ತಬ್ಲೀಗಿ ಜಮಾಅತ್ ಕಾರ್ಯಕ್ರಮ: ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

Update: 2020-06-05 09:40 GMT

 ಹೊಸದಿಲ್ಲಿ,ಜೂ.5: ನಿಝಾಮುದ್ದೀನ್ ಮರ್ಕಝ್‌ನಲ್ಲಿ ನಡೆದಿರುವ ತಬ್ಲೀಗಿ ಜಮಾಅತ್ ಕಾರ್ಯಕ್ರಮದ ಸಿಬಿಐ ತನಿಖೆಯ ಅಗತ್ಯವಿಲ್ಲ. ಈ ಕಾರ್ಯಕ್ರಮದ ಕುರಿತಂತೆ ದಿಲ್ಲಿ ಪೊಲೀಸ್ ಕ್ರೈಮ್ ಬ್ರಾಂಚ್ ಈಗಾಗಲೇ ತನಿಖೆ ಮುಂದುವರಿಸುತ್ತಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

 ನಿಝಾಮುದ್ದೀನ್ ಮರ್ಕಝ್‌ನಲ್ಲಿ ನಡೆದಿರುವ ತಬ್ಲೀಗಿ ಜಮಾಅತ್ ಕಾರ್ಯಕ್ರಮದ ಬಗ್ಗೆ ದಿಲ್ಲಿ ಪೊಲೀಸ್ ಇಲಾಖೆಯ ಅಪರಾಧ ಶಾಖೆಯ ತನಿಖೆ ಪ್ರಗತಿಯಲ್ಲಿದೆ. ಇದು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳ್ಳುತ್ತದೆ. ಆದ್ದರಿಂದ ಸಿಬಿಐ ತನಿಖೆಗೆ ಮನವಿ ಯಾವುದೇ ಪರಿಗಣನೆಗೆ ಅರ್ಹವಾಗಿಲ್ಲ ಎಂದು ಕೇಂದ್ರ ಸರಕಾರವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

 ತಬ್ಲೀಗಿ ಕಾರ್ಯಕ್ರಮದ ಬಗ್ಗೆ ಸರಕಾರವು ಯಾವುದೇ ನಿರ್ಲಕ್ಷ ಅಥವಾ ವಿಳಂಬ ನೀತಿಯನ್ನು ಅನುಸರಿಸಿಲ್ಲ. ಮಾ.21ರಂದು ಮರ್ಕಝ್ ಅಧಿಕಾರಿಗಳಿಗೆ ಪರಿಸ್ಥಿತಿಯ ಕುರಿತು ತಿಳಿಸಲಾಗಿತ್ತು. ದೇಶ ಹಾಗೂ ವಿದೇಶ ಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ಅವರವರ ಸ್ಥಳಗಳಿಗೆ ಕಳುಹಿಸುವಂತೆ ಸೂಚಿಸಲಾಗಿತ್ತು. ಆದರೆ ಯಾರೂ ಇದನ್ನು ಗಮನ ಹರಿಸಲಿಲ್ಲ. ತಬ್ಲೀಗಿ ಜಮಾಅತ್‌ನ ಮುಖ್ಯಸ್ಥ ವೌಲಾನ ಮುಹಮ್ಮದ್ ಸಾದ್ ಅವರ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಕಂಡುಬಂದಿದೆ. ಇದರಲ್ಲಿ ಲಾಕ್‌ಡೌನ್ ಹಾಗೂ ಸುರಕ್ಷಿತ ಅಂತರವನ್ನು ದಿಕ್ಕರಿಸುವಂತೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಮ್ಮ ಅನುಯಾಯಿಗಳಿಗೆ ಹೇಳುತ್ತಿರುವುದು ಸ್ಪೀಕರ್‌ನಲ್ಲಿ ಕೇಳಿಸುತ್ತಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News