ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

Update: 2020-06-04 15:34 GMT

ಬೆಂಗಳೂರು, ಜೂ.4: ಲಾಕ್‍ಡೌನ್ ಸಡಿಲಿಕೆ(ತೆರವು-1)ಯು ಜೂ.3ರಿಂದ ಅನ್ವಯವಾಗುವಂತೆ ಈ ಅವಧಿಯಲ್ಲಿ ಕರ್ನಾಟಕಕ್ಕೆ ಬರುವ ಮುನ್ನ ಅಂತರ್ ರಾಜ್ಯ ಪ್ರಯಾಣಿಕರು ಪಾಲಿಸಬೇಕಾದ ಶಿಷ್ಠಾಚಾರದ ಪ್ರಮುಖ ಅಂಶಗಳನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಪ್ರಕಟಿಸಿದ್ದಾರೆ.

ರಾಜ್ಯಕ್ಕೆ ಪ್ರವೇಶಿಸುವ ಮುನ್ನ ಎಲ್ಲ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೆ ನೀಡಬೇಕು. ಅಂಗೀಕಾರದ ಅಗತ್ಯವಿರುವುದಿಲ್ಲ. ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಒಂದೇ ಮೊಬೈಲ್ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ನೋಂದಣಿಗೆ ಬಳಸಲು ಅವಕಾಶವಿಲ್ಲ.

ವಾಣಿಜ್ಯ ವಹಿವಾಟುಗಳ ಉದ್ದೇಶಕ್ಕಾಗಿ ಪ್ರಯಾಣ ಮಾಡುವವರು ವಿವರಗಳನ್ನು(ಕರ್ನಾಟಕದಲ್ಲಿ ಭೇಟಿ ಮಾಡುವ ವ್ಯಕ್ತಿಯ ಹೆಸರು, ಮೊಬೈಲ್ ದೂರವಾಣಿ ಸಂಖ್ಯೆ ಮತ್ತು ವಿಳಾಸ ತಪ್ಪದೆ ನೀಡುವುದು) ಹಾಗೂ ಹಿಂದಿರುಗುವ ದಿನಾಂಕವನ್ನು ನೀಡಬೇಕು.

ರಾಜ್ಯದ ಮೂಲಕ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರು, ಪ್ರಯಾಣ ಮಾಡುವ ರಾಜ್ಯದ ವಿಳಾಸ ನೀಡಬೇಕು ಮತ್ತು ಕರ್ನಾಟಕದಿಂದ ನಿರ್ಗಮಿಸುವ ಚೆಕ್‍ಪೋಸ್ಟ್ ನ ವಿವರಗಳನ್ನು ತಪ್ಪದೆ ನಮೂದಿಸಬೇಕು.

ಗಡಿಭಾಗದ ಚೆಕ್‍ಪೋಸ್ಟ್ ಗಳು, ವಿಮಾನ ನಿಲ್ದಾಣಗಳು,ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ರಾಜ್ಯವನ್ನು ಪ್ರವೇಶಿಸುವ ಎಲ್ಲ ವ್ಯಕ್ತಿಗಳ ಆರೋಗ್ಯ ತಪಾಸಣೆಯನ್ನು ಆಗಮನದ ಕೇಂದ್ರಗಳಲ್ಲಿ ಮಾಡಬೇಕು. ಕ್ವಾರಂಟೈನ್ ಮಾನದಂಡಗಳಿಗನುಸಾರವಾಗಿ 14 ದಿನಗಳ ಹೋಂ ಕ್ವಾರಂಟೈನ್ ಕುರಿತು ಕೈಗೆ ಕ್ವಾರಂಟೈನ್ ಮುದ್ರೆಯನ್ನು ಮುಂಗೈಗೆ ಹಾಕಬೇಕು.

