12.39 ಲಕ್ಷ ಕಾರ್ಮಿಕರಿಗೆ ತಲಾ 5 ಸಾವಿರ ರೂ.ಪರಿಹಾರ ನೀಡಲಾಗಿದೆ: ಹೈಕೋರ್ಟ್‍ಗೆ ಮಾಹಿತಿ ಸಲ್ಲಿಕೆ

Update: 2020-06-02 18:39 GMT

ಬೆಂಗಳೂರು, ಜೂ.2: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಿವಿಧ ಶ್ರಮಿಕ ವರ್ಗಗಳಿಗೆ ಮುಖ್ಯಮಂತ್ರಿಯವರು ಘೋಷಿಸಿರುವ ವಿಶೇಷ ಪ್ಯಾಕೇಜ್ ಪ್ರಕಾರ 12.39 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಪರಿಹಾರ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಹೈಕೋರ್ಟ್‍ಗೆ  ರಾಜ್ಯ ಸರಕಾರ ತಿಳಿಸಿದೆ. 

ಈ ಕುರಿತು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಯಿತು.
ಈ ವೇಳೆ ರಾಜ್ಯ ಸರಕಾರದ ಪರ ಹೆಚ್ಚುವರಿ ಸರಕಾರಿ ವಕೀಲ ವಿ.ಜಿ. ಭಾನುಪ್ರಕಾಶ್ ಲಿಖಿತ ಆಕ್ಷೇಪಣಾ ಹೇಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಮುಖ್ಯಮಂತ್ರಿಯವರು ಘೋಷಿಸಿದ ಪ್ಯಾಕೇಜ್ ಅನುಸಾರ 21.80 ಲಕ್ಷ ಕಟ್ಟಡ ಕಾರ್ಮಿಕರ ಪೈಕಿ ಈವರೆಗೆ ಮಂಡಳಿ ಬಳಿ ಬ್ಯಾಂಕ್ ಖಾತೆಗಳ ವಿವರ ಲಭ್ಯವಿದ್ದ 12.39 ಲಕ್ಷ ಕಾರ್ಮಿಕರಿಗೆ ತಲಾ 5 ಸಾವಿರ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಇದರ ಒಟ್ಟು ಮೊತ್ತ 619 ಕೋಟಿ ರೂ. ಆಗಿದೆ. ಉಳಿದ ಕಾರ್ಮಿಕರ ಬ್ಯಾಂಕ್ ಖಾತೆ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಲು ರಾಜ್ಯಾದ್ಯಂತ 41 ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೇ, ಕಟ್ಟಡ ಕಾರ್ಮಿಕರ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಮಾಸ್ಕ್, ಸ್ಯಾನಿಟೈಸರ್, ಸಾಬೂನು ಪೂರೈಸಲು 41 ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ತಲಾ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ಅರ್ಜಿದಾರರ ಆರೋಪವನ್ನು ಅಲ್ಲಗಳೆದಿರುವ ಸರಕಾರದ ಪರ ವಕೀಲರು, ಈವರೆಗೆ ಕಟ್ಟಡ ಕಾರ್ಮಿಕರಿಗೆ 78.21 ಲಕ್ಷ ತಯಾರಿಸಿದ ಆಹಾರ ಕಿಟ್, 81 ಸಾವಿರ ಒಣ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಗಿದೆ. ಹೆಚ್ಚುವರಿಯಾಗಿ 5 ಲಕ್ಷ ಒಣ ಆಹಾರ ಪದಾರ್ಥಗಳ ಕಿಟ್‍ಗಳನ್ನು ಖರೀದಿಸಲಾಗಿದ್ದು, ರಾಜ್ಯಾದ್ಯಂತ ಅದರ ವಿತರಣೆ ಪ್ರಗತಿಯಲ್ಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ ಅರ್ಜಿದಾರರ ಪರ ವಕೀಲ ಎಸ್.ಎಸ್. ರವಿಶಂಕರ್ ವಾದ ಮಂಡಿಸಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗಿಲ್ಲ. ಬ್ಯಾಂಕ್ ಖಾತೆ ಇಲ್ಲದೇ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲಾಗಿದೆ ಇದು ನಿಯಮ ಬಾಹಿರ ಎಂದು ಆರೋಪಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಸರಕಾರ ಹೇಳಿರುವ ಪ್ರಕಾರ 21.80 ಲಕ್ಷ ಕಾರ್ಮಿಕರ ಪೈಕಿ 12.39 ಲಕ್ಷ ಕಾರ್ಮಿಕರಿಗಷ್ಟೇ ಪರಿಹಾರ ತಲುಪಿದೆ. ಹಾಗಾದರೆ, ಉಳಿದ ಕಾರ್ಮಿಕರಿಗೆ ಯಾವಾಗ ಪರಿಹಾರ ನೀಡುತ್ತೀರಿ, ಬ್ಯಾಂಕ್ ಖಾತೆ ಇಲ್ಲದ ಕಾರ್ಮಿಕರನ್ನು ಹೇಗೆ ನೋಂದಾಯಿಸಿಕೊಂಡಿದ್ದೀರಿ, ಅವರಿಗೆ ಪರಿಹಾರ ನೀಡುವ ಬಗೆ ಹೇಗೆ? ಒಟ್ಟಾರೆ ಕಟ್ಟಡ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲು ಅನುಸರಿಸುವ ಮಾನದಂಡಗಳೇನು ಎಂಬ ಬಗ್ಗೆ ವಿವರಣೆ ನೀಡುವಂತೆ ಸರಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News