ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಎಪಿಎಂಸಿ ತಿದ್ದುಪಡಿ ಕಾಯ್ದೆ ಸಹಕಾರಿ: ಸಚಿವ ಸೋಮಶೇಖರ್

Update: 2020-06-02 12:55 GMT

ಚಿಕ್ಕಮಗಳೂರು, ಜೂ.2: ರಾಜ್ಯದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ನಿಗಧಿತ ಬೆಂಬಲ ಬೆಲೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಂಡಿದ್ದು, ಮಧ್ಯವರ್ತಿಗಳ ಸಂಪರ್ಕವಿಲ್ಲದೇ ರೈತರೇ ನೇರವಾಗಿ ಮಾರುಕಟ್ಟೆಯಲ್ಲಿ ವ್ಯವಹರಿಸುವ ಉದ್ದೇಶದಿಂದ ಎ.ಪಿ.ಎಂ.ಸಿ ಮಾರುಕಟ್ಟೆ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿ ಕೃಷಿ ಉತ್ಪನ್ನಗಳ ಬೆಲೆ ಹಾಗೂ ದಾಸ್ತಾನು ಮಳಿಗೆಗಳನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ಮಾರಾಟ ಮಾಡಲು ಪೂರ್ಣ ಸ್ವಾತಂತ್ರ್ಯ ಸಿಗಬೇಕು. ಉತ್ತಮ ಬೆಲೆ ಸಿಗುವ ಯಾವುದೇ ಭಾಗದಲ್ಲಿ ನಿರ್ಬಂಧಗಳಿದಲ್ಲೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ರೈತರಿಗೆ ನೇರ ಲಾಭ ದೊರೆಯುವಂತೆ ಮಾಡುವ ಉದ್ದೇಶದಿಂದ ಎಂ.ಪಿ ಎಂ.ಸಿ ಕಾಯ್ದೆ ರೂಪಿಸಲಾಗುತ್ತಿದೆ. ಕೋವಿಡ್-19 ಕಾರಣದಿಂದಾಗಿ ಈ ಕಾಯ್ದೆಯನ್ನು ಜಾರಿಗೊಳಿಸುವುದು ತಡವಾಗಿದೆ. ಖಾಸಗಿ ಸಂಸ್ಥೆಗಳಿಗೆ ಪರವಾನಿಗೆ ನೀಡುವ ಸಂಬಂಧ ರಾಜ್ಯದ ಎ.ಪಿ.ಎಂ.ಸಿ ಬೋರ್ಡ್‍ಗೆ ಪರವಾನಿಗೆ ನೀಡುವ, ರದ್ದುಗೊಳಿಸುವ ಅಧಿಕಾರವನ್ನು ನೀಡಲಾಗಿದ್ದು, ಇದರಲ್ಲಿ ರೈತರಿಗೆ ತೊಂದರೆ ನೀಡುವ ಉದ್ದೇಶವಿಲ್ಲ, ರೈತರ ಹಿತದೃಷ್ಟಿಯಿಂದ ಕಾಯ್ದೆಗಳನ್ನು ರೂಪಿಸುವುದು ಸರಕಾರದ ಉದ್ದೇಶವಾಗಿದೆ ಎಂದರು. 

ಜಿಲ್ಲೆಯಲ್ಲಿ ರೈತರ ಉತ್ಪನ್ನಗಳ ಹಿತದೃಷ್ಟಿಯಿಂದ ಶೀತ ಸಂಗ್ರಹಣ ದಾಸ್ತಾನು ಘಟಕಗಳನ್ನು (ಕೋಲ್ಡ್ ಸ್ಟೋರೇಜ್) ಸ್ಥಾಪಿಸುವಂತೆ ರೈತರು, ಸಿಟಿ ರವಿ ಸೇರಿದಂತೆ ಜನಪ್ರತಿನಿಧಿಗಳು ಕೇಳಿಕೊಂಡಿದ್ದಾರೆ, ಘಟಕ ಬೇಕೆಂದು ಪತ್ರ ನೀಡಿದರೇ ಎರಡೇ ದಿನದಲ್ಲಿ ಮಂಜೂರು ಮಾಡಿಸುತ್ತೇನೆಂದ ಅವರು,  ರಾಜ್ಯದಲ್ಲಿ ಯಾವುದೇ ಕೃಷಿ ಉತ್ಪನ್ನ ಸಾಗಾಟಕ್ಕೆ ನಿರ್ಬಂಧವಿಲ್ಲ. ಎಲ್ಲಾ ಭಾಗದಿಂದಲೂ ಕೃಷಿ ಉತ್ಪನ್ನಗಳು ಆಮದು ಮತ್ತು ರಪ್ತು ಆಗುತ್ತಿವೆ. ರಾಜ್ಯದ ಕೆಲ ಡಿ.ಸಿಸಿ. ಬ್ಯಾಂಕ್‍ಗಳು ಹಾಗೂ ವಿಎಸ್ಸೆಸ್ಸೆನ್ ಸೊಟೈಟಿಗಳಲ್ಲಿ ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸಂಬಂಧ ತಂಡ ರಚಿಸಿ ಸೂಕ್ತ ತನಿಖೆ ನಡೆಸಲಾಗುವುದು. ಜಿಲ್ಲೆಗೊಬ್ಬರಂತೆ ಡೆಪ್ಯೂಟಿ ಆಡಿಟರ್ ನೇಮಿಸಿ ರೈತರ ಹಿತ ಕಾಯಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಮಾತನಾಡಿ, ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಾರುಕಟ್ಟೆ ಕಾಯ್ದೆಯನ್ನು ಸರಕಾರ ಜಾರಿಗೆ ತಂದಿದೆ. ಇದು ರೈತ ವಿರೋಧಿ ಕಾಯ್ದೆಯಲ್ಲ. ರೈತರು ಹಾಗೂ ವ್ಯಾಪಾರಿಗಳೊಂದಿಗೆ ನೇರ ಸಂಪರ್ಕ ಇರಬೇಕು. ಮಧ್ಯವರ್ತಿಗಳ ಹಾವಳಿ ತಡೆಯಬೇಕು, ರೈತ ಬೆಳೆದ ಬೆಳೆಗೆ ಸೂಕ್ತ ನಿಗದಿತ ಬೆಂಬಲ ಬೆಲೆ ಸಿಗಬೇಕು ಎನ್ನುವ ಉದ್ದೇಶದಿಂದ ಖಾಸಗಿ ವ್ಯಕ್ತಿಗಳ ಸಹಕಾರದಿಂದ ಈ ಕಾಯ್ದೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು. 

ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ ಸಚಿವರು ಎಪಿಎಂಸಿ ಆವರಣದ ಸಭಾಂಗಣದಲ್ಲಿ ಅಧಿಕಾರಿಗಳು, ಸದಸ್ಯರೊಂದಿಗೆ ಪ್ರಗತಿಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಹೇಂದ್ರ, ಎ.ಪಿ.ಎಂ.ಸಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News