ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು ರಾಜ್ಯಗಳಿಗೆ 15 ದಿನಗಳ ಗಡುವು ನೀಡಿದ ಸುಪ್ರೀಂ ಕೋರ್ಟ್

Update: 2020-06-05 15:53 GMT

ಹೊಸದಿಲ್ಲಿ,   ಜೂ.5: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಅತಂತ್ರರಾಗಿರುವ ಎಲ್ಲ ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಅವರ ತವರು ರಾಜ್ಯಗಳಿಗೆ ಕಳುಹಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಕಾರ್ಮಿಕರ ರವಾನೆಗೆ ಇಷ್ಟು ದಿನಗಳು ಸಾಕು ಎಂದು ಅದು ಹೇಳಿದೆ. ವಲಸೆ ಕಾರ್ಮಿಕರ ಬವಣೆಯ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತನ್ನ ಪೂರ್ಣ ಆದೇಶವನ್ನು ಪ್ರಕಟಿಸಲಿದೆ.

ಎಲ್ಲ ವಲಸೆ ಕಾರ್ಮಿರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಲು ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ 15 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಈ ಕಾರ್ಮಿಕರಿಗೆ ಉದ್ಯೋಗ ಮತ್ತು ಇತರ ಪರಿಹಾರಗಳನ್ನು ಹೇಗೆ ಒದಗಿಸಲಾಗುತ್ತದೆ ಎನ್ನುವುದನ್ನು ಎಲ್ಲ ರಾಜ್ಯಗಳು ದಾಖಲಿಸಬೇಕು. ವಲಸೆ ಕಾರ್ಮಿಕರ ನೋಂದಣಿಯು ಕಡ್ಡಾಯವಾಗಿದೆ ಎಂದು ನ್ಯಾಯಮೂರ್ತಿಗಳಾಧ ಅಶೋಕ ಭೂಷಣ, ಎಸ್.ಕೆ.ಕೌಲ್ ಮತ್ತು ಎಂ.ಆರ್.ಶಾ ಅವರ ಪೀಠವು ತಿಳಿಸಿತು.

ಸರಕಾರವು ರಸ್ತೆ ಮೂಲಕ 41 ಲಕ್ಷ ಮತ್ತು ರೈಲುಗಳ ಮೂಲಕ 57 ಲಕ್ಷ ಸೇರಿದಂತೆ ಒಟ್ಟು ಸುಮಾರು ಒಂದು ಕೋಟಿ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಸಾಗಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ದಿಲ್ಲಿ ಸರಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ ಜೈನ್ ಅವರು, ದಿಲ್ಲಿಯಲ್ಲಿ ಈಗಲೂ ಸುಮಾರು ಎರಡು ಲಕ್ಷ ವಲಸೆ ಕಾರ್ಮಿಕರಿದ್ದು,ಅವರು ತವರು ರಾಜ್ಯಗಳಿಗೆ ಮರಳಲು ಬಯಸುತ್ತಿಲ್ಲ. 10,000ಕ್ಕೂ ಕಡಿಮೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಉತ್ತರ ಪ್ರದೇಶ ಸರಕಾರವೂ ನ್ಯಾಯಾಲಯದಲ್ಲಿ ಇಂತಹುದೇ ಹೇಳಿಕೆಯನ್ನು ನೀಡಿತು.

 ‘ಯಾವುದೇ ಸಂದರ್ಭದಲ್ಲಿ ರಾಜ್ಯವು ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವನ್ನು ವಿಧಿಸಿಲ್ಲ. ರಾಜ್ಯಗಳು ಇಮ್ಮಡಿ ಬಾಧ್ಯತೆಗಳನ್ನು ಹೊಂದಿವೆ. ನಾವು ಉತ್ತರ ಪ್ರದೇಶದಲ್ಲಿರುವ ಕಾರ್ಮಿಕರನ್ನೂ ಅವರ ರಾಜ್ಯಗಳಿಗೆ ವಾಪಸ್ ಕಳುಹಿಸಬೇಕು. 104 ರೈಲುಗಳ ಮೂಲಕ 1.35 ಲ.ಜನರನ್ನು ಮರಳಿ ಕಳುಹಿಸಲಾಗಿದೆ. ಈಗ ಯಾವುದೇ ಕಾರ್ಮಿಕ ರಾಜ್ಯವನ್ನು ತೊರೆಯಲು ಬಯಸುತ್ತಿಲ್ಲ. ಮೂಲತ: ಉತ್ತರ ಪ್ರದೇಶಕ್ಕೆ ಸೇರಿದ ಜನರು ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಿಲ್ಲಿ ಗಡಿಗಳಿಂದ 5.50 ಲ.ವಲಸೆ ಕಾರ್ಮಿಕರನ್ನು ಕರೆತರಲಾಗಿದ್ದು,ಬಸ್ಸುಗಳು 10,000ಕ್ಕೂ ಅಧಿಕ ಟ್ರಿಪ್‌ಗಳನ್ನು ಮಾಡಿದ್ದವು ಎಂದು ಉತ್ತರ ಪ್ರದೇಶದ ಪರ ಹಿರಿಯ ನ್ಯಾಯವಾದಿ ಪಿ.ಎಸ್.ನರಸಿಂಹ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಅಸಾಧಾರಣ ಕ್ರಮವೊಂದರಲ್ಲಿ 1,664 ಶ್ರಮಿಕ್ ರೈಲುಗಳನ್ನು ವ್ಯಸ್ಥೆ ಮಾಡಲಾಗಿತ್ತು ಮತ್ತು 21.69 ಲ. ಜನರನ್ನು ರಾಜ್ಯಕ್ಕೆ ಮರಳಿ ಕರೆತರಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News