ಚಿಕ್ಕಮಗಳೂರು: ಭರದಿಂದ ಸಾಗಿದ ಕೊರೋನ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ಕಾರ್ಯ

Update: 2020-06-05 13:02 GMT

ಚಿಕ್ಕಮಗಳೂರು, ಜೂ.5: ನಗರದಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆರಂಭಿಸಬೇಕೆಂಬ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ. ನಗರದ ಹೃದಯ ಭಾಗದಲ್ಲಿರುವ ಹೆರಿಗೆ ಆಸ್ಪತ್ರೆಯ ಕಟ್ಟಡದಲ್ಲಿ 1.48 ಕೋ. ರೂ. ವೆಚ್ಚದ ಪ್ರಯೋಗಾಲಯ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಕಳೆದ ಮೂರು ದಿನಗಳಿಂದ ಪ್ರಯೋಗಾಲಯದ ಕಾಮಗಾರಿ ಭರದಿಂದ ನಡೆಯುತ್ತಿದೆ.

ದೇಶಾದ್ಯಂತ ಕೊರೋನ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ರಾಜ್ಯದಲ್ಲೂ ಈ ಮಹಾಮಾರಿ ಪ್ರತಿದಿನ ಸಾವಿರಾರು ಮಂದಿಯಲ್ಲಿ ಕಂಡು ಬರುತ್ತಿದೆ. ಕಾಫಿನಾಡಿನಲ್ಲಿ ಆರಂಭದಲ್ಲಿ ಕೊರೋನ ಸೋಂಕಿತರು ಪತ್ತೆಯಾಗಿರಲಿಲ್ಲ. ಆದರೆ ಸರಕಾರ ಹೊರ ಜಿಲ್ಲೆಗಳಲ್ಲಿರುವ ರಾಜ್ಯದ ಜನರಿಗೆ ತಮ್ಮ ಜಿಲ್ಲೆಗಳಿಗೆ ಹಿಂದಿರುಗಲು ಅವಕಾಶ ನೀಡಿದ ನಂತರ ಹೊರ ರಾಜ್ಯಗಳಿಂದ ಬಂದವರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಹೊರ ರಾಜ್ಯಗಳಿಂದ ಹಿಂದಿರುಗಿದವರಲ್ಲೇ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೆ 16 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 8 ಮಂದಿ ಗುಣಮುಖರಾಗಿದ್ದು, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸಿದವರ ಸಂಖ್ಯೆ ಮುನ್ನೂರಕ್ಕೂ ಹೆಚ್ಚಿದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಕೊರೋನ ವೈರಸ್ ಟೆಸ್ಟಿಂಗ್ ಲ್ಯಾಬ್ ಆರಂಭಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಅಲ್ಲದೇ ಸಂಘ ಸಂಸ್ಥೆಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ನಗರದಲ್ಲೇ ಲ್ಯಾಬ್ ತೆರೆಯಬೇಕೆಂದು ಒತ್ತಾಯಿಸಿದ್ದರು. ಕೊಡಗಿನಂತಹ ಸಣ್ಣ ಜಿಲ್ಲೆಯಲ್ಲಿ ಲ್ಯಾಬ್ ಆರಂಭಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಇನ್ನೂ ಟೆಸ್ಟಿಂಗ್ ಲ್ಯಾಬ್ ಮಂಜೂರಾತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮಕೈಗೊಂಡಿಲ್ಲ. ಶಂಕಿತ ಕೊರೋನ ಸೋಂಕಿತರ ರಕ್ತ, ಗಂಟಲದ್ರವವನ್ನು ಪರೀಕ್ಷೆ ಮಾಡಲು ಶಿವಮೊಗ್ಗ, ಮೈಸೂರು, ಬೆಂಗಳೂರಿನ ಲ್ಯಾಬ್‍ಗಳಿಗೆ ಕಳುಹಿಸಬೇಕಿದ್ದು, ವರದಿ ಬರುವುದು ತಡವಾಗುತ್ತಿದೆ ಎಂದು ಮುಖಂಡರು ಅರೋಪಿಸಿದ್ದರು.

