ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೊರೊಕ್ವಿನ್ ನ ಪ್ರಾಯೋಗಿಕ ಪರೀಕ್ಷೆ ಪುನಾರಂಭ

Update: 2020-06-04 16:06 GMT

ಹೊಸದಿಲ್ಲಿ,ಜೂ.4: ಹೈಡ್ರೊಕ್ಸಿಕ್ಲೊರೊಕ್ವಿನ್ ಔಷಧಿಯನ್ನು ಕೋವಿಡ್-19 ರೋಗದ ಚಿಕಿತ್ಸೆಗೆ ಸಂಭಾವ್ಯ ಔಷಧಿಯಾಗಿ ಬಳಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಪುನಾರಂಭಿಸುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ಧಾರವು ಸರಿಯಾದ ದಿಕ್ಕಿನಲ್ಲಿ ಇಟ್ಟಂತಹ ಹೆಜ್ಜೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ಪ್ರಯೋಗದಿಂದ ಸಕಾರಾತ್ಮಕ ಫಲಿತಾಂಶ ಲಭ್ಯವಾದಲ್ಲಿ ಜಾಗತಿಕವಾಗಿ ಜನತೆಯ ಹಿತಾಸಕ್ತಿಯನ್ನು ಕಾಪಾಡಲಿದೆ ಎಂದರು.

  ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟು ಹೈಡ್ರೊಕ್ಲೋರೊಕ್ವಿನ್ ಔಷಧಿಯನ್ನು ಕೋವಿಡ್-19 ಚಿಕಿತ್ಸೆಗೆ ಬಳಸುವ ಬಗ್ಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದಕ್ಕೆ ತಡೆಹಿಡಿದಿತ್ತು.

ಹೈಡ್ರೊಕ್ಲೊರೊಕ್ವಿನ್ ಔಷಧಿಯನ್ನು ಮಲೇರಿಯಾ ರೋಗದ ಚಿಕಿತ್ಸೆಗೆ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಕೊರೋನ ವೈರಸ್ ಸೋಂಕಿನ ವಿರುದ್ಧವೂ ಈ ಔಷಧಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಅಮೆರಿಕ ವಿಜ್ಞಾನಿಗಳು ಪತ್ತೆಹಚ್ಚಿದ್ದರು. ಅಷ್ಟೆ ಅಲ್ಲದೆ, ಭಾರತದಿಂದ ಬೃಹತ್ ಪ್ರಮಾಣದಲ್ಲಿ ಹೈಡ್ರೊಕ್ಲೊರೊಕ್ವಿನ್ ಔಷಧಿಯನ್ನು ಅಮೆರಿಕ ಆಮದು ಮಾಡಿಕೊಂಡಿತ್ತು.

  ಕೋವಿಡ್-19 ರೋಗ ಚಿಕಿತ್ಸೆಗೆ ಹೈಡ್ರೊಕ್ಸಿಕ್ಲೊರೊಕ್ವಿನ್ ಔಷಧಿಯ ಪ್ರಾಯೋಗಿಕ ಪರೀಕ್ಷೆ ನಡೆಸುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ಧಾರವನ್ನು ಐಸಿಎಂಆರ್ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಸ್ವಾಗತಿಸಿದ್ದಾರೆ.

 ‘‘ಹೈಡ್ರೊಕ್ಸಿಕ್ಲೊರೊಕ್ವಿನ್ ಹಲವು ದಶಕಗಳಿಂದ ಬಳಕೆಯಲ್ಲಿರುವ ಕಾಲದ ಪರೀಕ್ಷೆಯಲ್ಲಿ ಗೆದ್ದಿರುವ ಔಷಧಿಯಾಗಿದೆ.ಕೋವಿಡ್-19 ಚಿಕಿತ್ಸೆಗೆ ಈ ಔಷಧಿಯನ್ನು ಬಳಸುವ ಬಗ್ಗೆ ಸಕಾರಾತ್ಮಕ ಫಲಿತಾಂಶವು ಲಭ್ಯವಾದಲ್ಲಿ, ಅದರಿಂದ ಜಾಗತಿಕ ಮಟ್ಟದಲ್ಲಿ ಮಾನವಕುಲಕ್ಕೆ ಒಳಿತಾಗಲಿದೆ’’ ಎಂದು ಭಾರ್ಗವ ಹೇಳಿದ್ದಾರೆ.

 ಕೋವಿಡ್-19 ಚಿಕಿತ್ಸೆಯಲ್ಲಿ ಹೈಡ್ರೊಕ್ಲೊರೋಕ್ವಿನ್ ಔಷಧಿಯ ಸುರಕ್ಷಿತವೆಂದು ಬಗ್ಗೆ ಏಮ್ಸ್ ಹಾಗೂ ಐಸಿಎಂಆರ್‌ನಿಂದ ಲಭ್ಯವಾಗಿರುವ ದತ್ತಾಂಶಗಳಿಂದ ಲಭ್ಯವಾಗಿವೆ. ಈ ಔಷಧಿಯ ಉಪಯೋಗದಿಂದ ಗಣನೀಯವಾಗಿ ಹೃದಯಕ್ಕೆ ಹಾನಿ ಮಾಡುವ ಬಗ್ಗೆ ಯಾವುದೇ ಮಾಹಿತಿ ತಮಗೆ ದೊರೆತಿಲ್ಲವೆಂದು ಅವರು ಹೇಳಿದ್ದಾರೆ.

  ಹೈಡ್ರೊಕ್ಲೊರೊಕ್ವಿನ್ ಅಲ್ಲದೆ ಕೋವಿಡ್-19 ಚಿಕಿತ್ಸೆಗೆ ರೆಮಿಡೆಸೆವಿರ್, ಲೊಪಿನಾವಿರ್ ಹಾಗೂ ರಿಟೊನಾವಿರ್ ಔಷಧಿಗಳ ಸಂಯೋಜನೆಯನ್ನು ಮತ್ತು ಇಂಟರ್‌ಫೆರಾನ್ ಬೆಟಾ-1ಎ ಔಷಧಿಯನ್ನು ಲೊಪಿನಾವರ್ ಹಾಗೂ ರಿಟೊನಾವರ್ ಸಂಯೋಜನೆ ಎಂಬ ಮೂರು ವಿಧದ ಔಷಧಿ ಪ್ರಯೋಗಗಳನ್ನು ಕೂಡಾ ವಿಶ್ವ ಆರೋಗ್ಯಸಂಸ್ಥೆ ಜಾಗತಿಕ ಮಟ್ಟದಲ್ಲಿ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News