ರಾಜ್ಯಸಭಾ ಚುನಾವಣೆ: ದೇವೇಗೌಡರ ಸ್ಪರ್ಧೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ತೀರ್ಮಾನ

Update: 2020-06-05 13:31 GMT

ಬೆಂಗಳೂರು, ಜೂ. 5: ಕಾಂಗ್ರೆಸ್ ಪಕ್ಷದ ನೆರವಿನೊಂದಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ. ದೇವೇಗೌಡ ಅವರನ್ನು ಜೂ.19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಿದೆ.

ಶುಕ್ರವಾರ ಇಲ್ಲಿನ ಜೆಪಿ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರು ನಾಲ್ಕನೆ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿ ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕುವುದಿಲ್ಲ. ಅಲ್ಲದೆ, ಅವರಿಗೆ ಪಕ್ಷಾತೀತವಾಗಿ ಬೆಂಬಲಿಸುವ ಸಾಧ್ಯತೆ ಇದೆ ಎಂಬುದು ಪಕ್ಷದ ಶಾಸಕರ ಅಭಿಮತವಾಗಿದೆ. ಆದರೆ, ಈವರೆಗೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರು ಒಪ್ಪಿಗೆ ನೀಡಿಲ್ಲ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದೇವೇಗೌಡರಂತಹ ಹಿರಿಯ, ಅನುಭವಿ ನಾಯಕರು ಹೊಸದಿಲ್ಲಿಯಲ್ಲಿ ಇರಬೇಕು ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೆ ದೇವೇಗೌಡರ ಜೊತೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಒತ್ತಾಯವಿದೆ, ಒಪ್ಪಿಗೆ ಸಿಕ್ಕಿಲ್ಲ: ರಾಜ್ಯಸಭೆ ಚುನಾವಣೆಗೆ ದೇವೇಗೌಡರು ಸ್ಪರ್ಧಿಸಬೇಕು ಎಂಬುದು ಪಕ್ಷದ ಶಾಸಕರ ಅಭಿಪ್ರಾಯವಾಗಿದ್ದು, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದೇವೇಗೌಡರು ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಹೊಸದಿಲ್ಲಿಯಲ್ಲಿ ದೇವೇಗೌಡರಂತಹ ಹಿರಿಯ, ಅನುಭವಿ ನಾಯಕರ ಅಗತ್ಯ ದೇಶಕ್ಕಿದ್ದು, ನಾಲ್ಕನೇ ಅಭ್ಯರ್ಥಿಯನ್ನಾಗಿ ದೇವೇಗೌಡರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ನಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದರು.

ಶಾಸಕರ ಸಂಖ್ಯಾಬಲವನ್ನು ಆಧರಿಸಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ ಪಕ್ಷದ ಓರ್ವ ಅಭ್ಯಥಿ ಅನಾಯಾಸವಾಗಿ ಗೆಲ್ಲಲ್ಲಿದ್ದು, ಎರಡೂ ಪಕ್ಷಗಳಿಗೂ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲವಿಲ್ಲ. ಹೀಗಾಗಿ ನಮ್ಮ ಪಕ್ಷಕ್ಕೆ ಎರಡೂ ಪಕ್ಷಕ್ಕಿಂತ ಹೆಚ್ಚಿನ ಸಂಖ್ಯಾಬಲವಿದೆ.  ಒಂದು ವೇಳೆ ಕಾಂಗ್ರೆಸ್ ಅಥವಾ ಬಿಜೆಪಿ ನಾಲ್ಕನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ನಾವು ಆಲೋಚನೆ ಮಾಡುತ್ತೇವೆ ಎಂದರು.

ದೇವೇಗೌಡರನ್ನು ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದು ಪಕ್ಷದ ಎಲ್ಲ ಶಾಸಕರ ಒಕ್ಕೊರಲ ಅಭಿಪ್ರಾಯವಾಗಿದೆ. ಈ ಬಗ್ಗೆ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಪಕ್ಷ ಇನ್ನೂ ಅಭ್ಯರ್ಥಿಯನ್ನೇ ಅಂತಿಮಗೊಳಿಸಿಲ್ಲ. ಹೀಗಿರುವಾಗ ಕಾಂಗ್ರೆಸ್ ಬೆಂಬಲ ಕೋರುವ ಬಗ್ಗೆ ಈಗ ಚರ್ಚೆ ಮಾಡುವುದು ಸಲ್ಲ ಎಂದರು.

ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ದೇವೇಗೌಡರು ಸ್ಪರ್ಧೆ ಮಾಡಬೇಕೆಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ. ಗೌಡರು ರಾಷ್ಟ್ರದ ಹಿರಿಯ ರಾಜಕಾರಣಿ. ರಾಜ್ಯದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿರುವವರು. ಹೀಗಾಗಿ ಅಂತವರು ಸಂಸತ್ತಿನಲ್ಲಿರಬೇಕು. ಈ ಬಗ್ಗೆ ದೇವೇಗೌಡರನ್ನು ಒಪ್ಪಿಸುತ್ತೇವೆ'

-ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News