ಮನೆಯ ಬಳಿ ಪೇದೆಗಳನ್ನು ನಿಯೋಜಿಸಬೇಕಲ್ಲದೆ, ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಇವರ ಬಗ್ಗೆ ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಗ್ರಾಮ ಪಂಚಾಯತಿಗಳ ಸದಸ್ಯರಿಗೆ ಈ ಬಗ್ಗೆ ತರಬೇತಿಯನ್ನೂ ನೀಡಲಾಗಿದ್ದು, ಬೂತ್ ಮಟ್ಟದ ತಂಡಗಳು ಪ್ರತಿ ದಿನ ವರದಿ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ವಾರ್ಡ್ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಬೇಕು. ಈ ಸಮಿತಿಗಳು  ಕ್ರಿಯಾಶೀಲವಾಗಿದ್ದು,  ಹೋಮ್ ಕ್ವಾರಂಟೈನ್ ಉಲ್ಲಂಘನೆಯಾದರೆ ಎಫ್.ಐ.ಆರ್ ದಾಖಲಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಗಡಿ ಭಾಗಗಳಲ್ಲಿರುವ ಜಿಲ್ಲೆಗಳು ಕಟ್ಟುನಿಟ್ಟಾಗಿ ಗಡಿ ಪ್ರದೇಶಗಳನ್ನು ಕಾಯ್ದು, ಅಕ್ರಮ ಪ್ರವೇಶವನ್ನು ತಡೆಯಬೇಕು. ಮೃತ ದೇಹಗಳನ್ನು ಯಾವುದೆ ಕಾರಣಕ್ಕೂ ರಾಜ್ಯದೊಳಗೆ ತರದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಎಸೆಸೆಲ್ಸಿ, ಪಿಯುಸಿ ಪರೀಕ್ಷಾ ದಿನಾಂಕಗಳು ನಿಗದಿಯಾಗಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಕ್ರಮ ವಹಿಸಬೇಕು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್,  ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಆಯುಕ್ತ ಪಂಕಜ್‍ಕುಮಾರ್ ಪಾಂಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News