ಕ್ವಾರಂಟೈನ್ ನಿಯಮಾವಳಿಗಳು: ಯಾವುದೇ ರಾಜ್ಯದ ಪ್ರಯಾಣಿಕರಿಗೆ ಆಗಮನದ ಸಂದರ್ಭದಲ್ಲಿ ರೋಗ ಲಕ್ಷಣಗಳಿದ್ದರೆ ಕೋವಿಡ್ ನಿಗಾ ಕೇಂದ್ರ(ಸಿಸಿಸಿ), ನಿಗದಿತ ಕೋವಿಡ್ ಆರೋಗ್ಯ ಕೇಂದ್ರ(ಡಿಸಿಎಚ್‍ಸಿ)ದಲ್ಲಿ 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಬೇಕು. ತದನಂತರ 7 ದಿನಗಳ ಕಾಲ ಹೋಂ ಕ್ವಾರಂಟೈನ್(ಅಥವಾ ರೋಗ ಲಕ್ಷಣಗಳಿಗನುಸಾರವಾಗಿ ನಿರ್ವಹಣೆ)ನಲ್ಲಿರಬೇಕು.

ಅನ್ಯರಾಜ್ಯದಿಂದ ಆಗಮಿಸಿದ ಕೂಡಲೇ ತಪಾಸಣೆಗೊಳಪಡಿಸಬೇಕು. ಕೋವಿಡ್ ವರದಿ ಪಾಸಿಟಿವ್ ಬಂದರೆ ನಿಗದಿತ ಕೋವಿಡ್ ಆಸ್ಪತ್ರೆ(ಡಿಸಿಎಚ್)ಗೆ ದಾಖಲಿಸಬೇಕು. ನೆಗೆಟಿವ್ ಬಂದರೆ ಮುಂದಿನ ತಪಾಸಣೆಯ ಅಗತ್ಯವಿರುವುದಿಲ್ಲ.

ಮಹಾರಾಷ್ಟ್ರದಿಂದ ಆಗಮಿಸುವವರಿಗೆ: 7 ದಿನಗಳ ಸಾಂಸ್ಥಿಕ ಕ್ವಾರಂಟೈನ್, ತದನಂತರ 14 ದಿನಗಳ ಹೋಂ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ತಪಾಸಣೆ ಮಾಡಬೇಕು.

ರೋಗ ಲಕ್ಷಣಗಳಿಲ್ಲದ ವಿಶೇಷ ಪ್ರವರ್ಗದ ವ್ಯಕ್ತಿಗಳಿಗೆ ವಿನಾಯಿತಿಗಳು. 21 ದಿನಗಳ ಹೋಂ ಕ್ವಾರಂಟೈನ್(ಒಬ್ಬ ಸಹಾಯಕರಿಗೆ ಅನುಮತಿಯಿದೆ) ಪ್ರಕರಣದ ಆಧಾರದ ಮೇಲೆ ಜೊತೆಯಲ್ಲಿರಲು ಅವಕಾಶವಿದೆ.

ವಿಶೇಷ ವರ್ಗದ ಪ್ರಯಾಣಿಕರು: ಕುಟುಂಬದ ಸದಸ್ಯರು ಮೃತರಾಗಿದ್ದರೆ, ಗರ್ಭಿಣಿ ಮಹಿಳೆಯರು, ಹತ್ತು ವರ್ಷಕ್ಕಿಂತ ಕೆಳಗಿರುವ ಮಕ್ಕಳು, 60 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರು, ತೀವ್ರತರ ಅನಾರೋಗ್ಯದಿಂದ ಬಳಲುತ್ತಿರುವವರು, ಮಾನವ ಯಾತನೆಗೊಳಗಾದವರು.

ಮಹಾರಾಷ್ಟ್ರದಿಂದ ಬರುವ ವ್ಯವಹಾರಸ್ಥ ಪ್ರಯಾಣಿಕರು: ತಾವು ವ್ಯವಹಾರಸ್ಥರು ಎಂದು ನಿರೂಪಿಸಲು, ವ್ಯಕ್ತಿಯು ವಾಪಾಸಾಗುವ ಖಾತ್ರಿಪಟ್ಟಿರುವ ವಿಮಾನ, ರೈಲು ಟಿಕೆಟ್ ಅನ್ನು ತೋರಿಸಬೇಕು. ಅದು ಆಗಮನದ ದಿನಾಂಕದಿಂದ 7 ದಿನಗಳ ಒಳಗಿರಬೇಕು. ಒಂದು ವೇಳೆ ರಸ್ತೆ ಮೂಲಕ ಬರುತ್ತಿದ್ದರೆ, ಅವನು/ಅವಳು ಕರ್ನಾಟಕದಲ್ಲಿ ತಾವು ಭೇಟಿಯಾಗುವ ವ್ಯಕ್ತಿಯ ಗುರುತಿನ ಚೀಟಿಯನ್ನು ಒದಗಿಸಬೇಕು. ಅದರೊಂದಿಗೆ ಈ ಕೆಳಗಿನ ದಾಖಲೆಗಳನ್ನು ಹಾಜರುಪಡಿಸಬೇಕು.

