ಕೋವಿಡ್-19 ಹೆಸರಿನಲ್ಲಿ 20 ಲಕ್ಷ ಕೋಟಿ ರೂ. ಬಿಡುಗೆಡ ಬರೀ ಬೋಗಸ್: ಸಿದ್ದರಾಮಯ್ಯ

Update: 2020-06-05 10:21 GMT

ಮೈಸೂರು, ಜೂ.5: ಕೋವಿಡ್-19 ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ 20 ಲಕ್ಷ ಕೋಟಿ ರೂ. ಬರೀ ಬೋಗಸ್,  ಇದುವರೆಗೂ ಈ ಹಣ ಯಾರಿಗೂ ತಲುಪಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಟಿ.ಕೆ.ಲೇಔಟ್ ನಲ್ಲಿರುವ ತನ್ನ ಸ್ವಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆವರು, ಪ್ರಧಾನಿ ಮೋದಿ ‘ಭಾಯಿಯೋ ಬೆಹನೋ’ ಎಂದು ಹೇಳಿ ಚಪ್ಪಾಳೆ ತಟ್ಟಿ ದೀಪ ಹಚ್ಚಿ ಅನ್ನುವಷ್ಟಕ್ಕೆ ಮಾತ್ರ ಸೀಮಿತ ಹೊರತು, ಕಷ್ಟಕಾಲದಲ್ಲಿರುವ ಜನರ ನೆರವಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಕಡಿಮೆ ಇದ್ದ ಸಂದರ್ಭದಲ್ಲಿ ಲಾಕ್ ಡೌನ್ ಮಾಡಿ ಜನರಗೆ ಬಹಳಷ್ಟು ಅನಾನೂಕೂಲ ಉಂಟು ಮಾಡಿದರು. ಕೂಲಿ ಕಾರ್ಮಿಕರು, ಆಟೋ ಚಾಲಕರು, ರೈತರು, ವಲಸೆ ಕಾರ್ಮಿಕರು ಸೇರಿದಂತೆ ಸಾಕಷ್ಟು ಮಂದಿ ತೊಂದರೆ ಅನುಭವಿಸಿದರು. ಅವರ ನೆರವಿಗೆ ನಿಲ್ಲಬೇಕಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲಗೊಂಡಿವೆ ಎಂದು ಹರಿಹಾಯ್ದರು.

ಸದ್ಯ ಶಾಲೆ ಪ್ರಾರಂಭಿಸುವುದು ಬೇಡ: ಸಿದ್ದರಾಮಯ್ಯ

  ಯಾವುದೇ ಕಾರಣಕ್ಕೂ ಸದ್ಯ ಶಾಲೆಗಳನ್ನು ಪ್ರಾರಂಭ ಮಾಡುವುದು ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 ಕೊರೋನಗೆ ಇನ್ನು ಔಷಧಿಯನ್ನೇ ಕಂಡು ಹಿಡಿದಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕೆ ಔಷಧಿ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಆರಂಭ ಮಾಡಿದರೆ ಸಣ್ಣಮಕ್ಕಳನ್ನು ನಿಯಂತ್ರಣ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಪ್ರೀ ಕೆ.ಜಿ.ಯಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ಪ್ರಾರಂಭ ಮಾಡುವುದು ಸರಿಯಲ್ಲ. ಸಣ್ಣ ಮಕ್ಕಳಿಗೆ ಕೊರೋನ ಸೋಂಕು ತಗುಲಿದರೆ ಇಡೀ ಶಾಲೆಗೆ ಮತ್ತು ಕುಟುಂಬಕ್ಕೆ ಬರುವ ಅಪಾಯವಿದೆ. ಜೊತೆಗೆ ಪಕ್ಕದ ಮನೆಯವರಿಗೂ ಹರಡಬಹುದು. ಹಾಗಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗಳ ಆರಂಭದಿಂದ ಹಿಂದೆ ಸರಿಯಬೇಕು ಎಂದು ಅವರು ಒತ್ತಾಯಿಸಿದರು.

ಯಾವ ಪಕ್ಷಕ್ಕೂ ಬೆಂಬಲವಿಲ್ಲ:

 ರಾಜ್ಯಸಭೆಗೆ ಕರ್ನಾಟಕದಿಂದ  ನಾಲ್ಕು ಮಂದಿಯನ್ನು ಆಯ್ಕೆ ಮಾಡಬಹುದು.  ಕಾಂಗ್ರೆಸ್ ಪಕ್ಷದಿಂದ 68 ಮಂದಿ ಶಾಸಕರಿದ್ದು, ರಾಜ್ಯಸಭಾ ಸ್ಥಾನಕ್ಕೆ ಆಯ್ಕೆಯಾಗಲು 48 ಮಂದಿಯ ಬೆಂಬಲವಿದ್ದರೆ ಸಾಕು. ಇನ್ನು ಉಳಿದ ಮತಗಳನ್ನು ಯಾರಿಗೆ ನೀಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು.

 ನಾವು ನಮ್ಮ ಪಕ್ಷದ ಉಳಿಕೆ ಮತವನ್ನು ಜೆಡಿಎಸ್ ಪಕ್ಷಕ್ಕೆ ನೀಡುತ್ತೇವೆ ಎಂದು ಹೇಳಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಬೆಂಬಲ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News