ಲಂಚ ಪಡೆಯುತ್ತಿದ್ದ ಆರೋಪ: ಮಡಿಕೇರಿ ನಗರಸಭೆಯ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ

Update: 2020-06-05 16:39 GMT

ಮಡಿಕೇರಿ, ಜೂ.5: ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡುವ ಸಂಬಂಧ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಮಡಿಕೇರಿ ನಗರಸಭೆಯ ಬಿಲ್ ಕಲೆಕ್ಟರ್ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಡಿಕೇರಿ ನಗರಸಭೆಯ ಬಿಲ್‍ ಕಲೆಕ್ಟರ್ ಎ.ಜಿ.ಲೋಹಿತ್‍ ಕುಮಾರ್ (38) ಬಂಧಿತ ಆರೋಪಿ.

ಪ್ರಕರಣದ ವಿವರ: ಮಡಿಕೇರಿ ಇಂದಿರಾನಗರದ ನಿವಾಸಿ ಹೆಚ್.ಎಸ್.ಗಣೇಶ್ ಎಂಬವರು 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿದ್ದು, ಇವರಿಗೆ ಜೂ.4ರಂದು ಮನೆ ಹಂಚಿಕೆ ಮಾಡಲಾಗಿತ್ತು.

ಈ ಮನೆಯನ್ನು ತಾನು ಹಂಚಿಕೆ ಮಾಡಿಸಿದ್ದು, ಈ ಸಂಬಂಧ ತನಗೆ 25 ಸಾವಿರ ರೂ. ಹಣ ನೀಡಬೇಕೆಂದು ಲೋಹಿತ್ ಕುಮಾರ್ ಬೇಡಿಕೆ ಇಡುವುದರೊಂದಿಗೆ 5 ಸಾವಿರ ರೂ.ಗಳನ್ನು ಈ ಹಿಂದೆಯೇ ಪಡೆದುಕೊಂಡಿದ್ದಾಗಿ ಹೇಳಲಾಗಿದೆ. ಉಳಿದ ಹಣವನ್ನು ಶುಕ್ರವಾರ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹದಳದ ಮೈಸೂರು ಪೊಲೀಸ್ ಅಧೀಕ್ಷಕಿ ಜೆ.ಕೆ.ರಶ್ಮಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳದ ಉಪ ಅಧೀಕ್ಷಕ ಸದಾನಂದ ತಿಪ್ಪಣ್ಣನವರ್ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಆತ ಪಡೆದ 20 ಸಾವಿರ ನಗದನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ನಿರೀಕ್ಷಕ ಶ್ರೀಧರ್, ಮಹೇಶ್, ಸಿಬ್ಬಂದಿಗಳಾದ ದಿನೇಶ್, ಸಜನ್, ಪ್ರವೀಣ್, ಲೋಹಿತ್, ದೀಪಿಕಾ, ಚಾಲಕರಾದ ಸುರೇಶ್‍ಮ ಮಹಾದೇವ, ನರೂಣ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News