ಎರಡು ದಿನಗಳಿಗಿಂತ ಹಳೆಯದಲ್ಲದ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರವನ್ನು ಯಾರು ಹೊಂದಿರುತ್ತಾರೋ ಅವರಿಗೆ ಕ್ವಾರಂಟೈನ್‍ನಿಂದ ವಿನಾಯಿತಿ ಇರುತ್ತದೆ. ಯಾರು ಕೋವಿಡ್ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರವನ್ನು ಹೊಂದಿಲ್ಲವೊ ಅಂತಹ ವ್ಯಕ್ತಿಯು ಎರಡು ದಿನಗಳ ಸಾಂಸ್ಥಿಕ ಕ್ವಾರಂಟೈನ್‍ಗೆ ಹೋಗಬೇಕು.

ಅದರಲ್ಲಿಯೂ ಕೋವಿಡ್ ಪರೀಕ್ಷೆಯನ್ನು ಅವರ ಸ್ವಂತ ವೆಚ್ಚದಲ್ಲಿ ಕೈಗೊಳ್ಳಬೇಕು. ಪರೀಕ್ಷಾ ಫಲಿತಾಂಶವು ನೆಗೆಟಿವ್ ಎಂದು ಕಂಡು ಬಂದ ನಂತರ, ವ್ಯಕ್ತಿಯನ್ನು ಕ್ವಾರಂಟೈನ್‍ನಿಂದ ಮುಕ್ತಗೊಳಿಸಲಾಗುತ್ತದೆ. ವ್ಯವಹಾರಸ್ಥ ಪ್ರಯಾಣಿಕರಿಗೆ ಅಂಗೈ ಮೇಲೆ ಮುದ್ರೆ ಒತ್ತುವ ಅವಶ್ಯಕತೆ ಇರುವುದಿಲ್ಲ.

ಮಹಾರಾಷ್ಟ್ರದಿಂದ ರಾಜ್ಯದ ಮೂಲಕ ಹಾದುಹೋಗುವ ಪ್ರಯಾಣಿಕರು: ರಾಜ್ಯದ ಮೂಲಕ ಹಾದುಹೋಗುವ ಪ್ರಯಾಣಿಕರೆಂದು ನಿರೂಪಿಸಲು, ವ್ಯಕ್ತಿಯು ಆಗಮನದ ದಿನಾಂಕದಿಂದ ಮುಂದಿನ 1 ದಿನಕ್ಕಿಂತ ಕಡಿಮೆ ಇರುವ ಖಾತ್ರಿಪಟ್ಟಿರುವ ವಿಮಾನ, ರೈಲು ಟಿಕೆಟ್ ಅನ್ನು ತೋರಿಸಬೇಕು.

ಒಂದು ವೇಳೆ ವ್ಯಕ್ತಿಯು ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದರೆ ಅವರು ಗುರುತಿನ ದಾಖಲೆ ಮತ್ತು ಪ್ರಯಾಣಿಸುತ್ತಿರುವ ರಾಜ್ಯದ ವಿಳಾಸ ದಾಖಲೆ ಒದಗಿಸಬೇಕು. ಪ್ರಯಾಣಿಕನು ತನ್ನ ನಿರ್ಗಮನವನ್ನು ಆಯ್ದ ನಿರ್ಗಮನದ ಚೆಕ್‍ಪೋಸ್ಟ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ದಾಖಲಿಸಬೇಕು. ರಸ್ತೆಯ ಮೂಲಕ ಪ್ರಯಾಣಿಸುವ ಅಂತಹ ಪ್ರಯಾಣಿಕರ ಅಂಗೈ ಮೇಲೆ ಮುದ್ರೆಯನ್ನು ಒತ್ತಬೇಕು.

