ಎಸ್‍ಡಿಆರ್ ಎಫ್‍ನಿಂದ ಕೊರೋನ ತಡೆಗಾಗಿ 284 ಕೋಟಿ ರೂ.ಅನುದಾನ: ಆರ್.ಅಶೋಕ್

Update: 2020-06-03 14:49 GMT

ರಾಮನಗರ, ಜೂ.3: ರಾಜ್ಯದಲ್ಲಿ ಕೊರೋನ ಕೊರೋನ ನಿಯಂತ್ರಣಕ್ಕಾಗಿ ಎಸ್‍ಡಿಆರ್‍ಎಫ್ ಅನುದಾನದಿಂದ 284 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬುಧವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎಸ್‍ಡಿಆರ್‍ಎಫ್‍ನಿಂದ ಪೊಲೀಸ್ ಇಲಾಖೆಗೆ 10 ಕೋಟಿ ರೂ., ಆರೋಗ್ಯ ಇಲಾಖೆಗೆ 70 ಕೋಟಿ ರೂ., ಜಿಲ್ಲಾಧಿಕಾರಿಗಳ ಕಚೇರಿಗಳಿಗೆ 152 ಕೋಟಿ ರೂ., ಕಾರಾಗೃಹ ಇಲಾಖೆಗೆ 2 ಕೋಟಿ ರೂ. ಹಾಗೂ ಬಿಬಿಎಂಪಿಗೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾದ ಶೆಡ್ ನಿರ್ಮಾಣಕ್ಕಾಗಿ 30 ಲಕ್ಷ ರೂ., ಕ್ವಾರಂಟೈನ್‍ನಲ್ಲಿರುವವರ ಪರೀಕ್ಷೆಗಾಗಿ 50 ಲಕ್ಷ ರೂ. ಹಾಗೂ ಕೋವಿಡ್ ಟೆಸ್ಟ್ ಲ್ಯಾಬ್‍ಗಾಗಿ 2.62 ಕೋಟಿ ರೂ. ಅನುದಾನ ನೀಡಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಟೆಸ್ಟ್ ಲ್ಯಾಬ್ ಪ್ರಾರಂಭವಾಗಲಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 13.50 ಕೋಟಿ ರೂ.ಇದ್ದು, ಅನುದಾನದ ಕೊರತೆ ಇಲ್ಲ ಎಂದು ಅಶೋಕ್ ತಿಳಿಸಿದರು.

ರಾಮನಗರ ಹಾಗೂ ಕನಕಪುರ ತಾಲೂಕಿನಲ್ಲಿ ನಾಡ ಕಚೇರಿಗಳು ಪೂರ್ಣಗೊಂಡಿದ್ದು, ಮಾಗಡಿ ತಾಲೂಕಿನಲ್ಲಿ ಪೂರ್ಣಗೊಳ್ಳುವ ಹಂತದಲ್ಲಿವೆ. ಇದಕ್ಕಾಗಿ 56.52 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

2019-20ನೆ ಸಾಲಿನಲ್ಲಿ 49 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸಲಾಗಿದ್ದು, ಇನ್ನೂ 1 ತಿಂಗಳು ವಿಸ್ತರಿಸಿ, 112 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರಕ್ಕಾಗಿ 6,108 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬೆಳಹಾನಿಗಾಗಿ 6,45,100 ರೈತರಿಗೆ ಒಟ್ಟು 1,185.41 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ ಅಶೋಕ್ ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯ ಕಂದಾಯ ಇಲಾಖೆಯಿಂದ ಮಾಗಡಿ ತಾಲೂಕಿನ ಡಾ. ಅಂಬೇಡ್ಕರ್ ವಸತಿ ನಿಲಯ, ಕಸ ವಿಲೇವಾರಿ ಘಟಕ, ಕೃಷಿ ಸಹಕಾರ ಪರಿಷತ್ತಿಗೆ ಸೇರಿದಂತೆ ಒಟ್ಟು 21 ಎಕರೆ ಭೂಮಿ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

ಇದಕ್ಕೂ ಮುನ್ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಭೆ, ಸಮಾರಂಭ ಆಯೋಜನೆ ಹೆಚ್ಚಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಿ ಸರ್ಕಾರ ನೀಡಿರುವ ನಿರ್ದೇಶನದಂತೆ ಕ್ರಮ ವಹಿಸಿ ಎಂದರು.

ಸಾಮಾಜಿಕ ಪಿಂಚಣಿಗಳ ಖಾತೆಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯಲ್ಲಿ ಆಧಾರ್ ಲಿಂಕ್ ಮಾಡದೆ ಇರುವ ಪಿಂಚಣಿದಾರರನ್ನು ಪತ್ತೆ ಹೆಚ್ಚಿ ಪರಿಶೀಲಿಸಿ ಅವುಗಳನ್ನು ರದ್ದುಗೊಳಿಸಿ. ಇದರಿಂದ ಹೆಚ್ಚಿನ ಹಣ ಪೋಲಾಗುವುದು ತಪ್ಪುತ್ತದೆ. ತಹಶೀಲ್ದಾರ್ ಗಳು ಈ ಬಗ್ಗೆ ಕ್ರಮವಹಿಸಬೇಕು. ಪಿಂಚಣಿದಾರರು ಮರಣ ಪ್ರಮಾಣ ಪತ್ರ ಪಡೆಯುವ ಹಂತದಲ್ಲೆ ಸಾಮಾಜಿಕ ಪಿಂಚಣಿ ನಿಲ್ಲುವಂತೆ ಕ್ರಮ ವಹಿಸಲು ಯೋಜನೆ ರೂಪಸಿ ಎಂದು ಅವರು ಸೂಚಿಸಿದರು.

ಪ್ರತಿ ಹಳ್ಳಿಗೂ ಒಂದೊಂದು ಸ್ಮಶಾನ ಇರಬೇಕು. ತಹಶೀಲ್ದಾರರು ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರವಾಗಿ ಕ್ರಮಕೈಗೊಳ್ಳಬೇಕು. ಸರಕಾರಿ ಜಮೀನನ್ನು ಅವಶ್ಯಕವಿರುವ ಇಲಾಖೆಗಳಿಗೆ ಮಂಜೂರು ಮಾಡಿ ಎಂದು ಅಶೋಕ್ ಹೇಳಿದರು.

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ 107 ಮನೆಗಳು ಹಾನಿಯಾಗಿದ್ದು, 57 ಮನೆಗಳಿಗೆ ಪರಿಹಾರ ನೀಡಲಾಗಿದೆ. 50 ಮನೆಗಳಿಗಗೆ ಪರಿಹಾರ ಪಾವತಿಯಾಗಬೇಕಿದೆ ಎಂದರು.

ಕನಕಪುರ ತಾಲೂಕಿನಲ್ಲಿ ಒಂದು ಗ್ರಾಮಕ್ಕೆ ಮಾತ್ರ ಮೂರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 14 ಖಾಸಗಿ ಬೋರ್‍ವೆಲ್‍ದಾರರಿಂದ ನೀರು ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ 2,14,710 ಸಾಮಾಜಿಕ ಪಿಂಚಣಿದಾರರಿದ್ದು, 1,96,966 ಪಿಂಚಣಿದಾರರಿಗೆ ಹಣ ಪಾವತಿಸಲಾಗಿದೆ. 1,804 ರದ್ದು ಪಡಿಸಲಾಗಿದ್ದು, 11,135 ಪಿಂಚಣಿದಾರರ ವಿವರ ಭೌತಿಕ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಮ್, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News