ಗೋದಾಮುಗಳ ಮೇಲೆ ದಾಳಿ: 11 ಕೋಟಿ ರೂ. ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ

Update: 2020-06-05 16:12 GMT

ಬೆಂಗಳೂರು, ಜೂ.5: ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ಅಧಿಕಾರಿಗಳು ಶಿವಮೊಗ್ಗ ಹಾಗೂ ಸಾಗರದಲ್ಲಿ ಅಡಿಕೆ ವರ್ತಕರ ವ್ಯಾಪಾರ ಸ್ಥಳ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ 11 ಕೋಟಿ ರೂ.ಮೌಲ್ಯದ ಅಕ್ರಮ ಅಡಿಕೆ ದಾಸ್ತಾನನ್ನು ಪತ್ತೆ ಹಚ್ಚಿ 1.10 ಕೋಟಿ ರೂ. ತೆರಿಗೆ ಹಾಗೂ ದಂಡವನ್ನು ವಿಧಿಸಿದ್ದಾರೆ.

ಕೋವಿಡ್–19 ಲಾಕ್‍ಡೌನ್ ಅವಧಿಯಲ್ಲಿ ಹಲವು ವ್ಯಕ್ತಿಗಳು ಸೂಕ್ತ ದಾಖಲೆಗಳಿಲ್ಲದೆ ಅನಧಿಕೃತವಾಗಿ ಅಡಿಕೆಯನ್ನು ಖರೀದಿಸಿ ಶೇಖರಿಸಿರುವ ಬಗ್ಗೆ ಲಭಿಸಿದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಹಲವು ವರ್ತಕರ ಮೇಲೆ ತೀವ್ರ ನಿಗಾವಹಿಸಲಾಗಿತ್ತು. 

ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ(ಜಾರಿ) ನಿತೇಶ್ ಕೆ.ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಶಿವಮೊಗ್ಗದ 9 ಸ್ಥಳಗಳಲ್ಲಿ ಹಾಗೂ ಸಾಗರದ 4 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ತಪಾಸಣೆ ಕೈಗೊಂಡಿದ್ದಾರೆ.

ತಪಾಸಣಾ ಸಮಯದಲ್ಲಿ ಎರಡು ಅನಧಿಕೃತ ಗೋದಾಮುಗಳಲ್ಲಿ ಅಡಿಕೆ ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿ, ದಾಸ್ತಾನಿನ ಮೇಲೆ ದಂಡ ವಿಧಿಸಲಾಗಿದೆ. ತಪಾಸಣೆಯಿಂದ ಇಲ್ಲಿಯವರೆಗೆ 11.02 ಕೋಟಿ ರೂ.ಮೌಲ್ಯದ ಬಚ್ಚಿಟ್ಟ ವಹಿವಾಟು ಪತ್ತೆ ಹಚ್ಚಿ, 1.10 ಕೋಟಿ ರೂ.ದಂಡ ವಿಧಿಸಲಾಗಿದೆ.

86 ಲಕ್ಷ ರೂ.ಗಳನ್ನು ಈಗಾಗಲೆ ವಸೂಲಿ ಮಾಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ವರ್ತಕರು ಈ ಎಲ್ಲ ವಹಿವಾಟನ್ನು ಅನಧಿಕೃತವಾಗಿ ನಡೆಸಿರುವುದರಿಂದ ಸದರಿ ಮಾಹಿತಿಯನ್ನು ಮುಂದಿನ ಕ್ರಮಕ್ಕಾಗಿ ಎಪಿಎಂಸಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು. ತಪಾಸಣಾ ಅವಧಿಯಲ್ಲಿ ಕೆಲವು ವರ್ತಕರು ಹೂಡುವಳಿ ತೆರಿಗೆಯನ್ನು (ಇನ್‍ಪುಟ್ ಟ್ಯಾಕ್ಸ್) ಪಡೆಯುವ ಉದ್ದೇಶದಿಂದ ತಮಿಳುನಾಡಿನ ಕೆಲವು ಖೊಟ್ಟಿ ವರ್ತಕರಿಂದ ನಕಲಿ ಬಿಲ್ಲುಗಳನ್ನು ಪಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಹೆಚ್ಚಿನ ಅಂತರ್ ರಾಜ್ಯ ತನಿಖೆ ಕೈಗೊಳ್ಳಲಾಗುತ್ತಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಯನ್ನು ಬೆಳೆಯಲಾಗುತ್ತಿದ್ದು, ಹೆಚ್ಚಿನ ದಾಸ್ತಾನನ್ನು ಉತ್ತರ ಭಾರತದ ರಾಜ್ಯಗಳಿಗೆ ರವಾನಿಸಲಾಗುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆಯು ಅಡಿಕೆ ದಾಸ್ತಾನು ಹಾಗೂ ಸಾಗಾಣಿಕೆಯ ಮೇಲೆ ತೀವ್ರ ನಿಗಾವಹಿಸಿದ್ದು, ಜಿಎಸ್ಟಿ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ವಾಣಿಜ್ಯ ತೆರಿಗೆಗಳ ಆಯುಕ್ತರು(ಕರ್ನಾಟಕ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News