ಇತರೆ ರಾಜ್ಯಗಳಿಂದ ಆಗಮಿಸುವವರಿಗೆ: 14 ದಿನಗಳ ಹೋಂ ಕ್ವಾರಂಟೈನ್, ಹೋಂ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆಗೊಳಪಡಿಸಬೇಕು. ಹೋಂ ಕ್ವಾರಂಟೈನ್ ಸಾಧ್ಯವಾಗದ ವ್ಯಕ್ತಿಗಳಿಗೆ, ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಬೇಕು. ಪ್ರಮುಖವಾಗಿ ದೊಡ್ಡ ಕುಟುಂಬ ಅಥವಾ ಹೋಂ ಕ್ವಾರಂಟೈನ್‍ಗೆ ಪ್ರತ್ಯೇಕ ಕೊಠಡಿಯಿಲ್ಲದ ಸಂದರ್ಭದಲ್ಲಿ, ಕೊಳಗೇರಿ ಪ್ರದೇಶಗಳು ಅಥವಾ ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಹೋಂ ಕ್ವಾರಂಟೈನ್ ಅನ್ನು ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಬೇಕು.

ಇತರೆ ರಾಜ್ಯಗಳಿಂದ ಬರುವ ವ್ಯವಹಾರಸ್ಥ ಪ್ರಯಾಣಿಕರು: ತಾವು ವ್ಯವಹಾರಸ್ಥರು ಎಂದು ನಿರೂಪಿಸಲು, ವ್ಯಕ್ತಿಯು ವಾಪಾಸಾಗುವ ಖಾತ್ರಿಪಟ್ಟಿರುವ ವಿಮಾನ, ರೈಲು ಟಿಕೆಟ್ ಅನ್ನು ತೋರಿಸಬೇಕು. ಅದು ಆಗಮನದ ದಿನಾಂಕದಿಂದ 7 ದಿನಗಳ ಒಳಗಿರಬೇಕು. ಒಂದು ವೇಳೆ ರಸ್ತೆ ಮೂಲಕ ಬರುತ್ತಿದ್ದರೆ, ಅವನು/ಅವಳು ಕರ್ನಾಟಕದಲ್ಲಿ ತಾವು ಭೇಟಿಯಾಗುವ ವ್ಯಕ್ತಿಯ ವಿಳಾಸದ ದಾಖಲೆಯನ್ನು ಒದಗಿಸಬೇಕು. ಕ್ವಾರಂಟೈನ್ ಇರುವುದಿಲ್ಲ ಮತ್ತು ಇತರೆ ರಾಜ್ಯಗಳಿಂದ ಬರುವ ವ್ಯವಹಾರಸ್ಥರಿಗೆ ಅಂಗೈಗೆ ಮುದ್ರೆಯ ಅಗತ್ಯವಿರುವುದಿಲ್ಲ.

ಇತರೆ ರಾಜ್ಯಗಳಿಂದ ಹಾದುಹೋಗುವ ಪ್ರಯಾಣಿಕರು: ರಾಜ್ಯದ ಮುಖೇನ ಹಾದುಹೋಗುವ ಪ್ರಯಾಣಿಕರೆಂದು ನಿರೂಪಿಸಲು, ವ್ಯಕ್ತಿಯು ಕಡ್ಡಾಯವಾಗಿ ಆಗಮಿಸಿದ ಅವಧಿಯಿಂದ 1 ದಿನಕ್ಕಿಂತ ಹೆಚ್ಚಿನ ಅವಧಿಯಲ್ಲದ ಮುಂದಿನ ಪ್ರಮಾಣದ ವಿಮಾನ, ರೈಲು ಟಿಕೆಟ್‍ಗಳನ್ನು ಹಾಜರುಪಡಿಸಬೇಕು. ಒಂದು ವೇಳೆ ವ್ಯಕ್ತಿಯು ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದರೆ ಅವರು ಪ್ರಯಾಣಿಸುತ್ತಿರುವ ರಾಜ್ಯದ ವಿಳಾಸ ಮತ್ತು ಗುರುತಿನ ದಾಖಲೆಗಳನ್ನು ಒದಗಿಸಬೇಕು. ರಸ್ತೆಯ ಮೂಲಕ ಪ್ರಯಾಣಿಸುವ ಅಂತಹ ಪ್ರಯಾಣಿಕರ ಅಂಗೈ ಮೇಲೆ ಮುದ್ರೆಯನ್ನು ಒತ್ತಬೇಕು.