ಈ ವಿಚಾರ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮೇ ಅಂತ್ಯದೊಳಗೆ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದು ಮೇ ಆರಂಭದಲ್ಲಿ ಹೇಳಿಕೆ ನೀಡಿದ್ದರು. ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಕೊರೋನ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ತಡವಾಗಿದ್ದು, ಜೂನ್ ಅಂತ್ಯದೊಳಗೆ ನಗರದಲ್ಲಿ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದು ಇತ್ತೀಚೆಗೆ ಸಿ.ಟಿ.ರವಿ ಹೇಳಿದ್ದರು. 

ಅದರಂತೆ ಕಳೆದ ಮೂರು ದಿನಗಳಿಂದ ನಗರದ ಹೆರಿಗೆ ಆಸ್ಪತ್ರೆಯ ಕಟ್ಟಡದಲ್ಲಿ ಲ್ಯಾಬ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಲ್ಯಾಬ್ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ. ಪ್ರಯೋಗಾಲಯವನ್ನು ರಾಷ್ಟ್ರೀಯ ವಿಫತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆಯಾಗಿರುವ 1.48 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಪೈಕಿ 25 ಲಕ್ಷ ರೂ. ಕಟ್ಟಡದ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 1.6 ಕೋ. ರೂ. ವೆಚ್ಚದಲ್ಲಿ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ವಿದೇಶಗಳಿಂದ ಖರೀದಿಸಲು ಬಳಕೆಯಾಗಲಿದೆ. ಲ್ಯಾಬ್ ನಿರ್ಮಾಣ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗುತ್ತಿದ್ದು, ಮೊದಲ ಎರಡು ವಾರಗಳಲ್ಲಿ ಪ್ರಯೋಗಾಲಯಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ಖರೀದಿ ಮಾಡುವ ಕೆಲಸ ನಡೆಯಲಿದೆ. ಜೂನ್ ಅಂತ್ಯದೊಳಗೆ ಲ್ಯಾಬ್ ನಿರ್ಮಾಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ ಕುಮಾರ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

ಲ್ಯಾಬ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಿಸಲಾಗುತ್ತಿದ್ದು, ಪರೀಕ್ಷಾ ಉಪಕರಣಗಳನ್ನು ವಿದೇಶಗಳಿಂದ ಖರೀದಿಸಲು ನಿರ್ಧರಿಸಲಾಗಿದೆ. ಈ ಲ್ಯಾಬ್‍ನಲ್ಲಿ ಒಂದು ದಿನಕ್ಕೆ 500ರಿಂದ 600 ಶಂಕಿತರ ರಕ್ತ, ಗಂಟಲ ದ್ರವದ ಪರೀಕ್ಷೆ ನಡೆಸಬಹುದಾಗಿ. ಇಷ್ಟು ಪ್ರಮಾಣದಲ್ಲಿ ಪರೀಕ್ಷೆ ನಡೆಸಿಯೂ ಅಂದಿನ ಪರೀಕ್ಷಾ ವರದಿಗಳನ್ನು ಅಂದೇ ನೀಡಲು ಸಾಧ್ಯವಾಗಲಿದೆ. ಶಂಕಿತರ ಮಾದರಿಗಳನ್ನಲ್ಲದೇ ಕಾಲಕಾಲಕ್ಕೆ ಸರಕಾರದ ನಿರ್ದೇಶನದಂತೆ ಪ್ರಯೋಗಾಲಯದಲ್ಲಿ ಕೊರೋನ ಸೋಂಕಿನ ಪರೀಕ್ಷೆಗಳನ್ನು ನಡೆಸಲಾಗುವುದು. ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯ, ವಿದೇಶಗಳಿಂದ ಜಿಲ್ಲೆಗೆ ಆಗಮಿಸಿರುವರಲ್ಲಿ ಸೋಂಕಿನ ಲಕ್ಷಣಗಳಿದ್ದಲ್ಲಿ ಅಂತವರ ರಕ್ತ, ಗಂಟಲ ದ್ರವದ ಮಾದರಿಗಳನ್ನೂ ಪರೀಕ್ಷೆ ಮಾಡಲಾಗುವುದು. ಈ ಲ್ಯಾಬ್‍ನಲ್ಲಿ ಪರೀಕ್ಷೆಗೊಳಪಡುವವರೆಲ್ಲರಿಗೂ ಉಚಿತ ಪರೀಕ್ಷೆ ಮಾಡಲಾಗುದು.

