ಆಶಾ ಕಾರ್ಯಕರ್ತೆಯರ ಸ್ವಸಹಾಯ ಸಂಘ ರಚನೆಗೆ ಅಗತ್ಯ ಕ್ರಮ: ಸಹಕಾರಿ ಸಚಿವ ಸೋಮಶೇಖರ್

Update: 2020-06-02 12:49 GMT

ಚಿಕ್ಕಮಗಳೂರು, ಜೂ.2: ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರ ಸ್ವಸಹಾಯ ಸಂಘ ರಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಡಿಸಿಸಿ ಬ್ಯಾಂಕ್ ಅಡಿಯಲ್ಲಿಯೇ ಬಡವರ ಬಂಧು ಯೋಜನೆ, ಕಾಯಕ ಯೋಜನೆ ಹಾಗೂ ವಿಎಸ್‍ಎಸ್ ಯೋಜನೆಯಡಿ ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘ ಮಾದರಿಯಲ್ಲಿ ಐದು ಲಕ್ಷ ರೂ.ವರೆಗೂ ಸಾಲ ಸೌಲಭ್ಯ ನೀಡುವ ಯೋಜನೆ ಜಾರಿಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಜಿಲ್ಲಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾ ಸಹಕಾರಿ  ಬ್ಯಾಂಕ್ ವತಿಯಿಂದ ಮೂರು ಸಾವಿರ ರೂ. ಪ್ರೋತ್ಸಾಹ ಧನದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರ ಪರಿಶ್ರಮದಿಂದಾಗಿ ಕೋವಿಡ್-19ಅನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ. ಆಶಾ ಕಾರ್ಯಕರ್ತೆಯರ ಪರಿಶ್ರಮವನ್ನು ಗುರುತಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ ಎಂದರು.

ರಾಜ್ಯಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ. ಅದರಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರೋತ್ಸಾಹ ಧನ ನೀಡಲು ಚಾಲನೆ ನೀಡಲಾಗಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ 937 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಜನರು ಒಂದು ಕಡೆ ಸೇರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 50 ಜನ ಆಶಾ ಕಾರ್ಯಕರ್ತೆಯರಿಗೆ ಚೆಕ್‍ಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಎಲ್ಲಾರಿಗೂ ಚೆಕ್‍ಗಳನ್ನು ನೀಡಲಾಗುವುದು ಎಂದರು. 

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‍ಗಳು ಬಡವರ ಬಂಧು, ಸ್ತ್ರೀಶಕ್ತಿ ಸ್ವಸಹಾಯ ಸಂಘ, ಕಾಯಕ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಹಾಗೂ ರೈತರಿಗೆ ಆರ್ಥಿಕ ನೆರವು ನೀಡುತ್ತಿರುವುದು ಸಂತೋಷದಾಯಕ ವಿಚಾರ. ಆದರೆ, ರಾಜ್ಯದ ಅನೇಕ ಡಿಸಿಸಿ ಬ್ಯಾಂಕ್‍ಗಳು ಮುಂಗಡ ಹಣ ಇರಿಸಿಕೊಳ್ಳದೇ ಕೋಟ್ಯಂತರ ರೂ. ಸಾಲವನ್ನು ಒಂದೇ ವ್ಯಕ್ತಿಗೆ ಸಾಲ ನೀಡಿವೆ. ಅದೇ ಹಣವನ್ನು ರೈತರಿಗೆ ನೀಡಿದ್ದರೇ ಡಿಸಿಸಿ ಬ್ಯಾಂಕ್‍ಗಳಲ್ಲಿ ಆರ್ಥಿಕ ವ್ಯವಹಾರ ಇನಷ್ಟು ಉನ್ನತಿ ಸಾಧಿಸಲು ಸಾಧ್ಯವಾಗುತ್ತಿತ್ತು ಎಂದು ಅಭಿಪ್ರಾಯಿಸಿದ ಅವರು, ಡಿಸಿಸಿ ಬ್ಯಾಂಕ್ ಯಾವುದೇ ಲಾಭವನ್ನು ಆಪೇಕ್ಷೆಪಡದೆ ರೈತರಿಗೆ ಸಾಲ ನೀಡುತ್ತಿದೆ. ಕೃಷಿ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಸಾಲ ನೀಡಿದರೆ ಬ್ಯಾಂಕ್ ಏಳಿಗೆ ಸಾಧ್ಯವಿಲ್ಲ,  ರಾಜ್ಯದ 1,35,000 ರೈತರಿಗೆ ಈಗಾಗಲೇ ಸಾಲ ನೀಡಲಾಗಿದೆ. ಸದ್ಯದಲ್ಲೇ ಹೊಸ ಸಾಲ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಕೋವಿಡ್-19 ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ 125 ಕೋಟಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದೆ. 53 ಕೋಟಿ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಈಗ 28 ಲಕ್ಷ ರೂ. ವೆಚ್ಚದಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು. 

