ಅವಹೇಳನಕಾರಿ ಹೇಳಿಕೆ: ಡಾ.ಆರತಿ ಲಾಲ್ ಚಾಂದಿನಿ ವಿರುದ್ಧ ಕಠಿಣ ಕ್ರಮಕ್ಕೆ ಎಸ್‍ಡಿಪಿಐ ಒತ್ತಾಯ

Update: 2020-06-04 18:51 GMT

ಬೆಂಗಳೂರು, ಜೂ. 4: ವಿಡಿಯೋ ಸಂದರ್ಶನವೊಂದರಲ್ಲಿ ಮುಸ್ಲಿಮರ ವಿರುದ್ಧ ಡಾ.ಆರತಿ ಲಾಲ್ ಚಾಂದಿನಿಯವರು ನೀಡಿರುವ ಅವಹೇಳನಕಾರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಶರ್ಫುದ್ದೀನ್ ಅಹ್ಮದ್, ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಹೇಳಿಕೆ ನೀಡಿರುವ ಡಾ.ಆರತಿ ಲಾಲ್ ಚಾಂದಿನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೈದ್ಯಕೀಯ ವೃತ್ತಿಯಲ್ಲಿ ಎಲ್ಲ ಮೌಲ್ಯಗಳನ್ನು ಉಲ್ಲಂಘಿಸಿ ವಿಷ ಬಿತ್ತುವ ಹೇಳಿಕೆ ನೀಡಿರುವ ಡಾ.ಆರತಿ ಲಾಲ್ ಚಾಂದಿನಿ ಅವರ ವೈದ್ಯಕೀಯ ನೋಂದಣಿಯನ್ನು ಭಾರತೀಯ ವೈದ್ಯಕೀಯ ಮಂಡಳಿ ರದ್ದುಗೊಳಿಸಬೇಕು. ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆಯಾಗಿರುವ ಡಾ.ಆರತಿ ಲಾಲ್ ಚಾಂದಿನಿಯವರು 'ತಬ್ಲೀಗ್ ಜಮಾಅತಿನವರು ಭಯೋತ್ಪಾದಕರು' ಎಂದು ಕರೆದಿದ್ದು, ತಬ್ಲೀಗಿಗಳನ್ನು ಜೈಲಿನ ಏಕಾಂತ ಸೆಲ್‍ಗಳಿಗೆ ತಳ್ಳಬೇಕು ಅಥವಾ ಅವರಿಗೆ ಯಾವುದೇ ಚಿಕಿತ್ಸೆ ನೀಡದೆ ಅರಣ್ಯಗಳಿಗೆ ಅಟ್ಟಬೇಕು. ಅವರಿಗೆ ಚಿಕಿತ್ಸೆ ನೀಡುವುದು ಸರಕಾರದ ಸಂಪನ್ಮೂಲಗಳನ್ನು ವ್ಯರ್ಥ ಮಾಡಿದಂತೆ ಎಂಬ ಹೇಳಿಕೆ ನೀಡಿದ್ದು, 20ರಿಂದ 30 ಕೋಟಿಯಷ್ಟಿರುವ ಜನರು ನೂರು ಕೋಟಿ ಭಾರತೀಯರ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಎಂದು ಮುಸ್ಲಿಮ್ ಜನಸಂಖ್ಯೆಯನ್ನು ಗುರಿಯನ್ನಾಗಿಸಿಕೊಂಡು ಅವರು ಹೇಳಿಕೆ ನೀಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ವೈದ್ಯ ವೃತ್ತಿಯಲ್ಲಿರುವವರು ಜಾತಿ, ಮತ, ಧರ್ಮ, ಲಿಂಗ ಇತ್ಯಾದಿ ತಾರತಮ್ಯವಿಲ್ಲದೆ ರೋಗಿಗಳಿಗೆ ಸಮಾನವಾಗಿ ಚಿಕಿತ್ಸೆ ನೀಡಲು ಬದ್ಧರಾಗಿರುವ ವೈದ್ಯಕೀಯ ಸಮುದಾಯಕ್ಕೆ ಡಾ.ಆರತಿ ಲಾಲ್ ಚಾಂದಿನಿಯವರು ಕಳಂಕಿತರಾಗಿದ್ದಾರೆ. ಮುಸ್ಲಿಮ್ ಸಮುದಾಯದ ರೋಗಿಗಳು ಚಿಕಿತ್ಸೆಗಾಗಿ ಅಂತಹ ವೈದ್ಯರ ಬಳಿ ಹೇಗೆ ಹೋಗುತ್ತಾರೆ ಎಂದು ಶರ್ಫುದ್ದೀನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ವಿರುದ್ಧ ವಿಷಕಾರುವ ಇಂತಹ ಕಳಂಕಿತ ವ್ಯಕ್ತಿಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ಹಗೆತನದ ಈ ಟೀಕೆಗಳಿಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿಷ್ಠಿತ ಸಂಸ್ಥೆಯ ಪ್ರಾಂಶುಪಾಲರ ಹುದ್ದೆಯಿಂದ ಅವರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News