ಹೋಂ ಕ್ವಾರಂಟೈನ್ ಕಟ್ಟುನಿಟ್ಟಿನ ಕ್ರಮಗಳು ಜಾರಿ: ವ್ಯಾಪಾರದ ಸಲುವಾಗಿ ಆಗಮಿಸುವ ಮತ್ತು ರಾಜ್ಯದ ಮೂಲಕ ಹಾದುಹೋಗುವ ಪ್ರಯಾಣಿಕರನ್ನು ಹೊರತುಪಡಿಸಿ, ರಾಜ್ಯದ ಒಳಬರುವ ಎಲ್ಲ ವ್ಯಕ್ತಿಗಳು ಹೋಂ ಕ್ವಾರಂಟೈನ್ ಅನ್ನು ಅನುಸರಿಸಬೇಕು.

ಬಿಬಿಎಂಪಿ ಮತ್ತು ಇತರ ನಗರ ಪ್ರದೇಶಗಳು, ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ಬಾಗಿಲಿಗೆ ಹೋಂ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸಬೇಕು, ಇಬ್ಬರು ನೆರೆಹೊರೆಯವರಿಗೆ ಮಾಹಿತಿ ನೀಡಬೇಕು, ಹೋಂ ಕ್ವಾರಂಟೈನ್ ಕಾರ್ಯತಂತ್ರದ ನಿರ್ವಹಣೆಯ ಒಟ್ಟಾರೆ ಜವಾಬ್ದಾರಿಯನ್ನು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ನಿರ್ವಹಿಸಬೇಕು, ಮೇಲ್ವಿಚಾರಣೆ ಮಾಡಲು ಪ್ರತಿಯೊಂದು ಹಳ್ಳಿಯಲ್ಲಿ 3 ಸದಸ್ಯರ ತಂಡವನ್ನು ರಚಿಸಬೇಕು.

ಅದೇ ರೀತಿ ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದ ತಂಡ ನಿರ್ವಹಿಸಬೇಕು. ಮೇಲ್ವಿಚಾರಣೆ ಮಾಡಲು ನಿವಾಸಿಗಳ ಕಲ್ಯಾಣ ಸಂಘಗಳ, ಅಪಾರ್ಟ್‍ಮೆಂಟ್ ಮಾಲಕರ ಸಂಘಗಳ ಪಾಲ್ಗೊಳ್ಳುವಿಕೆಯೊಂದಿಗೆ ಬೂತ್‍ಮಟ್ಟದಲ್ಲಿ ಮೂರು ಸದಸ್ಯರ ತಂಡವನ್ನು ರಚಿಸಬೇಕು.

ಹೋಂ ಕ್ವಾರಂಟೈನ್ ಉಲ್ಲಘಿಸುವವರ ವಿರುದ್ಧ ಎಫ್‍ಐಆರ್ ದಾಖಲು ಮಾಡಿ, ಅಂತಹವರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ವರ್ಗಾಯಿಸಬೇಕು. ಐವಿಆರ್‍ಎಸ್ ಕಾಲ್ ಸೆಂಟರ್ ಮುಖಾಂತರ ಕರೆ ಮಾಡಿ ನಿಗಾವಹಿಸಬೇಕು.

