ಏರ್ ಟೆಲ್ ಪೇಮೆಂಟ್ ಬ್ಯಾಂಕ್‍ಗೆ ರೈತರ ಹಣ ವರ್ಗಾವಣೆ: ಸಚಿವ ಬಿ.ಸಿ.ಪಾಟೀಲ್

Update: 2020-06-04 18:39 GMT

ಬೆಂಗಳೂರು, ಜೂ.4: ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದೆ, ಏರ್ ಟೆಲ್ ಪೇಮೆಂಟ್ ಬ್ಯಾಂಕ್‍ಗೆ ಜೋಡಣೆ ಮಾಡಿರುವುದರಿಂದ, ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಪರಿಹಾರ ಹಣವು ಏರ್ ಟೆಲ್ ಪೇಮೆಂಟ್ ಬ್ಯಾಂಕ್‍ಗೆ ಜಮೆಯಾಗಿರುವ ಘಟನೆಗಳು ವರದಿಯಾಗಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಸೇರಿದಂತೆ ಕೆಲವು ಕಡೆ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಜೊತೆ ಲಿಂಕ್ ಮಾಡಿದ್ದಾರೆ. ಹೀಗಾಗಿ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಹೋಗಿದೆ ಎಂದರು.

ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಯಾವುದೆ ಶಾಖೆಗಳನ್ನು ಹೊಂದಿಲ್ಲ. ಹೀಗಾಗಿ ರೈತರು ಏರ್ ಟೆಲ್ ಔಟ್‍ಲೆಟ್‍ಗಳಿಗೆ ಹೋಗಿ ಅಲ್ಲಿಂದ ಹಣ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಜಿಲ್ಲೆಗಳಲ್ಲಿಯೂ ಇಂತಹದ್ದೆ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಏರ್ ಟೆಲ್ ಕಂಪೆನಿಯ ಗಮನಕ್ಕೂ ತಂದು ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದೆಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಬಿ.ಸಿ.ಪಾಟೀಲ್ ಹೇಳಿದರು.

ಆಧಾರ್ ಸಂಖ್ಯೆಗೆ ಇದೂವರೆಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡದ ರೈತರು ಆದಷ್ಟು ಬೇಗ ತಪ್ಪದೆ ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ ಮಾಡಿಕೊಳ್ಳಬೇಕು. ಸರಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ ಮಾರ್ಗಸೂಚಿಯಂತೆ ವಿದ್ಯುನ್ಮಾನವಾಗಿ ನೇರವಾಗಿ ರೈತರ ಖಾತೆಗೆ ಆಧಾರ್ ಆಧಾರಿತ ವ್ಯವಸ್ಥೆಯ ಮೂಲಕ ಹಣ ವರ್ಗಾಯಿಸುತ್ತಿದೆ ಎಂದು ಅವರು ಹೇಳಿದರು.

ಬಹುತೇಕ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲ. ರೈತರು ತಮ್ಮತಮ್ಮ ಆಧಾರ್ ಸಂಖ್ಯೆಯನ್ನು ತಾವು ಉಪಯೋಗಿಸುತ್ತಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಮೆಕ್ಕೆಜೋಳ ಹಾಗೂ ಹೂವು ಬೆಳೆದ 10 ಲಕ್ಷ ರೈತರಿಗೆ ತಲಾ ಐದು ಸಾವಿರ ರೂ.ಗಳಂತೆ ಪರಿಹಾರ ಧನದ ಮೊದಲ ಕಂತು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಆನ್‍ಲೈನ್ ಮೂಲಕ ಪರಿಹಾರ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ನಕಲಿ ಬೀಜ ಮಾರಾಟ ಜಾಲ ಪತ್ತೆ: ವಿಚಕ್ಷಣಾ ದಳದಿಂದ ನಕಲಿ ಬೀಜ ಮಾರಾಟ ಪತ್ತೆ ಮುಂದುವರಿದಿದೆ. ಮೆಕ್ಕೆಜೋಳದಂತೆ ನಕಲಿ ಹತ್ತಿ ಬೀಜ ಮಾರಾಟ ಜಾಲವೂ ಪತ್ತೆಯಾಗಿದೆ. ರಾಯಚೂರಿನ ತುರುವೆಹಾಳದಲ್ಲಿ ಕಳೆದ ಬುಧವಾರ ತೇಜಸ್ ಎನ್ನುವ ಆಂಧ್ರ ಮೂಲದ ಖಾಸಗಿ ಕಂಪೆನಿಗೆ ಸೇರಿದ ಮೈ ಸೀಡ್ಸ್ ಹೆಸರಿನ ನೂರು ಕೆಜಿ ಕಳಪೆ ಹತ್ತಿಬೀಜ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಹದಿನೈದು ದಿನಗಳ ಹಿಂದೆ ಈ ಖಾಸಗಿ ಕಂಪೆನಿಯಿಂದ ಬೀಜ ಕೊಂಡು ಬಿತ್ತಿದ ರೈತರಿಗೆ ಸಸಿ ಬಂದಿಲ್ಲ. ಇದನ್ನು ಗಮನಿಸಿದ ರಾಯಚೂರು ಎಡಿ ಹಾಗೂ ವಿಚಕ್ಷಣಾದಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅದೇ ರೀತಿ ಮೇ 30 ರಂದು ಯಾದಗಿರಿಯ ಗೋದಾಮಿನಲ್ಲಿ ಹೈದರಾಬಾದ್ ಮೂಲದ ಕಂಪೆನಿಯೊಂದು ಅಕ್ರಮವಾಗಿ ದಾಸ್ತಾನು ಮಾಡಿದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ನಡೆಸಿದ ದಾಳಿಯಲ್ಲಿ ಸುಮಾರು 34,595 ಕ್ವಿಂಟಾಲ್ ಹತ್ತಿಬೀಜ ವಶಪಡಿಸುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಅನಧಿಕೃತ ಸಂಗ್ರಹ ಹಾಗೂ ಪ್ಯಾಕಿಂಗ್ ದಂಧೆ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಹತ್ತಿಬೀಜಗಳನ್ನು ಗುಣಮಟ್ಟ ಪತ್ತೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮಾಜಿ ಸಚಿವರಾದ ಎಚ್.ವಿಶ್ವನಾಥ್, ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜ್ ಕೊಡುಗೆ ಹೆಚ್ಚಿದೆ. ಹೀಗಾಗಿ, ವಿಧಾನಪರಿಷತ್ತಿಗೆ ಅವರನ್ನು ಆಯ್ಕೆ ಮಾಡುವುದು ಉತ್ತಮ. ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ನಾವೆಲ್ಲರೂ ಆರು ತಿಂಗಳು ವನವಾಸ ಅನುಭವಿಸಿ ಬಂದಿದ್ದೇವೆ. ಅವರೆಲ್ಲ ಸಚಿವರಾಗುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಕಷ್ಟ ಕಾಲದಲ್ಲಿ ಜೊತೆಗಿದ್ದವರ ಜೊತೆ ನಾವು ಇರುತ್ತೇವೆ.

-ಬಿ.ಸಿ.ಪಾಟೀಲ್, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News