ನಮ್ಮ ಶಾಸಕರಿಗೆ ಅಗೌರವ ನೀಡುವುದು ಬೇಡ: ಡಿ.ಕೆ.ಶಿವಕುಮಾರ್ ಎಚ್ಚರಿಕೆ

Update: 2020-06-05 13:36 GMT

ಬೆಂಗಳೂರು, ಜೂ.5: ಕೆಲವು ಮೆಂಟಲ್‍ಗಳು ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣೆಯನ್ನು ಕಡಲೆಪುರಿ ವ್ಯಾಪಾರ ಎಂದು ಭಾವಿಸಿ 20, 30 ಎಂದು ನಂಬರ್ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ಅಗೌರವ ನೀಡುವುದು ಬೇಡ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಮಂತ್ರಿ ಯಾವ ಹೇಳಿಕೆ ನೀಡುತ್ತಿದ್ದಾರೆ, ಯಾವ ಹೊಟೇಲ್‍ನಲ್ಲಿ ಯಾರು ಸಭೆ ನಡೆಸುತ್ತಿದ್ದಾರೆ ಎಂಬುದು ಗೊತ್ತಿದೆ ಎಂದರು,

ನಿನ್ನೆ ರಾತ್ರಿ ಯಾರು, ಎಲ್ಲಿ, ಏನು ಸಭೆ ನಡೆಸಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ನಾವು ಇಲ್ಲಿ ಸುಮ್ಮನೆ ಕೂತಿಲ್ಲ. ನಮಗೆ ಬೇರೆಯವರ ಮನೆ ವಿಚಾರ ಬೇಡ. ನಾವುಂಟು ನಮ್ಮ ಮನೆ ಉಂಟು, ನಮ್ಮ ಶಾಸಕರುಂಟು. ಆದುದರಿಂದ, ಅನಗತ್ಯವಾಗಿ ನಮ್ಮ ಶಾಸಕರಿಗೆ ಅಗೌರವವಾಗುವ ರೀತಿಯಲ್ಲಿ ಯಾರೊಬ್ಬರೂ ಮಾತನಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕೊರೋನ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ಮಾಡಿದ್ದರು, ಪತ್ರ ಬರೆದಿದ್ದಾರೆ. ನಾನು ಅವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನೀವು ಪೋಷಕರ ಜತೆ ಚರ್ಚಿಸಿ. ಪ್ರತಿ ಪೋಷಕರಿಗೂ ಅವರ ಮಕ್ಕಳ ವಿಚಾರವಾಗಿ ಆತಂಕವಿರುತ್ತದೆ. ಶಿಕ್ಷಣ ಸಂಸ್ಥೆಗಳು ಕೂಡ ಪಾಠದ ಬಗ್ಗೆ ಜವಾಬ್ದಾರಿ ಹೊಂದಿದ್ದಾರೆ ಅವರೊಂದಿಗೆ ಕೂತು ಚರ್ಚಿಸಿ ಎಂದಿದ್ದೇನೆ. ಸರಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News