ಕ್ವಾರಂಟೈನ್ ವಾಚ್ ಅಪ್ಲಿಕೇಶನ್ ಮೂಲಕ ವ್ಯಕ್ತಿಗಳ ತಾಪಮಾನ, ವಯಸ್ಸಾದವರಿಗೆ ಮತ್ತು ಸಹ ಅಸ್ವಸ್ಥತೆವುಳ್ಳವರಿಗೆ ಬೆರಳು-ತುದಿಯ ನಾಡಿ ಆಕ್ಸಿಮೆಟ್ರಿ ಮೂಲಕ ಸ್ವಯಂ ಮೇಲ್ವಿಚಾರಣಾ ಮಾಹಿತಿಯನ್ನು ಪ್ರತಿದಿನ ತಂತ್ರಾಂಶಕ್ಕೆ ಅಪ್‍ಲೋಡ್ ಮಾಡಬೇಕು.

ಯಾರು ಹೋಂ ಕ್ವಾರಂಟೈನ್ ಅನುಸರಣೆಯಲ್ಲಿರುವರೋ ಅಥವಾ ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದರೆ 24/7 ಉಚಿತ ಸಹಾಯವಾಣಿ ಆಪ್ತಮಿತ್ರಗೆ ಕರೆ ಮಾಡಿ ಟೆಲಿಮಿಡಿಸನ್ ಸಹಾಯ ಪಡೆದುಕೊಳ್ಳಬೇಕು. ಅಂತಹವರನ್ನು ಜ್ವರ ಕೇಂದ್ರಗಳಿಗೆ ಮುಂದಿನ ಚಿಕಿತ್ಸೆ ಮತ್ತು ಕೋವಿಡ್-19 ಪರೀಕ್ಷೆಗೆ ಕಳುಹಿಸಬೇಕು.

ಸಾರ್ವಜನಿಕರ ಮತ್ತು ವಾಣಿಜ್ಯ ಸಂಸ್ಥೆಗಳ ಪಾತ್ರ: ಎಲ್ಲ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಕಾರ್ಖಾನೆಗಳು, ಮಾಲ್‍ಗಳು, ಧಾರ್ಮಿಕ ಸ್ಥಳಗಳು, ಹೊಟೇಲ್‍ಗಳು ಇತ್ಯಾದಿಗಳು ತಮ್ಮ ಎಲ್ಲ ಗ್ರಾಹಕರು ಅಥವಾ ಸಂದರ್ಶಕರು ಆವರಣಕ್ಕೆ ಪ್ರವೇಶಿಸುವ ಮೊದಲು ಕ್ವಾರಂಟೈನ್ ಮುದ್ರೆ(ಅವರ ಕೈಯ ಹಿಂಭಾಗದಲ್ಲಿ) ಯನ್ನು ಪರಿಶೀಲಿಸಬೇಕು.

ಈ ಸಂಸ್ಥೆಯವರು ಕ್ವಾರಂಟೈನ್ ಮುದ್ರೆಯನ್ನು ಹೊಂದಿರುವವರನ್ನು ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗುವವರೆಗೂ ಅಥವಾ ಅವರ ಕೋವಿಡ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಸ್ವೀಕೃತವಾಗುವವರೆಗೂ ಪ್ರವೇಶಿಸಲು ಅವಕಾಶ ನೀಡಬಾರದು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರಿಗೆ ದೂರವಾಣಿ ಸಂಖ್ಯೆ 100ರಲ್ಲಿ ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಬೇಕು.

ಸಾರ್ವಜನಿಕರು ಮತ್ತು ನಿವಾಸಿ ಕಲ್ಯಾಣ ಸಂಘಗಳು ತಮ್ಮ ನೆರೆಹೊರೆಯಲ್ಲಿರುವ ಯಾವುದೆ ವ್ಯಕ್ತಿಗಳು ಕ್ವಾರಂಟೈನ್ ಅನ್ನು ಉಲ್ಲಂಘಿಸಿದಲ್ಲಿ ಪೊಲೀಸರಿಗೆ ದೂರವಾಣಿ ಸಂಖ್ಯೆ 100ರಲ್ಲಿ ಮಾಹಿತಿ ನೀಡುವಂತೆ ವಿಜಯಭಾಸ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News