ಮೆಕ್ಕೆಜೋಳ, ಹಣ್ಣು, ಹೂವು ಬೆಳೆಗಾರರಿಗೆ ಪರಿಹಾರ ವಿತರಣೆಗೆ 666 ಕೋಟಿ ರೂ.ಹಣ ಬಿಡುಗಡೆ

Update: 2020-06-02 13:34 GMT

ಬೆಂಗಳೂರು, ಜೂ. 2: ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್‍ನಿಂದಾಗಿ ಸೂಕ್ತ ಮಾರುಕಟ್ಟೆ ಸಿಗದೆ ಬೆಳೆ ನಷ್ಟಕ್ಕೆ ಒಳಗಾಗಿದ್ದ ಮೆಕ್ಕೆಜೋಳ ಹಾಗೂ ಹಣ್ಣು, ಹೂವು ಬೆಳೆಗಾರರಿಗೆ ಒಟ್ಟು 666 ಕೋಟಿ ರೂ.ಮೊತ್ತದ ಪರಿಹಾರ ಪ್ರಕಟಿಸಿದ್ದು, ಆ ಮೊತ್ತವನ್ನು ಇಂದು ಆನ್‍ಲೈನ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು. ಶೀಘ್ರವೇ ರೈತರಿಗೆ ಹಣ ಸಂದಾಯ ಮಾಡಬೇಕು ಎಂದು ಅವರು ಸೂಚಿಸಿದರು.

ಕೊರೋನ ವೈರಸ್ ಸೋಂಕು ತಡೆಗೆ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗದ 150 ಮಂದಿ ಹಾಪ್‍ಕಾಮ್ಸ್ ನೌಕರರ ವಿರುದ್ಧ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಶ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ 550 ಹಾಪ್‍ಕಾಮ್ಸ್ ಮಳಿಗೆಗಳ ಪೈಕಿ 250 ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಮಳಿಗೆಗಳು ತೆರೆಯದೆ ಇರುವುದರಿಂದ ಅಂತಹವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಇಲ್ಲವಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ನೀಡಬಾರದು ಎಂದ ಯಡಿಯೂರಪ್ಪ, ಒಂದು ತಿಂಗಳ ನಂತರ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಲು ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಹೆಚ್ಚುವರಿ ಬಿತ್ತನೆಬೀಜ ವಿತರಣೆ ಮಾಡಬೇಕು. ಕೊರೋನ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಪದಾರ್ಥಗಳ ಸರಪಳಿ ನಿರ್ವಹಣಾ ಕೋಶ ಕಾರ್ಯನಿರ್ವಹಿಸುತ್ತಿದೆ. ಕೃಷಿ ವಾರ್ ರೂಂ ಸ್ಥಾಪಿಸಿದ್ದು, ಪರಿಕರಗಳ ಲಭ್ಯತೆ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಅಹವಾಲುಗಳನ್ನು ಸ್ಪೀಕರಿಸಿ, ಅವುಗಳ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಯಡಿಯೂರಪ್ಪ ನಿರ್ದೇಶನ ನೀಡಿದರು.

ವಾಪಸ್ ಕರೆಸಿಕೊಳ್ಳಿ: ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿರುವ ಎಲ್ಲ ಅಧಿಕಾರಿಗಳು ಮತ್ತು ನೌಕರರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು. ಇದರಿಂದ ಇಲಾಖೆ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಯಡಿಯೂರಪ್ಪ ಇದೇ ವೇಳೆ ಸಲಹೆ ಮಾಡಿದರು.

ರೇಶ್ಮೆ ವಿಸ್ತೀರ್ಣಕ್ಕೆ ಸೂಚನೆ: ಹಿಪ್ಪುನೇರಳೆ ಬೆಳೆ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಒತ್ತುವರಿ ಆಗಿರುವ ಸರಕಾರಿ ಜಮೀನನ್ನು ಮರಳಿ ಸರಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ ಹೆಚ್ಚಿಸಲು ಆಸ್ಥೆ ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್‍ನಿಂದಾಗಿ ಸೂಕ್ತ ಮಾರುಕಟ್ಟೆ ಸಿಗದೆ ಬೆಳೆ ನಷ್ಟಕ್ಕೆ ಒಳಗಾಗಿದ್ದ ಮೆಕ್ಕೆಜೋಳ ಹಾಗೂ ಹಣ್ಣು, ಹೂವು ಬೆಳೆಗಾರರಿಗೆ ಒಟ್ಟು 666 ಕೋಟಿ ರೂ.ಮೊತ್ತದ ಪರಿಹಾರ ಪ್ರಕಟಿಸಿದ್ದು, ಆ ಮೊತ್ತವನ್ನು ಇಂದು ಆನ್‍ಲೈನ್ ಮೂಲಕ ಬಿಡುಗಡೆ ಮಾಡಿದರು. ಶೀಘ್ರವೇ ರೈತರಿಗೆ ಹಣ ಸಂದಾಯ ಮಾಡಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಹಾಗೂ ರೇಶ್ಮೆ ಸಚಿವ ನಾರಾಯಣಗೌಡ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹಿರಿಯ ಅಧಿಕಾರಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಐಎನ್‍ಎಸ್ ಪ್ರಸಾದ್, ವಂದಿತಾ ಶರ್ಮಾ ಸೇರಿದಂತೆ ಇನ್ನಿತರರ ಹಾಜರಿದ್ದರು.

ಕೃಷಿ ನಮ್ಮ ಆದ್ಯತೆ
`ನೂರು ದಿನಗಳಲ್ಲಿ ತಾವು ಇಟ್ಟಿರುವ ಹೆಜ್ಜೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದು, ಇದು ಸಾಧನೆಯಲ್ಲ, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ ಹೆಜ್ಜೆಗಳು. ಸರಕಾರ ಎಂದಿಗೂ ರೈತರ ಜೊತೆಗಿದೆ. ಅನ್ನದಾತರೊಂದಿಗೆ ನಾವಿದ್ದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಆದ್ಯತೆ'
-ಬಿ.ಸಿ.ಪಾಟೀಲ್, ಕೃಷಿ ಸಚಿವ

ಉಸ್ತುವಾರಿ ನೇಮಕ
`ಹಾಸನ ಮತ್ತು ಮಂಡ್ಯ ಜೆಡಿಎಸ್‍ನ ಭದ್ರಕೋಟೆಗಳಲ್ಲ. ಅವು ಈಗಾಗಲೇ ಛಿದ್ರಗೊಂಡಿವೆ. ಹಾಸನ ಜಿಲ್ಲೆಗೆ ಆಹಾರ ಸಚಿವ ಕೆ.ಗೋಪಾಲಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ನಾನು ಮಂಡ್ಯ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲು ಇಚ್ಛಿಸುವುದಿಲ್ಲ'
-ನಾರಾಯಣಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News