ಕೊರೋನ ಲಕ್ಷಣಗಳನ್ನು ಹೊಂದಿದ್ದ ತಾಯಿ-ಮಗ ಮೃತ್ಯು: ಕೋವಿಡ್-19 ವರದಿ ನೀಡದ ಆಸ್ಪತ್ರೆ!

Update: 2020-06-05 08:09 GMT

ಅಹ್ಮದಾಬಾದ್: ನಗರದ ನರೋಡ ಪ್ರದೇಶದಲ್ಲಿರುವ ಪಠಾನ್ ಚಾವ್ಲ್‍ ನಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ 50 ವರ್ಷದ ಗಾಯತ್ರಿಬೆನ್ ಹಾಗೂ ಆಕೆಯ 25 ವರ್ಷದ ಪುತ್ರ ವಿಷ್ಣು ಚವಾಣ್ ಮೃತಪಟ್ಟಿದ್ದಾರೆ. ಇಬ್ಬರಿಗೂ ಕೋವಿಡ್-19 ಗುಣಲಕ್ಷಣಗಳಿದ್ದರೂ ಅವರು ಚಿಕಿತ್ಸೆ ಪಡೆದಿದ್ದ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆ ಅವರು ಕೋವಿಡ್-19 ಪಾಸಿಟಿವ್ ಆಗಿದ್ದರೇ ಎಂಬುದನ್ನು ಇನ್ನೂ ದೃಢೀಕರಿಸಿಲ್ಲ. ಆದರೆ ಅವರಿಬ್ಬರಿಗೂ ಕೋವಿಡ್ ಸೋಂಕು ತಗಲಿರಬಹುದೆಂಬ ಗುಮಾನಿ ಕುಟುಂಬ ಹಾಗೂ ನೆರೆಹೊರೆಯವರಿಗಿದೆ. ಇದೇ ಕಾರಣದಿಂದ ಈ ಕುಟುಂಬದ ದುಃಖದ ಕಾಲದಲ್ಲಿ ನೆರೆಹೊರೆಯವರು ಯಾರೂ ಅತ್ತ ಸುಳಿದಿರಲಿಲ್ಲ.

“ಗಾಯತ್ರಿ ಬೆನ್ ಹಾಗೂ ವಿಷ್ಣು ಕೋವಿಡ್-19 ಪಾಸಿಟಿವ್ ಆಗಿದ್ದರೇ ಎಂಬುದು ನಮಗೆ ತಿಳಿಯಬೇಕಿದೆ ಹಾಗೂ ಪಾಸಿಟಿವ್ ವರದಿಯಿದ್ದರೆ ನಾವು ಕ್ವಾರಂಟೈನ್ ಆಗಬೇಕಿದೆ. ಆದರೆ ಆಸ್ಪತ್ರೆ ಆಡಳಿತ ಮಾತ್ರ ವರದಿ ನೀಡುತ್ತಿಲ್ಲ” ಎಂದು ವಿಷ್ಣುವಿನ 24 ವರ್ಷದ ಪತ್ನಿ ಸೋನಾಲಿ ಹೇಳುತ್ತಾಳೆ. ಇಬ್ಬರು ಪುಟ್ಟ ಮಕ್ಕಳು ಹೊಂದಿರುವ ಆಕೆ ಪತಿಯ ಸಾವಿನಿಂದ ಕಂಗೆಟ್ಟು ಹಲವು ಬಾರಿ ಪ್ರಜ್ಞೆ ತಪ್ಪಿ ಬಿದ್ದರೂ ಆಕೆಯನ್ನು ಸಂತೈಸುವವರು ಹಾಗೂ ಆಕೆಯ ಆರೈಕೆ ಮಾಡುವವರು ಯಾರೂ ಇಲ್ಲವಾಗಿದೆ.

ಮನೆಯಲ್ಲಿ ಕುಸುರಿ ಕೆಲಸ ಮಾಡಿ ರೂ 10,000 ಗಳಿಸುತ್ತಿದ್ದ ವಿಷ್ಣು ಕಳೆದೆರಡು ತಿಂಗಳು ಲಾಕ್ ಡೌನ್‍ನಿಂದ ಯಾವುದೇ ಆದಾಯ ಗಳಿಸಿರಲಿಲ್ಲ. ಅಲ್ಪಸ್ವಲ್ಪ ಉಳಿತಾಯದ ಹಣದಿಂದ ಜೀವನ ಸಾಗುತ್ತಿದ್ದರು. ಮೇ 22ರಂದು ಕೋವಿಡ್-19 ಗುಣಲಕ್ಷಣಗಳನ್ನು ಹೊಂದಿದ್ದ ಹಾಗೂ ಮಧುಮೇಹಿಯಗಿದ್ದ ಗಾಯತ್ರಿಬೆನ್ ಅವರನ್ನು ಅಹ್ಮದಾಬಾದ್  ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮರುದಿನ ಆಕೆ ಅಲ್ಲಿ ಮೃತಪಟ್ಟಿದ್ದರು. ಡಿಸ್ಚಾರ್ಜ್ ಫೈಲ್ ನೀಡದ ಆಸ್ಪತ್ರೆ ಕೇವಲ ಡೆತ್ ಸ್ಲಿಪ್ ನೀಡಿತ್ತು ಎಂದು ಕುಟುಂಬ ಹೇಳುತ್ತಿದೆ. ಆಕೆಗೆ ಕೊರೋನ ಇತ್ತೇ ಎಂದು ತಿಳಿಯಲು ಕುಟುಂಬ ಹಲವು ಬಾರಿ ಆಸ್ಪತ್ರೆಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ.

ಕೆಲ ದಿನಗಳ ನಂತರ ವಿಷ್ಣುವಿಗೆ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಆತನ ಇಚ್ಛೆಯಂತೆಯೇ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಯಿತಾದರೂ, ಚಿಕಿತ್ಸೆ ನಿರಾಕರಿಸಿ ವಾಪಸ್ ಕಳುಹಿಸಲಾಗಿತ್ತು ಎಂದು ಕುಟುಂಬ ಆರೋಪಿಸಿದೆ. ಕೊನೆಗೆ ಆತನನ್ನೂ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.

ಕುಟುಂಬದಲ್ಲಿ ಕೋವಿಡ್ ಲಕ್ಷಣಗಳನ್ನು ಹೊಂದಿದ್ದ ಇಬ್ಬರು ಸಾವನ್ನಪ್ಪಿದ್ದರೂ ಅಹ್ಮದಾಬಾದ್ ನಗರಪಾಲಿಕೆ ಅಧಿಕಾರಿಗಳು ಅತ್ತ ಸುಳಿದಿಲ್ಲ. ಆದರೆ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ವಿಭಾಗಕ್ಕೆ ಹೋದಲ್ಲಿ ಕುಟುಂಬಕ್ಕೆ ಅಗತ್ಯವಿರುವ ದಾಖಲೆಗಳು ಲಭ್ಯವಿವೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಸದ್ಯ ಸೊನಾಲಿ ಪುಣೆಯಲ್ಲಿರುವ ತನ್ನ ಹೆತ್ತವರ ಮನೆಗೆ ಮರಳಿದ್ದು  ಅಲ್ಲಿನ ಖಾಸಗಿ ಲ್ಯಾಬ್‍ನಲ್ಲಿ ಆಕೆ ಕೋವಿಡ್ ಪರೀಕ್ಷೆಗೊಳಗಾಗಿದ್ದು ವರದಿ ಇನ್ನಷ್ಟೇ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News