ಕೊರೋನದ ಜೊತೆಯಲ್ಲೆ ಕೊಡಗಿನಲ್ಲಿ ಮುಂಗಾರಿನ ಆತಂಕ

Update: 2020-06-02 13:17 GMT

ಮಡಿಕೇರಿ, ಜೂ.2 : ಇಡೀ ವಿಶ್ವವನ್ನು ಎಡೆಬಿಡದೆ ಕಾಡುತ್ತಿರುವ ಕೊರೊನ ಸಾಂಕ್ರಾಮಿಕ ಇತರೆ ಪ್ರದೇಶಗಳಂತೆಯೇ ಕೊಡಗು ಜಿಲ್ಲೆಯ ಆರ್ಥಿಕ ಸಾಮಾಜಿಕ ವ್ಯವಸ್ಥೆಗಳನ್ನು ಹದಗೆಡಿಸಿ, ಜನರನ್ನ ಹೈರಾಣಾಗಿಸಿದೆ. ಇದೀಗ ಜಿಲ್ಲೆಯ ಜನತೆಯ ಮುಂದೆ ಕೊರೊನ ಸಾಂಕ್ರಾಮಿಕದೊಂದಿಗೆ ಮುಂಗಾರನ್ನು ಅತ್ಯಂತ ಎಚ್ಚರಿಕೆಯಿಂದ ಕ್ರಮಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ನೈಋತ್ಯ ಮಾರುತಗಳು ಕೇರಳವನ್ನು ಇಂದು ಪ್ರವೇಶಿಸಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿಯನ್ನು ಒದಗಿಸಿದೆ. ಒಮ್ಮೆ ಮಳೆಯ ಮಾರುತಗಳು ಕೇರಳವನ್ನು ಪ್ರವೇಶಿಸಿದ ಬಳಿಕ, ಸರಿ ಸುಮಾರು ವಾರದ ಅವಧಿಯ ಒಳಗೆ ಕೊಡಗು ವರ್ಷಾಧಾರೆಗೆ ತನ್ನನ್ನು ಒಡ್ಡಿಕೊಳ್ಳುವುದು ಸಾಮಾನ್ಯ.

ಕಳೆದ 2018 ಮತ್ತು 19 ರ ಎರಡು ಮುಂಗಾರಿನ ಅವಧಿಯಲ್ಲಿ ಕೊಡಗು ಜಿಲ್ಲೆ ಕಂಡು ಕೇಳರಿಯದ ಮುಂಗಾರಿನ ಆರ್ಭಟವನ್ನು, ಕಣ್ಣೆದುರೇ ಬೆಟ್ಟಗಳು ಕುಸಿದು ನೂರಾರು ಕುಟುಂಬಗಳ ಬದುಕು ಬರಡಾದುದನ್ನ ಕಂಡಿದೆ. ಜಿಲ್ಲೆಯ ಜನತೆಯಲ್ಲಿ ಈ ಆತಂಕ ಇಂದಿಗೂ ಮರೆಯಾಗಿಲ್ಲ. ಎರಡು ವರ್ಷಗಳ ಸಂಕಷ್ಟದಿಂದ ಹೊರ ಬರುವ ಪ್ರಯತ್ನಗಳ ನಡುವೆ ಎದುರಾಗಿರುವ ಕೊರೊನಾ, ಗಾಯದ ಮೇಲೆ ಬರೆ ಎಳೆದಂತೆ ಸಂಕಷ್ಟದ ಬದುಕನ್ನ ಮತ್ತಷ್ಟು ದುಸ್ತರವಾಗಿಸಿದೆ. ಇಂತಹ ಕ್ಲಿಷ್ಟ ಮತ್ತು ಸಂದಿಗ್ದ ಅವಧಿಯಲ್ಲಿ ಮುಂಗಾರಿನ ಜೂನ್ ಮಾಸಕ್ಕೆ ಕೊಡಗು ಅಣಿ ಇಟ್ಟಿದೆ.

ಪ್ರಾಕೃತಿಕ ವಿಕೋಪ ಎದುರಾದಲ್ಲಿ ಅದನ್ನು ಎದುರಿಸಲು ಅನುವಾಗುವಂತೆ ಜಿಲ್ಲಾಡಳಿತ ಅದಾಗಲೆ ಒಂದು ಸುತ್ತಿನ ಅಧಿಕಾರಿಗಳ ಸಭೆ ನಡೆಸಿ, ಮುಂಜಾಗ್ರತಾ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡವನ್ನು ಜಿಲ್ಲೆಗೆ ಕರೆಸಿಕೊಳ್ಳಲು ಮುಂದಾಗಿದೆ. ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ, ಆಯಾ ಗ್ರಾಮ ಪಂಚಾಯ್ತಿಗಳು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News