ವಿಧಾನ ಪರಿಷತ್ ಉಪಸಭಾಪತಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಸಹಕಾರಿ ಬ್ಯಾಂಕ್ ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಸರಕಾರಿ ವ್ಯವಹಾರವನ್ನು ಡಿಸಿಸಿ ಬ್ಯಾಂಕ್ ಮೂಲಕ ಮಾಡವ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ ಆದರೆ, ಕಾರ್ಯಘತವಾಗಿಲ್ಲ ಈ ಹಿನ್ನೆಲೆಯಲ್ಲಿ ಸಚಿವರು ಗಮನಹರಿಸಬೇಕು. ಡಿಸಿಸಿ ಬ್ಯಾಂಕ್‍ಗೆ ಸರಕಾರದಿಂದ ಬರಬೇಕಾದ ಬಡ್ಡಿ ದರ ನೀಡುವಲ್ಲಿ ವಿಳಂಬವಾಗುತ್ತಿದೆ. ಜಿಲ್ಲೆಯ ಡಿಸಿಸಿ ಬ್ಯಾಂಕ್‍ಗೆ 33 ಕೋಟಿ ರೂ. ಸರಕಾರದಿಂದ  ಬರಬೇಕಿದೆ. ಸರಿಯಾದ ಸಮಯದಲ್ಲಿ ಹಣ ಪಾವತಿಯಾದರೆ ಸಹಕಾರಿ ಬ್ಯಾಂಕ್‍ಗಳ ಏಳಿಗೆಗೆ ಸಹಕಾರಿಯಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಹೆಗ್ಡೆ,  ನಿರ್ದೇಶಕರಾದ ಕೆಂಪರಾಜ್, ರಮೇಶ್, ಪ್ರಕಾಶ್ ರಾವ್, ರಾಮಯ್ಯ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ರಾಜ್ಯದ 9 ಡಿಸಿಸಿ ಬ್ಯಾಂಕ್‍ಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ವಿಳಂಭವಾಗಿದೆ. ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಿದ್ದು,  ರೈತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈಗೀರುವ ಆಡಳಿತ ಮಂಡಳಿಯನ್ನೇ ಮುಂದಿನ ಆರು ತಿಂಗಳು ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಕಟ್ಟುನಿಟ್ಟಿನ ನಿರ್ಧಾರದಿಂದ ರಾಜ್ಯದಲ್ಲಿ ಕೋವಿಡ್-19 ಪ್ರಕರಣ ನಿಯಂತ್ರಣಕ್ಕೆ ಬಂದಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್ ರಾಜ್ಯದಿಂದ ಬಂದವರಿಂದ ಸೋಂಕು ಹರಡಿದೆ. ಸೋಂಕು ತಗುಲಿದವರು ಅಷ್ಟೇ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೊರ ರಾಜ್ಯದಿಂದ ಬರುವವವರಿಗೆ ಸರಕಾರದ ಸದ್ಯ ತಡೆ ನೀಡಿದೆ.
- ಎಸ್.ಟಿ.ಸೋಮಶೇಖರ್, ಸಹಕಾರಿ ಸಚಿವ

ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‍ಗಳನ್ನು ಒಂದೇ ಸಾಫ್ಟ್ ವೇರ್ ಅಡಿಯಲ್ಲಿ ತರಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಯಾವ ರೈತನಿಗೆ ಸಾಲ ನೀಡಲಾಗಿದೆ. ಯಾವ ರೈತ ಸಾಲಮನ್ನಾ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾನೆ ಎಂಬುದು ತಿಳಿಯಲು ಸಾಧ್ಯವಿದೆ. ಸಹಕಾರಿ ಬ್ಯಾಂಕ್‍ಗಳ ಏಳಿಗೆಗಾಘಿ ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳಲ್ಲಿನ ಸಮಸ್ಯೆ ತಿಳಿದುಕೊಳ್ಳಲು ಪರಿಶೀಲನೆ ನಡೆಸಿದ್ದೇನೆ. ಸಹಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರಿ ಕಾನೂನು ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

- ಎಸ್.ಟಿ.ಸೋಮಶೇಖರ್, ಸಹಕಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News