- ಡಾ.ಸಿ.ಮೋಹನ್‍ ಕುಮಾರ್, ಜಿಲ್ಲಾ ಸರ್ಜನ್

ಜಿಲ್ಲೆಯಲ್ಲಿ ಇದುವರೆಗೂ 16 ಮಂದಿಯಲ್ಲಿ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿಗಳಿಂದ ದೃಢಪಟ್ಟಿದೆ. ಸೋಂಕಿತರಿಗೆ ನಗರದ ಹೆರಿಗೆ ಆಸ್ಪತ್ರೆ ಆವರಣದಲ್ಲಿನ ಕಟ್ಟದಲ್ಲಿ ಆರಂಭಿಸಲಾಗಿರುವ ಕೊರೋನ ಐಸೋಲೇಶನ್ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪೈಕಿ ಇದುವರೆಗೂ 8 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಪ್ರಯೋಗಾಲಯದ ಸೌಲಭ್ಯ ಇಲ್ಲದ ಕಾರಣ ಶಂಕಿತರ ಮಾದರಿಗಳನ್ನು ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದರಿಂದಾಗಿ ವರದಿ ಜಿಲ್ಲಾಡಳಿತದ ಕೈ ಸೇರಲು ಹಲವು ದಿನಗಳ ಕಾಯಬೇಕಿತ್ತು.

ಈ ಪ್ರಯೋಗಾಲಯಗಳಲ್ಲಿನ ಕೆಲಸ ಒತ್ತಡದಿಂದಾಗಿ ಶಂಕಿತರ ವರದಿಗಳು ಬಂದಿರುವ ಉದಾಹರಣೆ ಜಿಲ್ಲೆಯಲ್ಲಿ ವರದಿಯಾಗಿದ್ದು, ಮೂಡಿಗೆರೆ ತಾಲೂಕಿನ ಸರಕಾರಿ ವೈದ್ಯ ಹಾಗೂ ತರೀಕೆರೆಯ ಗರ್ಭಿಣಿ ಮಹಿಳೆಯಲ್ಲಿ ಕೊರೋನ ಸೋಂಕು ಇದೆ ಎಂಬ ವರದಿ ಆರಂಭದಲ್ಲಿ ಬಂದಿತ್ತು. ನಂತರ ಈ ವರದಿಗಳು ಫಾಲ್ಸ್ ಪಾಸಿಟಿವ್ ಎಂದು ಜಿಲ್ಲಾಡಳಿತವೇ ಹೇಳಿಕೆ ನೀಡಿತ್ತು. ಜಿಲ್ಲೆಯಲ್ಲಿ ಪ್ರಯೋಗಾಲಯ ಇಲ್ಲದಿರುವುದೇ ಇಂತಹ ತಪ್ಪು ವರದಿಗಳು ಬರಲು ಕಾರಣ ಎಂದು ಸಾರ್ವಜನಿಕರು ಈ ವೇಳೆ ಆರೋಪಿಸಿದ್ದರು. ಇದೀಗ ನಗರದಲ್ಲಿ ಕೊರೋನ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ಕಾರ್ಯಕ್ಕರ ಚಾಲನೆ ಸಿಕ್ಕಿದ್ದು, ಕೊರೋನ ಸೋಂಕು ಶಂಕಿತರ ಪರೀಕ್ಷೆಗಳು ಸಾಂಗವಾಗಿ ನಡೆಯಲು ಈ ಲ್ಯಾಬ್‍ನಿಂದ ಸಾಧ್ಯವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News