ಕಳಪೆ ಮಾಸ್ಕ್ ಮಾರಾಟಕ್ಕೆ ಲಂಚ ಕೇಳಿದ ಆರೋಪ: ಇನ್ಸ್ ಪೆಕ್ಟರ್ ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

Update: 2020-06-05 16:07 GMT

ಬೆಂಗಳೂರು, ಜೂ.5: ಕಳಪೆ ಗುಣಮಟ್ಟದ ಮಾಸ್ಕ್ ಗಳನ್ನು ಮಾರಾಟ ಮಾಡಲಿಕ್ಕೆ ಅನುಕೂಲ ಮಾಡಿಕೊಡುವುದಾಗಿ ಲಂಚ ಕೇಳಿದ ಆರೋಪದಡಿ ದಾಖಲಿಸಿರುವ ಪ್ರಕರಣ ಸಂಬಂಧ ಇನ್ಸ್ ಪೆಕ್ಟರ್ ಆರ್.ಎಂ.ಅಜಯ್‍ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಇನ್ಸ್ ಪೆಕ್ಟರ್ ಆರ್.ಎಂ.ಅಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಪಿ.ಪ್ರಸನ್ನಕುಮಾರ್ ಅವರು, ಅರ್ಜಿದಾರರ ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಹೊಸ ವಸೂಲಿ ಪ್ರಕರಣ ದಾಖಲಿಸಲಾಗಿದೆ. ಲಂಚಕ್ಕೆ ಬೇಡಿಕೆ ಇಟ್ಟರೆ ಭ್ರಷ್ಟಾಚಾರ ಆರೋಪದಡಿ ದೂರು ದಾಖಲಿಸಬೇಕೆ ವಿನಹ ವಸೂಲಿ ಆರೋಪದಡಿ ಅಲ್ಲ. ಪೊಲೀಸರು ಆರೋಪಿಸಿರುವಂತೆ ಅರ್ಜಿದಾರರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ. ಆರೋಪಕ್ಕೆ ಸಾಕ್ಷ್ಯಾಧಾರಗಳು ಇಲ್ಲ. ಅರ್ಜಿದಾರರ ಮನೆ ಶೋಧಿಸಿದಾಗ ಹಣ ಪತ್ತೆಯಾಗಿಲ್ಲ. ಆರೋಪಿತ ಅಧಿಕಾರಿ, ಎಸಿಬಿ ತನಿಖಾಧಿಕಾರಿಗಳ ವಿಚಾರಣೆಗೆ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಕೀಲ ಪ್ರಸನ್ನಕುಮಾರ್ ಮನವಿ ಮಾಡಿದರು. 

ಮನವಿ ಪುರಸ್ಕರಿಸಿದ ಪೀಠ, ತನಿಖೆಗೆ ಸಹಕರಿಸಬೇಕು. ಸಾಕ್ಷ್ಯ ನಾಶಪಡಿಸಬಾರದು. ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News